ಶಿಮ್ಲಾ: ದೇಶದ ಹತ್ತು ಲಕ್ಷ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಇರುವ ಮತದಾರರನ್ನು ಸಂಪರ್ಕಿಸುವ ಕಾಂಗ್ರೆಸ್‌ನ ಅಭಿಯಾನ ಜ.26ರಿಂದ ಶುರುವಾಗಿದೆ.
ಕೈಗೆ ಕೈಗೆ ಜೋಡಿಸೋಣ (ಹಾಥ್ ಸೆ ಹಾಥ್ ಜೋಡೋ) ಎಂಬ ಧ್ಯೇಯವಾಕ್ಯದಡಿ ಅದನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಮುಖ್ಯಸ್ಥ, ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಹೇಳಿದ್ದಾರೆ.
ಶಿಮ್ಲಾದಲ್ಲಿ ಮಾತನಾಡಿದ ಅವರು, ದೇಶದ 2.5 ಲಕ್ಷ ಗ್ರಾಮ ಪಂಚಾಯಿತಿಗಳಲ್ಲಿ ಇರುವ 10 ಲಕ್ಷ ಮತಗಟ್ಟೆಗಳ ಮತದಾರರನ್ನು ಜ.26ರಿಂದ ಸಂಪರ್ಕಿಸಲಾಗುತ್ತದೆ. ಮಾ.26ರ ವರೆಗೆ ಅಭಿಯಾನ ನಡೆಯಲಿದೆ. ಅದರಲ್ಲಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರು ನೇರವಾಗಿ ಮತದಾರರನ್ನು ಉದ್ದೇಶಿಸಿ ಪತ್ರ ಬರೆಯಲಿದ್ದಾರೆ. ಪತ್ರದಲ್ಲಿ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು, ವೈಫಲ್ಯಗಳ ವಿಸ್ತೃತ ವಿವರ ಇರಲಿದೆ ಎಂದಿದ್ದಾರೆ.
ಭಾರತ್ ಜೋಡೋ ಯಾತ್ರೆ ಚುನಾವಣೆಗೆ ಸಂಬಂಧಿಸಿದ್ದು ಅಲ್ಲ. ಅದು ಕೇವಲ ತತ್ವಗಳಿಗಾಗಿ ನಡೆಸುವ ಹೋರಾಟ ಎಂದರು. ಸಾಮಾಜಿಕ ಧ್ರುವೀಕರಣ, ಆರ್ಥಿಕ ಅಸಮಾನತೆ, ಬಿಜೆಪಿ ಮತ್ತು ಆರ್‌ಎಸ್‌ಎಸ್ ನಡೆಸುತ್ತಿರುವ ರಾಜಕೀಯ ನಿರಂಕುಶಾಧಿಕಾರ ಹಾಗೂ ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಡೆಸುತ್ತಿರುವ ದಾಳಿಯನ್ನು ಖಂಡಿಸಿ ಕೈಗೊಳ್ಳಲಾಗಿದೆ ಎಂದರು.