ಹೊಸದಿಲ್ಲಿ: ದಿಲ್ಲಿ ವಿಧಾನಸಭೆ ಚುನಾವಣೆ ಕಾವು ಹೆಚ್ಚಾಗುತ್ತಿದ್ದಂತೆ, ಆಪ್, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಗ್ಯುದ್ಧವೂ ಹೆಚ್ಚಾಗಿದೆ. ಆದರೆ ಐಎನ್‌ಡಿಐಎ ಮೈತ್ರಿಕೂಟದಲ್ಲಿದ್ದುಕೊಂಡೇ ಕಾಂಗ್ರೆಸ್ ಹಾಗೂ ಆಪ್ ಬಹಿರಂಗವಾಗಿ ಜಗಳಕ್ಕಿಳಿದಿರುವುದು ಸೋಜಿಗವನ್ನುಂಟು ಮಾಡಿದೆ.
ಮಂಗಳವಾರ ಕೇಜ್ರಿವಾಲ್ ವಿರುದ್ಧ ವಾಗ್ಧಾಳಿ ನಡೆಸಿದ ರಾಹುಲ್ ಗಾಂಧಿ, “ಕೇಜ್ರಿವಾಲ್ ನೀಡಿದ ಯಾವುದೇ ಭರವಸೆ ಈಡೇರಿಸಿಲ್ಲ. ದಿಲ್ಲಿಯನ್ನು ಪ್ಯಾರಿಸ್ ಮಾಡುವುದಾಗಿ ಹೇಳಿ, ಏನೂ ಮಾಡಿಲ್ಲ’ ಎಂದಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕೇಜ್ರಿವಾಲ್, “ರಾಹುಲ್ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಅವರು ಕೇವಲ ಪಕ್ಷ ಉಳಿಸಲು ಹೋರಾಡುತ್ತಿದ್ದಾರೆ. ನಾನು ದೇಶಕ್ಕಾಗಿ ಹೋರಾಡುತ್ತಿದ್ದೇನೆ’ ಎಂದಿದ್ದಾರೆ.
ಕಾಂಗ್ರೆಸ್‌ನಿಂದ ವೀಡಿಯೋ ಬಿಡುಗಡೆ: ಈಗಾಗಲೇ ಮೀಸಲಾತಿ ಲಾಭ ಪಡೆದ ಕುಟುಂಬಕ್ಕೆ ಮತ್ತೆ ಮೀಸಲಾತಿ ಸಿಗಬಾರದು ಎಂದು ಕೇಜ್ರಿವಾಲ್ ಈ ಹಿಂದೆ ಅಭಿಪ್ರಾಯಪಟ್ಟಿದ್ದ ವೀಡಿಯೋವೊಂದನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. “ಮೀಸಲಾತಿಗೆ ಸಂಬಂಧಿಸಿ ಕೇಜ್ರಿವಾಲ್ ನಿಲುವು ಏನು? ಜಾತಿಗಣತಿ, ಶೇ.50ರ ಮೀಸಲಾತಿ ಮಿತಿ ರದ್ದು ವಿಷಯದ ಬಗ್ಗೆ ಕೇಜ್ರಿ ಏಕೆ ಏನೂ ಮಾತನಾಡುತ್ತಿಲ್ಲ ಎಂಬುದು ಇದರಿಂದ ಅರ್ಥವಾಗುತ್ತದೆ’ ಎಂದು ಜೈರಾಂ ರಮೇಶ್ ಹೇಳಿದ್ದಾರೆ.
ಮತ ಗಳಿಸಲು ಬಿಜೆಪಿ ಚಿನ್ನ, ಹಣ ಹಂಚುತ್ತಿದೆ: ಕೇಜ್ರಿ
ಮತದಾರರನ್ನು ಸೆಳೆಯಲು ಬಿಜೆಪಿ, ಹಣ, ಚಿನ್ನದ ಸರಗಳನ್ನು ಹಂಚಿಕೆ ಮಾಡುತ್ತಿದೆ ಎಂದು ಆಪ್ ನಾಯಕ ಕೇಜ್ರಿವಾಲ್ ಆರೋಪಿಸಿದ್ದಾರೆ. “ಬಿಜೆಪಿ ಬಳಿ ಯಾವುದೇ ಆಯುಧಗಳಿಲ್ಲ, ದೂರದೃಷ್ಟಿಯಿಲ್ಲ, ಮುಖ್ಯಮಂತ್ರಿ ಅಭ್ಯರ್ಥಿಯಿಲ್ಲ. ದಿಲ್ಲಿಯ 2 ಕಾಲನಿ ಗಳಲ್ಲಿ ಅವರು ಚಿನ್ನದ ಸರಗಳನ್ನು ಹಂಚುತ್ತಿದ್ದಾರೆ ಎಂಬ ವಿಷಯ ತಿಳಿದುಬಂದಿದೆ. ಓಟುಗಳನ್ನು ಖರೀದಿಸುವುದಾಗಿ ಬಿಜೆಪಿ ಹೇಳುತ್ತಿದೆ. ದಿಲ್ಲಿಯ ಜನ ಹಣದ ಆಮಿಷ ಒಡ್ಡುವ ಯಾರಿಗೂ ಮತ ಹಾಕ ಬಾರದು. ಅದು ಆಪ್ ಅಭ್ಯರ್ಥಿಯಾದರೂ ಸರಿ’ ಎಂದು ಅವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ಕೇಜ್ರಿವಾಲ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರು ಪದೇ ಪದೇ ದಿಲ್ಲಿ ಜನರನ್ನು ಅವಮಾನಿಸುತ್ತಿದ್ದಾರೆ. ದಿಲ್ಲಿಯಲ್ಲಿ ಕೆಟ್ಟ ಪರಿಸ್ಥಿತಿ ಉದ್ಭವವಾಗಲು ಅವರ ಆಡಳಿತವೇ ಕಾರಣ ಎಂದಿದೆ.