ಬೆಂಗಳೂರು: ಪೆಟ್ರೋಲ್- ಡೀಸೆಲ್ ಮೇಲಿನ ತೆರಿಗೆಯಿಂದಲೇ ಕೇಂದ್ರ ಸರಕಾರಕ್ಕೆ ಕಳೆದ 8 ವರ್ಷಗಳಲ್ಲಿ 26 ಲಕ್ಷ ಕೋಟಿ ರೂ. ಆದಾಯ ಬಂದಿದ್ದು, ಈ ಪೈಕಿ ಕರ್ನಾಟಕದಿಂದಲೇ 55 ಸಾವಿರ ಕೋಟಿ ರೂ. ಹೋಗಿದೆ. ಆದರೂ ಸಾಮಾನ್ಯರಿಂದ ಸುಲಿಗೆ ನಿಲ್ಲುತ್ತಿಲ್ಲ. ಜನರ ಬಗ್ಗೆ ನಿಜವಾಗಿಯೂ ಸರಕಾರಕ್ಕೆ ಕಳಕಳಿ ಇದ್ದರೆ ಈ ತೆರಿಗೆ ಪ್ರಮಾಣವನ್ನು ತಗ್ಗಿಸಬೇಕು ಎಂದು ಕೆಪಿಸಿಸಿ ಆಗ್ರಹಿಸಿದೆ.
ಕೆಪಿಸಿಸಿ ಕಚೇರಿಯಲ್ಲಿ ರವಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಎಂಟು ವರ್ಷಗಳ ಹಿಂದೆಯೂ ಕಚ್ಚಾತೈಲ ಬೆಲೆ ಪ್ರತಿ ಬ್ಯಾರಲ್‌ಗೆ 108 ಡಾಲರ್ ಇತ್ತು (ಈಗಲೂ ಇಷ್ಟೇ ಇದೆ). ಆಗ ಪೆಟ್ರೋಲ್ ಬೆಲೆ ಲೀ.ಗೆ 71.41 ರೂ. ಹಾಗೂ ಡೀಸೆಲ್ ಲೀ.ಗೆ 51.49 ರೂ. ಇತ್ತು. ಈಗ ಅದು ಕ್ರಮವಾಗಿ ಶೇ. 203 ಹಾಗೂ ಶೇ. 531ರಷ್ಟು ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಕಾರ್ಪೊರೇಟ್ ತೆರಿಗೆ ಶೇ. 35ರಿಂದ ಶೇ. 23ಕ್ಕೆ ಇಳಿಕೆ ಮಾಡಲಾಗಿದೆ. ಆದರೆ, ಸಾಮಾನ್ಯರ ಮೇಲೆ ನಡೆಸುತ್ತಿರುವ ಈ ಶೋಷಣೆ ಮುಚ್ಚಿಹಾಕಲು ಹಿಜಾಬ್, ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಣೆ, ಕಾಶ್ಮೀರ ಫೈಲ್ಸ್, ಹಲಾಲ್ ಕಟ್‌ನಂತಹ ಕೋಮುವಾದದ ವಿಷಯಗಳನ್ನು ಮುನ್ನೆಲೆಗೆ ತರಲಾಗುತ್ತಿದೆ. ಇವರಿಗೆ (ಸರಕಾರಕ್ಕೆ) ಮನುಷ್ಯತ್ವ ಇದೆಯೇ ಎಂದು ತರಾಟೆಗೆ ತೆಗೆದುಕೊಂಡರು.
ತೈಲ ಕಂಪೆನಿಗಳು ತಮ್ಮ ಹಿಡಿತದಲ್ಲಿಲ್ಲ. ಸ್ವಾಯತ್ತ ಸಂಸ್ಥೆಗಳು ಎಂದು ಕೇಂದ್ರ ಸರಕಾರ ಸಮಜಾಯಿಷಿ ನೀಡಬಹುದು. ಆದರೆ, ನವೆಂಬರ್‌ನಿಂದ ಫೆಬ್ರವರಿ ಅಂತ್ಯದವರೆಗೆ ಬೆಲೆ ಏರಿಕೆ ಆಗಲಿಲ್ಲ. ಪಂಚರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆ ತೈಲ ಬೆಲೆ ಏರಿಕೆ ಆಗುತ್ತದೆ. ಇದರರ್ಥ ಏನು ಎಂದು ಪ್ರಶ್ನಿಸಿದರು.
ನಿತ್ಯ “ಪಿಕ್-ಪಾಕೆಟ್’ :
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಪೆಟ್ರೋಲ್-ಡೀಸೆಲ್ ಮತ್ತು ಅಡುಗೆ ಅನಿಲ ದರ ಏರಿಕೆಯಿಂದ ಸಾಮಾನ್ಯ ವ್ಯಕ್ತಿಗೆ ಪ್ರತಿ ತಿಂಗಳು ಸುಮಾರು ಮೂರು ಸಾವಿರ ರೂ. ಹೆಚ್ಚುವರಿ ಹೊರೆ ಆಗುತ್ತಿದೆ. ಆದರೆ, ಸಾಮಾನ್ಯ ಜನ ಪಡೆಯುತ್ತಿರುವ ವೇತನ ಮಾತ್ರ ಅಷ್ಟೇ ಇದೆ. ನಿತ್ಯ ಒಂದಿಲ್ಲೊಂದು ರೀತಿಯಿಂದ ಕೇಂದ್ರ ಸರಕಾರವು ಜನರ “ಪಿಕ್-ಪಾಕೆಟ್’ ಮಾಡುತ್ತಿದೆ. ತೆರಿಗೆ ಹೆಸರಿನಲ್ಲಿ ನಡೆಯುತ್ತಿರುವ ಈ ಗದಾಪ್ರಹಾರವನ್ನು ಗಂಭೀರವಾಗಿ ಪರಿಗಣಿಸಿ, ಹೋರಾಟ ನಡೆಸಲು ಪಕ್ಷ ತೀರ್ಮಾನಿಸಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಉಪಸ್ಥಿತರಿದ್ದರು.