Advertisement

ಅಂಬೇಡ್ಕರ್‌ ಮರೆತಿದ್ದೇ ಕಾಂಗ್ರೆಸ್‌ ಗೆ ಶಾಪವಾಯ್ತು; ನಳೀನ್‌ ಕುಮಾರ್‌ ಕಟೀಲ್‌

02:39 PM Jan 09, 2023 | Team Udayavani |

ಮೈಸೂರು: ದೇಶದಲ್ಲಿ ಕಾಂಗ್ರೆಸ್‌ ಅಂಬೇಡ್ಕರ್‌ ಅವರ ಭಾವಚಿತ್ರ ಇಟ್ಟುಕೊಂಡು ರಾಜಕಾರಣ ಮಾಡಿದೆಯೇ ಹೊರತು ಬೇರೇನೂ ಮಾಡಿಲ್ಲ. ಅಂಬೇಡ್ಕರ್‌ ಅವರನ್ನು ಕಾಂಗ್ರೆಸ್‌ ಮರೆತಿತ್ತು. ಇದೇ ಆ ಪಕ್ಷಕ್ಕೆ ಶಾಪವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement

ನಗರದ ಲಲಿತಮಹಲ್‌ ಪ್ಯಾಲೇಸ್‌ ಹೋಟೆಲ್‌ನಲ್ಲಿ ನಡೆದ ಬಿಜೆಪಿ ದಲಿತ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಮೊದಲಿನಿಂದಲೂ ವಂಶ ಪಾರಂಪರ್ಯ ಆಡಳಿತ ನಡೆಸಿಕೊಂಡು ಬಂದಿದೆ.

ಹಳ್ಳಿಯಿಂದ ಬಂದ ನಾನು ಸೇರಿದಂತೆ ನಗರಪಾಲಿಕೆ ಸದಸ್ಯರಾಗಿದ್ದ ಮುನಿಸ್ವಾಮಿ ಸಂಸದರಾಗಲು ಸಂವಿಧಾನ ಕಾರಣ. ಅದೇ ರೀತಿ ಚಹಾ ಮಾರುವವನೊಬ್ಬ ದೇಶದ ಪ್ರಧಾನಮಂತ್ರಿಯಾಗಿ ಕೆಲಸ ಮಾಡಲು ಸಂವಿಧಾನ ಕೊಟ್ಟ ಕೊಡುಗೆಯಾಗಿದೆ. ಇಂತಹ ಶ್ರೇಷ್ಠ ಸಂವಿಧಾನ ನೀಡಿದವರು ಡಾ.ಬಿ.ಆರ್‌. ಅಂಬೇಡ್ಕರ್‌. ಆದರೆ ಕಾಂಗ್ರೆಸ್‌ ಅಂಬೇಡ್ಕರ್‌ ಅವರ ಭಾವಚಿತ್ರ ಇಟ್ಟುಕೊಂಡು ರಾಜಕಾರಣ ಮಾಡಿದೆಯೇ ಹೊರತು ಬೇರೇನೂ ಮಾಡಿಲ್ಲ ಎಂದು ಕಿಡಿಕಾರಿದರು.

1952 ಮತ್ತು 1954ರ ಲೋಕಸಭಾ ಚುನಾವಣೆಯಲ್ಲಿ ಅಂಬೇಡ್ಕರ್‌ ಅವರನ್ನು ಸೋಲಿಸಿದ ಕಾಂಗ್ರೆಸ್‌, ದೆಹಲಿಯಲ್ಲಿ ಅಂತ್ಯಸಂಸ್ಕಾರಕ್ಕಾಗಿ 6 ಅಡಿ ಜಾಗ ಕೊಡದೆ ಅವಮಾನ ಮಾಡಿತು. ಆದರೆ ಮೋದಿ ಸರ್ಕಾರ ಅವರ ಪಂಚಸ್ಥಳಗಳನ್ನು ಅಭಿವೃದ್ಧಿಪಡಿಸಲು ತೀರ್ಮಾನ ಮಾಡಿ ಗೌರವ ಕೊಡುವ ಕೆಲಸ ಮಾಡುತ್ತಿದೆ ಎಂದರು.

ದೇಶದ ಅಭಿವೃದ್ಧಿ: ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಸಂವಿಧಾನದ ಆಶಯಕ್ಕೆ ತಕ್ಕಂತೆ ಆಡಳಿತ ನಡೆಸಲಾಗುತ್ತಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ರಾಜಾಡಳಿತದಲ್ಲಿ ಸಕ್ಕರೆ ಕಾರ್ಖಾನೆ, ವಿದ್ಯುತ್‌ ಕಾರ್ಖಾನೆ, ವಿಶ್ವವಿದ್ಯಾಲಯ ಮೊದಲಾದ ಕೊಡುಗೆಗಳನ್ನು ನೀಡಿದರೆ, ಈಗ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿ ಮಾಡುತ್ತಿದ್ದಾರೆ. ದೇಶ ಎಲ್ಲ ರಂಗಗಳಲ್ಲೂ ಪ್ರಗತಿ ಹೊಂದುತ್ತಿದೆ ಎಂದು ತಿಳಿಸಿದರು.

Advertisement

ಬಿಜೆಪಿ ಎಸ್‌ಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಲಾಲ್‌ಸಿಂಗ್‌ ಆರ್ಯ, ಕೇಂದ್ರ ಸಚಿವ ವೀರೇಂದ್ರ ಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌, ಬಿಜೆಪಿ ಎಸ್‌.ಸಿ.ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ, ಮೈಸೂರು ನಗರಾಧ್ಯಕ್ಷ ಟಿ.ಎಸ್‌. ಶ್ರೀವತ್ಸ, ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್‌ ಇದ್ದರು.

ಕಾರ್ಯಕಾರಿಣಿ ನಿರ್ಣಯಗಳು
ಪ್ರಮುಖವಾಗಿ ಪ.ಜಾತಿ ಮತ್ತು ಪ.ಪಂಗಡ ಸಮುದಾಯದ ಮೀಸಲಾತಿ ಹೆಚ್ಚಳ, ಕೇಂದ್ರ ಸರ್ಕಾರ ಅಂಬೇಡ್ಕರ್‌ ಜನ್ಮಸ್ಥಳ, ಬೌದ್ಧ ಧರ್ಮ ಸ್ವೀಕರಿಸಿದ ಸ್ಥಳ ಅಭಿವೃದ್ಧಿಪಡಿಸಿದಂತೆ ರಾಜ್ಯದಲ್ಲಿ ಅಂಬೇಡ್ಕರ್‌ ಭೇಟಿ ನೀಡಿದ ಏಳು ಸ್ಥಳಗಳಾದ ಬೆಂಗಳೂರು, ಕೆಜಿಎಫ್, ಧಾರವಾಡ, ಹಾಸನ, ವಿಜಯಪುರ, ಬೆಳಗಾವಿ ಮತ್ತು ಗುಲ್ಬರ್ಗಾ ನಗರಗಳಲ್ಲಿ ಸ್ಮಾರಕ ನಿರ್ಮಾಣಕ್ಕೆ ಪ್ರಾರಂಭಿಕ ಅನುದಾನವಾಗಿ 20 ಕೋಟಿ ನೀಡಿರುವುದು, ಬಡವರಿಗೆ 75 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ನೀಡಿರುವುದು, ರಾಜ್ಯದಲ್ಲಿ ದಲಿತರಿಗಾಗಿ 100 ಹಾಸ್ಟೆಲ್‌ ತೆರೆಯಲು ಅನುದಾನ ಬಿಡುಗಡೆಗೊಳಿಸಿರುವುದನ್ನು ಸ್ವಾಗತಿಸಲಾಗಿದೆ ಎಂದರು.

ಕಾಂಗ್ರೆಸ್‌ನದ್ದು ವಂಶ ಪಾರಂಪರ್ಯ, ಪರಿವಾರ ರಾಜಕಾರಣವಾದರೆ, ನಮ್ಮದು ಅಂಬೇಡ್ಕರ್‌ ಅವರು ನೀಡಿದ ಸಂವಿಧಾನ ಆಶಯದ ಆಡಳಿತ.
● ನಳೀನ್‌ ಕುಮಾರ್‌ ಕಟೀಲ್‌,
ರಾಜ್ಯಾಧ್ಯಕ್ಷ ಬಿಜೆಪಿ

Advertisement

Udayavani is now on Telegram. Click here to join our channel and stay updated with the latest news.

Next