ಬೆಂಗಳೂರು: ಗಡಿ ತಂಟೆಗೆ ಸಂಬಂಧಿಸಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಟ್ವಿಟರ್‌ನಲ್ಲಿ ವಾಗ್ಧಾಳಿ ನಡೆಸಿದೆ.
ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಕೈಗೊಂಬೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಮಾತಿಗೆ ನಿಮ್ಮದೇ ಪಕ್ಷದ ಮಹಾರಾಷ್ಟ್ರ ಸರಕಾರದಿಂದ ಕವಡೆ ಕಾಸಿನ ಕಿಮ್ಮತ್ತು ಸಿಗುತ್ತಿಲ್ಲ. ವೇದಿಕೆ ಮೇಲೆ ದಮ್ಮು, ತಾಕತ್ತು ಎಂಬ ರೌಡಿಸಂ ಭಾಷೆ ಬಳಸುವ ತಾವು ಮಹಾರಾಷ್ಟ್ರದ ಸಚಿವರ ಮುಂದೆ ಬಾಲ ಮುದುರಿದ ಬೆಕ್ಕಿನಂತೆ ಆಗಿರುವುದೇಕೆ. ಈಗೇಕೆ ನಿಮ್ಮ ದಮ್ಮು, ತಾಕತ್ತಿನ ಪ್ರದರ್ಶನ ನಿಂತು ಹೋಗಿದೆ ಎಂದು ವಾಗ್ಧಾಳಿ ನಡೆಸಿದೆ.
ಕಾಂಗ್ರೆಸ್ ಮಾಡಿದ ಹಗರಣಗಳ ಆರೋಪಗಳನ್ನು ಬಿಜೆಪಿ ಅದೆಷ್ಟೇ ನಿರಾಕರಿಸಿದರೂ ಕೊನೆಗೆ ಹಗರಣ ನಡೆದಿರುವುದು ಸಾಬೀತಾಗುತ್ತಲೇ ಇವೆ. ಬೋರ್‌ವೆಲ್ ಅಕ್ರಮದಲ್ಲಿ ಅಧಿಕಾರಿಗಳನ್ನು ಹೊಣೆ ಮಾಡಿ ಕೈ ತೊಳೆದುಕೊಳ್ಳಲು ಮುಂದಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮದು ಭ್ರಷ್ಟಾಚಾರದ ಸಾಬೂನಿನಲ್ಲಿ ಸ್ನಾನ ಮಾಡುತ್ತಿರುವ ಸರಕಾರವೆಂದು ಈಗಲಾದರೂ ಒಪ್ಪಿಕೊಳ್ಳಿ ಎಂದು ಟೀಕಾಪ್ರಹಾರ ನಡೆಸಿದೆ.