ಜಗದಾಳು³ರ/ಪಖಜ್ನೋರ್: ಬಡ ಆದಿವಾಸಿ ಯುವಕರ ಜೀವನವನ್ನೇ ಹಾಳು ಮಾಡಿದ ನಗರ ನಕ್ಸಲರನ್ನು ಕಾಂಗ್ರೆಸ್ ಬೆಂಬಲಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.
ನ.12ರಂದು ಛತ್ತೀಸ್‌ಗಡದಲ್ಲಿರುವ ಮೊದಲ ಹಂತದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜಗದಾಳು³ರದಲ್ಲಿ ಪ್ರಚಾರ ನಡೆಸಿದರು.
ನಗರ ನಕ್ಸಲರು ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತಿರುತ್ತಾರೆ. ದೊಡ್ಡ ದೊಡ್ಡ ಕಾರುಗಳಲ್ಲಿ ತಿರುಗಾಡುತ್ತಾರೆ. ಅವರ ಮಕ್ಕಳು ವಿದೇಶಗಳಲ್ಲಿ ಕಲಿಯುತ್ತಿರುತ್ತಾರೆ. ಆದರೆ ಇವರು ಬಡ ಆದಿವಾಸಿ ಯುವಕರನ್ನು ಅಲ್ಲಿಂದಲೇ ರಿಮೋಟ್ ಕಂಟ್ರೋಲ್‌ನಿಂದ ನಿಯಂತ್ರಿಸುತ್ತಿದ್ದಾರೆ. ಇಂಥವರನ್ನು ಯಾವ ಕಾರಣಕ್ಕೆ ಕಾಂಗ್ರೆಸ್ ಬೆಂಬಲಿಸುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ನಕ್ಸಲರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಂಡಾಗಲೆಲ್ಲ, ನಗರ ನಕ್ಸಲರು ಬೀದಿಗಿಳಿಯುತ್ತಾರೆ. ನೀವು ಅಂಥವರನ್ನು ಕ್ಷಮಿಸುತ್ತೀರಾ? ಎಂದು ಜನರನ್ನು ಮೋದಿ ಪ್ರಶ್ನಿಸಿದ್ದಾರೆ. ಒಂದೆಡೆ ನಗರ ನಕ್ಸಲರನ್ನು ಬೆಂಬಲಿಸುವ ಕಾಂಗ್ರೆಸ್, ಛತ್ತೀಸ್‌ಗಡಕ್ಕೆ ಬಂದು ನಕ್ಸಲರಿಂದ ರಾಜ್ಯವನ್ನು ಮುಕ್ತಗೊಳಿಸುತ್ತೇವೆ ಎನ್ನುತ್ತದೆ. ಇಂತಹ ಕಾಂಗ್ರೆಸ್ ನಾಯಕರಿಗೆ ತಕ್ಕ ಪಾಠ ಕಲಿಸಬೇಕೆಂದು ಪ್ರಧಾನಿ ಮೋದಿ ಜನರಲ್ಲಿ ವಿನಂತಿಸಿದರು.
ಆದಿವಾಸಿ ಜನರನ್ನು ಕಾಂಗ್ರೆಸ್ ತಮಾಷೆಯ ವಸ್ತುವನ್ನಾಗಿ ನೋಡುತ್ತಿದೆ. ಹಿಂದೊಮ್ಮೆ ಈಶಾನ್ಯ ರಾಜ್ಯದಲ್ಲಿ ನಾನು ರ್ಯಾಲಿ ನಡೆಸಿದಾಗ ಆದಿವಾಸಿಗಳು ಧರಿಸುವ ಟೊಪ್ಪಿ ಧರಿಸಿದ್ದೆ. ಆಗ ಅದನ್ನು ನೋಡಿ ಕಾಂಗ್ರೆಸ್ಸಿಗರು ತಮಾಷೆ ಮಾಡಿದ್ದರು. ಇದು ಆದಿವಾಸಿಗಳಿಗೆ ಮಾಡಿದ ಅವಮಾನ. ಛತ್ತೀಸ್‌ಗಡವನ್ನು ಶ್ರೀಮಂತವನ್ನಾಗಿಸುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕನಸನ್ನು ನನಸಾಗಿಸುವವರೆಗೂ ನಾನು ವಿರಮಿಸುವುದಿಲ್ಲ ಎಂದ ಪ್ರಧಾನಿ ನರೇಂದ್ರ ಮೋದಿ, ನಕ್ಸಲರ ಸಮಸ್ಯೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನೇತೃತ್ವದ ಸರ್ಕಾರ ಈ ಹಿಂದೆ ಅಭಿವೃದ್ಧಿ ಕೆಲಸಗಳನ್ನೇ ಮಾಡಿಲ್ಲ ಎಂದು ಕಿಡಿಕಾರಿದರು.
10 ವರ್ಷಗಳವರೆಗೆ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. ಆದರೆ ರಾಜ್ಯ ಜನರ ಅಗತ್ಯಗಳನ್ನು ಸರ್ಕಾರ ಮನಗಂಡಿರಲಿಲ್ಲ. ರಾಜ್ಯದ ಅಭಿವೃದ್ಧಿಗೂ ಒತ್ತು ನೀಡಲಿಲ್ಲ. ದಲಿತರು, ಹಿಂದುಳಿದವರು ಹಾಗೂ ಬಡವರನ್ನು ತನ್ನ ಮತ ಬ್ಯಾಂಕ್ ಆಗಿಸಿಕೊಂಡ ಕಾಂಗ್ರೆಸ್, ಅವರಿಗೆ ಯಾವ ಅನುಕೂಲವನ್ನೂ ಒದಗಿಸಿಲ್ಲ. ಅವರನ್ನು ಮನುಷ್ಯ ಎಂದೇ ಕಾಂಗ್ರೆಸ್ ಗುರುತಿಸಿಲ್ಲ ಎಂದು ಮೋದಿ ಕಿಡಿಕಾರಿದ್ದಾರೆ. ಇತ್ತೀಚೆಗಷ್ಟೇ ನಕ್ಸಲ್ ದಾಳಿಯಲ್ಲಿ ಅಸುನೀಗಿದ ದೂರದರ್ಶನ ಸುದ್ದಿ ವಾಹಿನಿಯ ಕ್ಯಾಮರಾಮನ್ ಅಚ್ಯುತಾನಂದ ಸಾಹು ಅವರಿಗೆ ಪ್ರಧಾನಿ ಮೋದಿ ಶ್ರದ್ಧಾಂಜಲಿ ಅರ್ಪಿಸಿದರು.
10 ದಿನದಲ್ಲಿ ಸಾಲ ಮನ್ನಾ: ಛತ್ತೀಸ್‌ಗಢ ಸಿಎಂ ರಮಣ್ ಸಿಂಗ್ ಸ್ಪರ್ಧಿಸುತ್ತಿರುವ ರಾಜನಂದಗಾಂವ್‌ನಲ್ಲಿ ಚುನಾವಣಾ ಪ್ರಚಾರ ರ್ಯಾಲಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮೋದಿ ಸರ್ಕಾರ ಜಾರಿಗೊಳಿಸಿದ ಜಿಎಸ್‌ಟಿ ಹಾಗೂ ನೋಟು ಅಮಾನ್ಯದ ವಿರುದ್ಧ ಕಿಡಿಕಾರಿದರು.
ಛತ್ತೀಸ್‌ಘಡದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹತ್ತು ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಆಡಳಿತಾರೂಢ ಬಿಜೆಪಿಯಂತೆ ಹುಸಿ ಭರವಸೆಯನ್ನು ನಾವು ನೀಡುವುದಿಲ್ಲ. ಪಂಜಾಬ್ ಹಾಗೂ ಕರ್ನಾಟಕದಲ್ಲಿ ಪಕ್ಷ ರೈತರ ಸಾಲ ಮನ್ನಾ ಭರವಸೆ ನೀಡಿತ್ತು. ಅದನ್ನು ಈಡೇರಿಸಿದ್ದೇವೆ ಎಂದಿದ್ದಾರೆ.