Advertisement

ಕೈ’ಕಾರ್ಯತಂತ್ರ ಬದಲಾವಣೆಗೆ ಚಿಂತನೆ 

12:30 AM Mar 03, 2019 | |

ಬೆಂಗಳೂರು: ಪುಲ್ವಾಮಾದಲ್ಲಿ ಉಗ್ರರ ದಾಳಿ ನಂತರ ಭಾರತೀಯ ಯೋಧರು ಪಾಕಿಸ್ತಾನದ ಮೇಲೆ ವೈಮಾನಿಕ ದಾಳಿ ನಡೆಸಿರುವ ಪ್ರಕರಣ ರಾಜಕೀಯವಾಗಿ ಕಾಂಗ್ರೆಸ್‌ಗೆ ಆತಂಕ ಉಂಟು ಮಾಡಿದ್ದು, ಯೋಧರು ಮತ್ತು ಉಗ್ರರ ದಾಳಿಯಲ್ಲಿ ಕೇಂದ್ರ ಸರ್ಕಾರದ ಪಾತ್ರದ ಬಗ್ಗೆ ಯಾವುದೇ ರೀತಿಯ ಹೇಳಿಕೆ ನೀಡದಂತೆ ಕಾಂಗ್ರೆಸ್‌ ಹೈಕಮಾಂಡ್‌ ಪಕ್ಷದ ನಾಯಕರಿಗೆ ಸೂಚಿಸಿದೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿರುವಾಗಲೇ ನಡೆದ ಪುಲ್ವಾಮಾ ಘಟನೆ ಹಾಗೂ ನಂತರದ ಬೆಳವಣಿಗೆಗಳು ರಾಜಕೀಯ ಲೆಕ್ಕಾಚಾರಗಳನ್ನು ಅದಲು ಬದಲು ಮಾಡಿದೆ.

Advertisement

ಉಗ್ರರ ದಾಳಿಯ ನಂತರ ಕೇಂದ್ರ ಸರ್ಕಾರ ಕೈಗೊಳ್ಳುವ ಕ್ರಮಗಳಿಗೆ ಕಾಂಗ್ರೆಸ್‌ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, ಪಾಕಿಸ್ತಾನ ಹಾಗೂ ಉಗ್ರರ ವಿರುದ್ಧ  ಯಾವುದೇ ರೀತಿಯ ತೀರ್ಮಾನ ತೆಗೆದುಕೊಂಡರೂ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದೆ. ಆದರೆ, ವೈಮಾನಿಕ ದಾಳಿ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲವಾಗುವಂತಾದರೆ, ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂಬ ಗೊಂದಲದಲ್ಲಿ ಕಾಂಗ್ರೆಸ್‌ ನಾಯಕರಿದ್ದಾರೆ.

ಪುಲ್ವಾಮಾ ಘಟನೆ ಸಂಭವಿಸಿದ ಆರಂಭದಲ್ಲಿ ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆಯ ವೈಫ‌ಲ್ಯ ಎಂದು ಆರೋಪಿಸಲು ಮುಂದಾಗಿದ್ದ ಕಾಂಗ್ರೆಸ್‌ಗೆ ಅದು ತನಗೇ ತಿರುಗುಬಾಣವಾಗುತ್ತದೆಂಬ ವಾತಾವರಣ ಮೂಡಿದ ನಂತರ ತನ್ನ ದಾಟಿ ಬದಲಿಸಿತ್ತು. ಬಾಲಕೋಟ್‌ ಮೇಲಿನ ದಾಳಿ ಹಾಗೂ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಬಿಡುಗಡೆ ವಿಷಯದಲ್ಲಿ ಸಂಪೂರ್ಣ ಕೇಂದ್ರದ ಪರವಾಗಿಯೇ ಧ್ವನಿಗೂಡಿಸಿದ್ದು, ಈ ವಿಷಯ ಚುನಾವಣೆಗೂ ಮೊದಲು ಶಾಂತವಾದರೆ ಅನುಕೂಲ ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌ .ಯಡಿಯೂರಪ್ಪ ಸೈನ್ಯದ ಸಾಧನೆಯನ್ನು ನೇರವಾಗಿಯೇ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವಂತೆ ಮಾತನಾಡಿದ್ದು, ಕಾಂಗ್ರೆಸ್‌ಗೆ ಈ ವಿಷಯದಲ್ಲಿ ಬಿಜೆಪಿ ವಿರುದ್ಧ  ಮಾತನಾಡಲು ಸ್ವಲ್ಪ ಅವಕಾಶ ದೊರೆತಿದೆ. ಆದರೆ, ಈ ಸಂದರ್ಭದಲ್ಲಿ ಸೈನಿಕರು ಹಾಗೂ ಕೇಂದ್ರ ಸರ್ಕಾರದ ವಿರುದ್ಧ  ಬಹಿರಂಗ ಹೇಳಿಕೆ ನೀಡುವುದು ಪಕ್ಷಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬ ಲೆಕ್ಕಾಚಾರ ಪಕ್ಷದ್ದು. ಹಾಗಾಗಿ ಆದಷ್ಟು ಈ ವಿಷಯದಿಂದಅಂತರ ಕಾಯ್ದುಕೊಂಡು, ಚುನಾವಣೆಗೂ ಮೊದಲು ತಣ್ಣಗಾದರೆ ಸಾಕು ಎನ್ನುವ ಹಂತಕ್ಕೆ ಕಾಂಗ್ರೆಸ್‌ ಬಂದಂತಿದೆ.

ಚುನಾವಣೆ ಪ್ರಚಾರದ ಅಸ್ತ್ರ : ಕಳೆದ ಐದು ವರ್ಷದಲ್ಲಿ ಸಾಕಷ್ಟು ಭರವಸೆಗಳನ್ನು ನೀಡಿದ್ದ ಮೋದಿ, ಜನತೆಯ ಸಂಕಷ್ಟಕ್ಕೆ ಸ್ಪಂದಿಸಿಲ್ಲ ಎಂದು ಪ್ರಮುಖವಾಗಿ ಮೋದಿ ಸರ್ಕಾರದ ಪ್ರಮುಖ ಹತ್ತು ವೈಫ‌ಲ್ಯಗಳನ್ನೇ ಚುನಾವಣೆಯ ಪ್ರಮುಖ ಅಸ್ತ್ರಗಳನ್ನಾಗಿ ಮಾಡಿಕೊಳ್ಳಲು ಕಾಂಗ್ರೆಸ್‌ ಸಿದ್ಧತೆ ಮಾಡಿಕೊಂಡಿದೆ. ನೋಟು ಅಮಾನ್ಯ, ಅವೈಜ್ಞಾನಿಕವಾಗಿ ಜಿಎಸ್‌ಟಿ ಜಾರಿ, ನಿರುದ್ಯೋಗ ನಿವಾರಣೆ ಮಾಡದಿರುವುದು, ಸಾಲ ಮನ್ನಾ ಯೋಜನೆಗೆ ಸಹಕಾರ ನೀಡುವುದು, ರಫೇಲ್‌ ಯುದ್ಧ  ವಿಮಾನ ಖರೀದಿಯಲ್ಲಿ ಹಗರಣ ನಡೆದಿರುವ ಆರೋಪಗಳಡಿ ಕೇಂದ್ರ ಸರ್ಕಾರವನ್ನು ಗುರಿಯಾಗಿರಿಸಿಕೊಂಡು ಚುನಾವಣೆ ಎದುರಿಸಲು ಕಾಂಗ್ರೆಸ್‌ ಸಿದಟಛಿತೆ ಮಾಡಿಕೊಂಡಿತ್ತು. ಈಗ ಉಗ್ರರ ದಾಳಿಗೆ ಪ್ರತಿಯಾಗಿ ವೈಮಾನಿಕ ದಾಳಿ ನಡೆಸಿ ಭಾರತೀಯ ವಾಯುಪಡೆ ತಿರುಗೇಟು ನೀಡಿದೆ. ಇದಕ್ಕೆ ಮೋದಿಯವರ ದಿಟ್ಟ ನಿರ್ಧಾರ ಕಾರಣವೆಂಬ ವಾತಾವರಣ ಮೂಡುವಂತೆ ಬಿಜೆಪಿ ಬಿಂಬಿಸುತ್ತಿದ್ದು, ಈ ವಿಷಯದಲ್ಲಿ ಮೋದಿ ವಿರುದ್ಧ  ಮಾತನಾಡಿದರೆಚುನಾವಣೆಯಲ್ಲಿಮುಳುವಾಗುವ ಸಾಧ್ಯತೆಯಿದೆ ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿವೆ.

ಕಾದು ನೋಡುವ ತಂತ್ರ
ಉಗ್ರರ ಅಡಗುತಾಣಗಳ ಮೇಲೆ ವೈಮಾನಿಕ ದಾಳಿ ಹಾಗೂ ಅಭಿನಂದನ್‌ ಸುರಕ್ಷಿತ ಬಿಡುಗಡೆ ವಿಷಯ ಚುನಾವಣೆವರೆಗೂ ಜೀವಂತವಾಗಿದ್ದರೆ, ಅದರ ವಿರುದಟಛಿ ಯಾವ ತಂತ್ರ ಬಳಸಬೇಕು ಎನ್ನುವ ಕುರಿತು ಕಾಂಗ್ರೆಸ್‌ ನಾಯಕರು ಗೊಂದಲಕ್ಕೀಡಾಗಿದ್ದಾರೆ. ಹೀಗಾಗಿ, ಈ ವಿಷಯ ತಣ್ಣಗಾಗುವವರೆಗೂ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ ಎನ್ನಲಾಗುತ್ತಿದೆ.

Advertisement

ಹೊಸ ಭರವಸೆಗಳ ಲೆಕ್ಕಾಚಾರ 
ಚುನಾವಣೆ ಸಂದರ್ಭದಲ್ಲಿ ಪಾಕಿಸ್ತಾನದ ಮೇಲೆ ವೈಮಾನಿಕ ದಾಳಿಮಾಡಿರುವ ವಿಷಯ ಬಿಜೆಪಿಗೆ ಹೆಚ್ಚಿನ ಪ್ರಮಾಣದಲ್ಲಿ ಅನುಕೂಲವಾಗುವಂತೆ ಕಂಡು ಬಂದರೆ, ಅದರ ಬದಲು ರಾಹುಲ್‌ ಗಾಂಧಿಯವರ ಕನಸಿನ ಭಾರತದ ಬಗ್ಗೆ ಅಭಿವೃದಿಟಛಿ ಪರ ವಿಚಾರಗಳನ್ನು ಜನರ ಮುಂದಿಡುವ ಕಾರ್ಯತಂತ್ರ ರೂಪಿಸಲು ಕಾಂಗ್ರೆಸ್‌ ನಾಯಕರು ಚಿಂತಿಸಿದ್ದಾರೆ. ಎಲ್ಲರಿಗೂ ಕನಿಷ್ಠ ಆದಾಯ ನೀತಿ ಜಾರಿ, ದೇಶದ ಕೊಳೆಗೇರಿ ನಿವಾಸಿಗಳಿಗೆ ಅಧಿಕಾರಕ್ಕೆ ಬಂದ ಹತ್ತು ದಿನದಲ್ಲಿಯೇ ಮನೆ ನಿರ್ಮಾಣ, ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಜಾರಿಯಂತಹ ಭರವಸೆಗಳನ್ನು ನೀಡುವ ಮೂಲಕ ಸೈನ್ಯದ ವಿಷಯವನ್ನು ಮರೆ ಮಾಚುವಂತೆ ಮಾಡುವ ಬಗ್ಗೆ ಪಕ್ಷದ ವಲಯದಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ಯುದಟಛಿ ಮತ್ತು ಸೇನೆ ದೇಶಕ್ಕೆ ಸಂಬಂಧಿಸಿದ್ದು, ಇವುಗಳನ್ನು ಚುನಾವಣೆ ವಿಷಯವಾಗಿ ಬಳಸಿಕೊಳ್ಳುವುದು ಅಪರಾಧ. ಮೋದಿ ಸರ್ಕಾರ ಜನರಿಗೆ ನೀಡಿದ ಭರವಸೆ ಈಡೇರಿಸದಿರುವುದು. ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿರುವುದನ್ನು ಪ್ರಧಾನವಾಗಿ ಜನರಿಗೆ ಮನವರಿಕೆ ಮಾಡಿಕೊಡಲಾಗುವುದು.
● ಎಚ್‌.ಕೆ. ಪಾಟೀಲ್‌, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ

ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next