Advertisement

ಮೇಕೆದಾಟು ಯೋಜನೆ: ಏನೇ ಆದರೂ ಯಾತ್ರೆ ನಿಲ್ಲಿಸೆವು: ಡಿಕೆಶಿ

11:50 PM Jan 07, 2022 | Team Udayavani |

ಮೇಕೆದಾಟು ಯೋಜನೆ ತ್ವರಿತ ಅನುಷ್ಠಾನಕ್ಕೆ ಆಗ್ರಹಿಸಿ ಪಾದಯಾತ್ರೆ ಮಾಡಿಯೇ ಸಿದ್ಧ ಎನ್ನುತ್ತಿರುವ ಕಾಂಗ್ರೆಸ್‌ ನಾಯಕರು ಶನಿವಾರ ಕನಕಪುರ ತಲುಪಲಿದ್ದಾರೆ. ಇದರ ನಡುವೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು “ಉದಯವಾಣಿ’ಗೆ ವಿಶೇಷ ಸಂದರ್ಶನ ನೀಡಿದ್ದು, ಪಾದಯಾತ್ರೆ ಕುರಿತು ತಮ್ಮ ನಿಲುವುಗಳನ್ನು ಬಿಚ್ಚಿಟ್ಟಿದ್ದಾರೆ.

Advertisement

ಪಾದಯಾತ್ರೆ ಮೂಲಕ ಸಿಎಂ ಆಗಲು ಹೊರಟಿದ್ದೀರಾ?
ನನಗೆ ರಾಜ್ಯದ ಜನರ ಹಿತ ಮುಖ್ಯ. ಪದವಿ ಅಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುದು ಗುರಿ. 2023ರ ಚುನಾವಣೆಯಲ್ಲಿ ಅದರ ಸಾಧಿಸುತ್ತೇವೆ. ಎಲ್ಲ ಪಕ್ಷ, ಸಂಘ-ಸಂಸ್ಥೆ, ಚಲನಚಿತ್ರ ರಂಗ, ರಾಜ್ಯದ ಎಲ್ಲ ಸ್ವಾಮೀಜಿಯವರಿಗೆ ಮನವಿ ಮಾಡಿದ್ದೇನೆ. ಮುಖ್ಯಮಂತ್ರಿಯವರೂ ಬಂದು ಪಾಲ್ಗೊಳ್ಳಲಿ. ಇಲ್ಲಿ ಕಾಂಗ್ರೆಸ್‌ ಪ್ರಶ್ನೆಯಲ್ಲ, ಜನ ಹಾಗೂ ಅವರಿಗೆ ಬೇಕಾದ ನೀರು ಅಷ್ಟೇ.

ನಿಮ್ಮ ಯಾತ್ರೆ ಒಂದು ರೀತಿಯಲ್ಲಿ ನಾ ಕೊಡೆ, ನೀ ಬಿಡೆ ಎಂಬಂತಾಗಿದೆಯಲ್ಲ?
ನೀರಿಗಾಗಿ ನಾವು ನಡೆಯುತ್ತೇವೆ. ಇದಕ್ಕೆ ಯಾರ ಅನುಮತಿಯೂ ಬೇಕಿಲ್ಲ. ನಾವೇನೂ ಜನರ ಜಾತ್ರೆ ಮಾಡಲು ಹೊರಟಿಲ್ಲ, ಒಂದು ಸ್ಪಷ್ಟ ಉದ್ದೇಶಕ್ಕಾಗಿ ಜನರ ಒಳಿತಿಗಾಗಿ ನಡಿಗೆ ಹಮ್ಮಿಕೊಂಡಿದ್ದೇವೆ. ಸರಕಾರ ತಿಪ್ಪರಲಾಗ ಹಾಕಿದರೂ ನಾವು ನಿಲ್ಲಿಸುವುದಿಲ್ಲ. ನಾನು ನಮ್ಮ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಇಬ್ಬರಾದರೂ ಹೊರಡುತ್ತೇವೆ.

ನಾಯಕತ್ವಕ್ಕಾಗಿ ಪಾದಯಾತ್ರೆ ನಡೆಯುತ್ತಿದೆ ಎಂದು ನಳಿನ್‌ ಕುಮಾರ್‌ ಹೇಳಿದ್ದಾರಲ್ಲ?
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಏನೇನೋ ಕನಸು ಬೀಳುತ್ತಿರುತ್ತದೆ. ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರನ್ನು ನೋಡಿದರೆ ಅವರಿಗೆ ನಡುಕ ಬರುತ್ತದೆ. ಆಗ ಇಂತಹ ಅಪ್ರಬುದ್ಧ ಮಾತುಗಳು ಹೊರಬರುತ್ತವೆ.

ಮೇಕೆದಾಟು ಯೋಜನೆಗೆ ಮಾತ್ರ ದಿಢೀರ್‌ ಯಾತ್ರೆ ಯಾಕೆ ?
ಇದೊಂದೇ ಅಲ್ಲ, ಕೃಷ್ಣಾ ಮೇಲ್ದಂಡೆ 3ನೇ ಹಂತ, ಮಹಾದಾಯಿ ಹೀಗೆ ರಾಜ್ಯದ ಜನತೆಗೆ ಒಳಿತಾಗುವ ಎಲ್ಲ ಯೋಜನೆ ಬಗ್ಗೆಯೂ ಹೋರಾಟ ಇರುತ್ತದೆ.

Advertisement

ಯಾರಿಗೂ ತಡೆಯಲಾಗದು
ತಲಕಾವೇರಿಯಲ್ಲಿ ಪೂಜೆ ಮಾಡಿ ನಾಡದೇವತೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿ ಸಂಕಲ್ಪ ತೊಟ್ಟು ಯಾತ್ರೆ ಹೊರಟಿದ್ದೇವೆ. ಯಾವುದೇ ಶಕ್ತಿ ನಮ್ಮನ್ನು ತಡೆಯಲಾಗದು. ಮೇಕೆದಾಟು ಯೋಜನೆ ಕಾಂಗ್ರೆಸ್‌ ಪಕ್ಷದ ಬದ್ಧತೆ ಮತ್ತು ಸಂಕಲ್ಪವಾಗಿದೆ. ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಡಿಪಿಆರ್‌ ಸಿದ್ಧವಾಗಿ ಕೇಂದ್ರದ ತಾತ್ವಿಕ ಒಪ್ಪಿಗೆಯೂ ದೊರೆತಿದೆ. ರಾಜ್ಯ ಬಿಜೆಪಿ ಸರಕಾರ ಅನುಷ್ಠಾನ ಮಾಡುವ ಇಚ್ಛಾಶಕ್ತಿ ತೋರುತ್ತಿಲ್ಲ.

ಕಾಂಗ್ರೆಸ್‌ ಸುಳ್ಳು ನಿಲ್ಲಿಸಲಿ: ಕಾರಜೋಳ
ಪಾದಯಾತ್ರೆಗೆ ವಿರೋಧ ಯಾಕೆ?
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಪಾದಯಾತ್ರೆ ಮಾಡ ಬಹುದು. ಆದರೆ, ಈಗ ಕೊರೊನಾ ಹೆಚ್ಚುತ್ತಿದೆ. ಅವರು ಕೊರೊನಾ ನಿಯಮ ಮೀರಿ ಪಾದಯಾತ್ರೆ ಮಾಡಬಾರದು ಎನ್ನುತ್ತಿದ್ದೇವೆ.

ಪಾದಯಾತ್ರೆಯಿಂದ ನಿಮ್ಮ ಸರಕಾರ ಹಾಗೂ ಪಕ್ಷಕ್ಕೆ ಹಿನ್ನಡೆಯಾಗುತ್ತದೆಯೇ?
ನಮ್ಮ ಸರಕಾರ ಮತ್ತು ಪಕ್ಷಕ್ಕೆ ಯಾವುದೇ ಆತಂಕ ಇಲ್ಲ. ಕಾಂಗ್ರೆಸ್‌ನವರ ಪಾದಯಾತ್ರೆ ಜನರ ಹಿತದೃಷ್ಟಿಯಿಂದ ಕೂಡಿಲ್ಲ. ರಾಜಕೀಯ ಲಾಭಕ್ಕಾಗಿ ಈ ಗಿಮಿಕ್‌ ಮಾಡುತ್ತಿದ್ದಾರೆ.

ನಾವೇ ಡಿಪಿಆರ್‌ ಕಳಿಸಿದ್ದೇವೆ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರಲ್ಲ?
2013-18ರವರೆಗೆ ಕಾಂಗ್ರೆಸ್‌ ಕುಂಭಕರ್ಣ ನಿದ್ದೆಯಲ್ಲಿತ್ತು. 2019ರ ಜನವರಿಯಲ್ಲಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಡಿಪಿಆರ್‌ ಕಳುಹಿಸಲಾಗಿದೆ.

ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾ ದರೂ ನೀವೇನೂ ಮಾಡಿಲ್ಲವಲ್ಲ?
ನಾವು ಅಧಿಕಾರಕ್ಕೆ ಬಂದ ಮೇಲೆ ಯೋಜನೆ ಜಾರಿಗೆ ಪ್ರಯತ್ನ ನಡೆಸಿದ್ದೇವೆ. ಸಿಡಬ್ಲ್ಯುಸಿಗೆ ಡಿಪಿಆರ್‌ ಕಳುಹಿಸಿಕೊಟ್ಟಿದ್ದೇವೆ. ಜಲ ಸಂಪನ್ಮೂಲ ಇಲಾಖೆಯ ವಿವಿಧ ಹಂತಗಳಲ್ಲಿ ಸಿಡಬ್ಲ್ಯೂಸಿ ಡೈರೆಕ್ಟರೇಟ್‌ ಕಮಿಟಿಯಲ್ಲಿ ಪರಿಶೀಲಿಸಿ ಕಾವೇರಿ ನಿರ್ವಹಣ ಪ್ರಾಧಿಕಾರಕ್ಕೆ ಕಳುಹಿಸಿದ್ದಾರೆ. ಅವರು ತಮ್ಮ ಅಭಿಪ್ರಾಯ ತಿಳಿಸು ವಂತೆ ಸಿಡಬ್ಲ್ಯುಸಿ ತಿಳಿಸಿದೆ. ಈ ನಡುವೆ ತಮಿಳು ನಾಡು ಸುಪ್ರಿಂ ಕೋರ್ಟ್‌ ಮೆಟ್ಟಿಲೇರಿದ್ದು, ಜ.25ಕ್ಕೆ ವಿಚಾರಣೆಗೆ ಬರಲಿದೆ.

 ಜ.9ರಂದು ನೀವು ಸಂಗಮದಲ್ಲಿ ಪೂಜೆ ಮಾಡಿ, ದಾಖಲೆ ಬಿಡುಗಡೆ ಮಾಡುತ್ತೀರಾ?
ಇಲ್ಲ. ಯಾವುದೇ ಪೂಜೆ ಮಾಡುತ್ತಿಲ್ಲ. ಇದನ್ನು ಕಾಂಗ್ರೆಸ್‌ನವರು ಹಬ್ಬಿಸುತ್ತಿರಬಹುದು. ಆದಷ್ಟು ಬೇಗ ಯೋಜನೆಗೆ ಒಪ್ಪಿಗೆ ಪಡೆಯಲು ಪ್ರಯತ್ನ ನಡೆಸುತ್ತೇವೆ.

ಪ್ರಾಮಾಣಿಕ ಪ್ರಯತ್ನ
ಮೇಕೆದಾಟು ವಿಚಾರ ರಾಜಕೀಯವಾಗಿ ಪರಿಣಾಮ ಬೀರುತ್ತದೆಯೋ ಇಲ್ಲ ಎನ್ನುವುದಕ್ಕಿಂತ ನಮ್ಮ ರಾಜ್ಯದ ಜನರಿಗೆ ನೀರು ಕೊಡಲು ನಮ್ಮ ಸರಕಾರ ಪ್ರಾಮಾಣಿಕ ಪ್ರಯತ್ನ ನಡೆಸುತ್ತದೆ. ರಾಜ್ಯದ ಹಿತಾಸಕ್ತಿಯಿಂದ ನಮ್ಮ ಪಾಲಿನ ನೀರು ಬಳಸಿಕೊಳ್ಳಲು ಸರಕಾರ ಹಿಂದೆ ಬೀಳುವುದಿಲ್ಲ. ಕಾಂಗ್ರೆಸ್‌ನವರಂತೆ ಐದು ವರ್ಷ ತಲೆದಿಂಬಿಗೆ ಇಟ್ಟುಕೊಂಡು ಮಲಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next