Advertisement

ಉತ್ತರ ಕನ್ನಡದ ಭಾಸ್ಕರ ಪಟಗಾರ ಕಾಂಗ್ರೆಸ್ ಸೇರ್ಪಡೆ: ಇನ್ನೂ ಹಲವರು ಬರಲಿದ್ದಾರೆ; ಡಿಕೆಶಿ

06:34 PM Feb 04, 2022 | Team Udayavani |

ಬೆಂಗಳೂರು: ನಮ್ಮ ಪಕ್ಷಕ್ಕೆ ಯಾರೇ ಸೇರ್ಪಡೆಯಾಗಬೇಕಾದರೂ ಪಕ್ಷದ ಮಾಜಿ ಅಧ್ಯಕ್ಷರಾದ ಅಲ್ಲಂ ವೀರಭದ್ರಪ್ಪ ಅವರ ನೇತೃತ್ವದ ಸಮಿತಿಗೆ ಅರ್ಜಿ ಹಾಕಬೇಕು, ಚುನಾವಣೆ ಅಥವಾ ತುರ್ತು ಸಂದರ್ಭಗಳಲ್ಲಿ ಪಕ್ಷ ಸೇರ್ಪಡೆ ಅನಿವಾರ್ಯವಾದಾಗ ಮಾತ್ರ ನಾವು ನಿರ್ಧಾರ ಕೈಗೊಳ್ಳುತ್ತೇವೆ. ಉಳಿದ ಸಂದರ್ಭಗಳಲ್ಲಿ ಸಮಿತಿ ಅನುಮತಿ ಕೊಟ್ಟ ನಂತರ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

Advertisement

ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ “ಕಾಂಗ್ರೆಸ್ ಭವನ” ದಲ್ಲಿ ಉತ್ತರ ಕನ್ನಡ ಜಿಲ್ಲೆ‌ ಅನ್ಯಪಕ್ಷಗಳ ಮುಖಂಡರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉತ್ತರ ಕನ್ನಡದ ನಮ್ಮ ಸ್ನೇಹಿತರು ಸಾಕಷ್ಟು ಬಾರಿ ಪಕ್ಷ ಸೇರಲು ಕಾಲಾವಕಾಶ ಕೇಳಿದರು. ಅವರ ಉತ್ಸಾಹ ನೋಡಿ ಇಂದು ಅವರನ್ನು ಪಕ್ಷ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ನಾನು ಅಲ್ಲೇ ಬಂದು ಪಕ್ಷಕ್ಕೆ ಸೇರಿಸಿಕೊಳ್ಳುತ್ತೇನೆ ಎಂದಿದ್ದೆ. ಆದರೆ ಅವರು ಕೆಪಿಸಿಸಿ ಕಚೇರಿಯಲ್ಲೇ ಸೇರಬೇಕು ಎಂದು ಇಂದು ಇಲ್ಲಿ ಪಕ್ಷ ಸೇರುತ್ತಿದ್ದಾರೆ. ಕಾಂಗ್ರೆಸ್ ಕಚೇರಿ ಎಂದರೆ ಕಾಂಗ್ರೆಸ್ ಕಾರ್ಯಕರ್ತರ ಪಾಲಿಗೆ ದೇವಾಲಯವಿದ್ದಂತೆ. ಹೀಗಾಗಿ ಇಲ್ಲಿ ಪಕ್ಷ ಸೇರುತ್ತಿರುವುದಕ್ಕೆ ಸಂತೋಷ ಎಂದರು.

ಉತ್ತರ ಕನ್ನಡದಲ್ಲಿ ಸದ್ಯಕ್ಕೆ ಆರ್.ವಿ ದೇಶಪಾಂಡೆ ಅವರು ಮಾತ್ರ ಶಾಸಕರು. ಅವರು ಸಾಕಷ್ಟು ಪಕ್ಷ ಸಂಘಟನೆ ಮಾಡಿದ್ದಾರೆ. ಒಬ್ಬರು ಆಪರೇಷನ್ ಕಮಲದಿಂದ ಪಕ್ಷ ತೊರೆದಿದ್ದಾರೆ. ನಾನು ಸಮೀಕ್ಷೆ ಮಾಡಿಸಿದ್ದು, ಕರಾವಳಿಯ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಲೆನಾಡು ಪ್ರದೇಶಗಳಲ್ಲಿ ದೊಡ್ಡ ಬದಲಾವಣೆಯ ಸೂಚನೆಯನ್ನು ಮತದಾರರು ನೀಡಿದ್ದಾರೆ ಎಂದರು.

ನೀವ್ಯಾರು ಶಾಸಕರಾಗಬೇಕು ಎಂಬ ಆಸೆಯಿಂದ ಇಲ್ಲಿಗೆ ಬಂದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಇರಬೇಕು ಎಂಬ ಆಸೆಯಿಂದ ಬಂದಿದ್ದೀರಿ. ನಾನು ಗೋವಾಗೆ ಹೋಗಿದ್ದಾಗ ಅಲ್ಲಿ ನೆಲೆಸಿರುವ ನಿಮ್ಮ ಭಾಗದ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಅಲ್ಲಿನ ಪ್ರಕೃತಿ ಹಾಗೂ ನಮ್ಮ ರಾಜ್ಯದ ಪ್ರಕೃತಿ ಒಂದೇ ರೀತಿ ಇದ್ದರೂ ನಮ್ಮವರು ಯಾಕೆ ಅಲ್ಲಿಗೆ ಹೋಗುತ್ತಿದ್ದಾರೆ. ಮಹಾರಾಷ್ಟ್ರ, ಅರಬ್ ದೇಶಗಳಿಗೆ ಹೋಗಿ ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿ ಏನು ಕಡಿಮೆಯಾಗಿದೆ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ ಎಂದರು.

ಗೋವಾದಲ್ಲಿ ಮತದಾರರನ್ನು ಭೇಟಿ ಮಾಡಿದಾಗ ಅಲ್ಲಿರುವ ನಮ್ಮವರನ್ನು ಕೇಳಿದೆ. ಯಾಕೆ ಇಲ್ಲಿಗೆ ವಲಸೆ ಬಂದಿದ್ದೀರಿ ಎಂದು. ಆಗ ಅವರು ನಮ್ಮ ಊರಿನಲ್ಲೇ ಉದ್ಯೋಗ ಸಿಕ್ಕಿದ್ದರೆ ನಾವ್ಯಾಕೆ ಇಲ್ಲಿಗೆ ಬಂದು ಕೆಲಸ ಮಾಡುತ್ತಿದ್ದೆವು. ನಮ್ಮ ಊರಿನಲ್ಲೇ ದುಡಿದು ನೆಮ್ಮದಿಯಾಗಿ ಇರುತ್ತಿದ್ದೆವು ಎಂದರು. ಹೀಗಾಗಿ ಕಾಂಗ್ರೆಸ್ ಪಕ್ಷ ಮಲೆನಾಡು ಹಾಗೂ ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರಣಾಳಿಕೆ ಹಾಗೂ ಕಾರ್ಯಕ್ರಮ ರೂಪಿಸುತ್ತೇವೆ. ಗೋವಾ ಹಾಗೂ ಇತರೆ ಕಡೆಗಳಲ್ಲಿ ಯಾವ ರೀತಿ ಉದ್ಯೋಗ ಕಲ್ಪಿಸಲಾಗಿದೆ ಎಂಬುದನ್ನು ಚರ್ಚೆ ಮಾಡುತ್ತೇವೆ ಎಂದರು.

Advertisement

ಕಾಂಗ್ರೆಸ್ ಪಕ್ಷ ಕರಾವಳಿ, ಮಲೆನಾಡು ಪ್ರದೇಶದಲ್ಲಿ ಯಾವ ರೀತಿ ಉದ್ಯೋಗ ಸೃಷ್ಟಿ ಮಾಡಬೇಕು, ಜನರು ವಲಸೆ ಹೋಗುವುದನ್ನು ತಪ್ಪಿಸಲು ಯಾವ ಕಾರ್ಯಕ್ರಮ ರೂಪಿಸಬೇಕು ಎಂಬುದರ ಬಗ್ಗೆ ಕೆಲವರಿಗೆ ಜವಾಬ್ದಾರಿ ನೀಡಿದ್ದೇನೆ. ನಮ್ಮಲ್ಲಿರುವ ಪ್ರಾಕೃತಿಕ ಸಂಪತ್ತು, ಯುವ ಶಕ್ತಿಯನ್ನು ನಾವು ಬೇರೆಯವರಿಗೆ ದಾನ ಮಾಡುತ್ತಿದ್ದೇವೆ. ನಮ್ಮವರು ಬೇರೆ ರಾಜ್ಯಗಳಿಗೆ ವಲಸೆ ಹೋಗುವ ಅಗತ್ಯವಿಲ್ಲ ಎಂದರು.

ಧರ್ಮದ ಹೆಸರಲ್ಲಿ ಮನಸ್ಸಿಗೆ ನೋವುಂಟು ಮಾಡಿಕೊಳ್ಳುವುದಕ್ಕಿಂತ ನಮಗೆ ಊಟ, ಉದ್ಯೋಗ, ಆದಾಯ ತರುವ ವಿಚಾರಗಳ ಬಗ್ಗೆ ಗಮನಹರಿಸಬೇಕಿದೆ. ಕೇಂದ್ರದ ಬಜೆಟ್ ಪ್ರಕಟವಾಗಿದೆ. ಆದರೆ ಸಾಮಾನ್ಯ ಜನರಿಗೆ ಅನುಕೂಲವಾಗುವ ಒಂದೇ ಒಂದು ಕಾರ್ಯಕ್ರಮ ಕೊಟ್ಟಿದ್ದಾರಾ? ಎರಡು ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಅಧಿಕಾರದಲ್ಲಿದೆ. ಪ್ರಧಾನಿಗಳು ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದಿದ್ದರು. ಕೇಂದ್ರ ಸರ್ಕಾರ ನಿಮಗೆಲ್ಲ ಸರ್ಕಾರಿ ಉದ್ಯೋಗವನ್ನೇ ನೀಡಬೇಕು ಎಂದು ಹೇಳುತ್ತಿಲ್ಲ. ಸ್ವಂತ ಉದ್ಯೋಗ ಸೃಷ್ಟಿಸಲು ಏನಾದರೂ ಕ್ರಮ ಕೈಗೊಳ್ಳಬಹುದಿತ್ತಲ್ಲವೇ? 2 ಕೋಟಿ ಉದ್ಯೋಗದಿಂದ ಈಗ 60 ಲಕ್ಷ ಉದ್ಯೋಗ ಸೃಷ್ಟಿಗೆ ಇಳಿದಿದ್ದಾರೆ. ಮತ ಪಡೆಯುವಾಗ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದು ಹೇಳಿ, ಈಗ 60 ಲಕ್ಷ ಉದ್ಯೋಗ ಕೊಡುತ್ತೀವಿ ಎಂದರೆ ನಿಮಗೆ ಯುವಕರ ಮೇಲೆ ನಂಬಿಕೆ ಇಲ್ಲ, ಅವರ ಸಾಮರ್ಥ್ಯದ ಮೇಲೆ ವಿಶ್ವಾಸವಿಲ್ಲ ಎಂಬುದು ಗೊತ್ತಾಗುತ್ತದೆ. ಪರಿಣಾಮ ನಮ್ಮ ಯುವಕರು ಹೊರದೇಶಗಳಿಗೆ ಹೋಗಿ ದುಡಿಯುತ್ತಿದ್ದಾರೆ ಎಂದರು.

ಇದರ ಜವಾಬ್ದಾರಿ ಯಾರು ಹೊರಬೇಕು? ರಾಜಕಾರಣಿಗಳಾದ ನಾವು ಸರಿಯಾದ ನೀತಿಗಳನ್ನು ರೂಪಿಸಿದರೆ, ಉದ್ಯೋಗ ಸೃಷ್ಟಿಸಿಕೊಳ್ಳಲು ಶಕ್ತಿ ಹಾಗೂ ಮಾರ್ಗದರ್ಶನ ನೀಡಿದರೆ, ನಿಮ್ಮ ಪಾಡಿಗೆ ನೀವೇ ಉದ್ಯೋಗ ಸೃಷ್ಟಿಸಿಕೊಂಡು ಬದುಕುತ್ತೀರಿ. ಹಾಗೆ ಮಾಡಬೇಕಾದ್ದು ಸರ್ಕಾರದ ಜವಾಬ್ದಾರಿ.

ಕಾಂಗ್ರೆಸ್ ಪಕ್ಷ ಸೇರಲು ಬಂದಿರುವ ನಿಮ್ಮೆಲ್ಲರನ್ನು ಪಕ್ಷದ ಅಧ್ಯಕ್ಷನಾಗಿ ತುಂಬು ಹೃದಯದಿಂದ ಸ್ವಾಗತ ಮಾಡುತ್ತೇನೆ. ಮುಂದೆ ಚುನಾವಣೆ ಸಮಯದಲ್ಲಿ ಹೊಸ ಮುಖಗಳ ಬಗ್ಗೆ ಕಾಂಗ್ರೆಸ್ ಚಿಂತನೆ ನಡೆಸಿದೆ. ಹಾಗೆಂದು ಹಿರಿಯರನ್ನು ನಾವು ಕಡೆಗಣಿಸುವುದಿಲ್ಲ. ಎಲ್ಲರನ್ನೂ ಪರಿಗಣಿಸಲಾಗುವುದು ಎಂದರು.

ಈಗ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಆರಂಭವಾಗಿದೆ. ನೀವು ಅತಿ ಹೆಚ್ಚು ಸದಸ್ಯರನ್ನು ನೋಂದಣಿ ಮಾಡಬೇಕಿದೆ. ಪಕ್ಷ ಸೇರುವವರನ್ನು ಸೇರಿಸಿಕೊಂಡು, ಸೇರಲು ಹಿಂದೆ ಸರಿಯುವವರ ಮನವೊಲಿಸಲು ಅವಕಾಶ ಸಿಗುತ್ತದೆ. ಬಿಜೆಪಿಯವರು ಅವರದೇ ಆದ ತಂತ್ರಗಾರಿಕೆಯಲ್ಲಿ ಸದಸ್ಯತ್ವ ಮಾಡುತ್ತಿದ್ದಾರೆ. ಅವರು ಏದರೂ ಮಾಡಿಕೊಳ್ಳಲಿ. ನೀವು ಜನರ ಹೃದಯ ಗೆದ್ದು ಅವರನ್ನು ಕಾಂಗ್ರೆಸ್ ನತ್ತ ಕರೆತರಬೇಕು ಎಂದರು.

ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಅವರದೇ ಪಕ್ಷದ ನಾಯಕರು ಹೇಳುತ್ತಿದ್ದಾರೆ. ನಿಮ್ಮ ಭಾಗದವರು ನಾಲ್ಕೈದು ಬಾರಿ ಸಂಸದರಾಗಿದ್ದಾರೆ. ಅವರು ನಿಮ್ಮ ಭಾಗಕ್ಕೆ ಏನಾದರೂ ಅನುದಾನ, ಯೋಜನೆ ತಂದಿದ್ದಾರಾ? ನಿಮ್ಮ ಭಾಗದ ಜನರಿಗೆ ಉದ್ಯೋಗ ಕೊಡಿಸಿದ್ದಾರಾ? ಕೇವಲ ದೇವರು, ದಿಂಡಿರು, ಸಂವಿಧಾನ ಬದಲಾವಣೆ, ಸುಟ್ಟು ಹಾಕಿ ಎನ್ನುವುದು ಬಿಟ್ಟು ಬೇರೇನಾದರೂ ಮಾಡಿದ್ದಾರಾ? ಅವರಿಗೆ ಮಾತೇ ಬಂಡವಾಳ ಎಂದು ಅನಂತ್ ಕುಮಾರ್ ಹೆಗಡೆ ಅವರಿಗೆ ಟಾಂಗ್ ನೀಡಿದರು.

ರಾಜ್ಯ ಹಾಗೂ ದೇಶದ ಬದಲಾವಣೆ ನಿಮ್ಮ ಕೈಯಲ್ಲಿದೆ. ಅದಕ್ಕೆ ನೀವೆಲ್ಲಾ ಕಾಂಗ್ರೆಸ್ ಗಾಗಿ ಕೆಲಸ ಮಾಡಬೇಕಿದೆ. ಕಾಂಗ್ರೆಸ್ ಪಕ್ಷ ಸೇರುವುದು, ಕಾಂಗ್ರೆಸ್ ನ ತ್ರಿವರ್ಣ ಧ್ವಜವನ್ನು ಹಿಡಿಯುವುದೇ ಒಂದು ಹೆಮ್ಮೆ ಹಾಗೂ ಭಾಗ್ಯ. ಬೇರೆಯವರಿಗೆ ಈ ಅವಕಾಶವಿಲ್ಲ. ಸ್ಥಳೀಯ ಮಟ್ಟದಲ್ಲಿ ನೀವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ. ನಾವೆಲ್ಲರೂ ನಿಮ್ಮ ಜತೆ ಇದ್ದೇವೆ. ನಮಗೆ ವ್ಯಕ್ತಿ ಪೂಜೆಗಿಂತ ಪಕ್ಷಪೂಜೆ ಹಾಗೂ ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆ. ನನ್ನ ಮೇಲೆ ನಿಮಗೆ ಪ್ರೀತಿ, ಅಭಿಮಾನ ಇರಬಹುದು. ಆದರೆ ನನಗಿಂತ ದೊಡ್ಡದು ನಮ್ಮ ಪಕ್ಷ. ನೀವೆಲ್ಲ ಪಕ್ಷಕ್ಕಾಗಿ ಕೆಲಸ ಮಾಡಿ ಎಂದರು.

ಇನ್ನು ದೇಶಪಾಂಡೆ ಅವರು ಪಕ್ಷಕ್ಕೆ ಸೇರುವ ಮತ್ತಷ್ಟು ನಾಯಕರ ಪಟ್ಟಿಯನ್ನು ಕೊಟ್ಟಿದ್ದಾರೆ. ಅವರನ್ನು ಇಲ್ಲಿ ಸೇರಿಸಿಕೊಳ್ಳಬೇಕೋ ಅಥವಾ ಅಲ್ಲೇ ಹೋಗಿ ಸೇರಿಸಿಕೊಳ್ಳಬೇಕೋ ಎಂಬುದರ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿ ಬಿಜೆಪಿಗೆ ಶಾಕ್ ನೀಡಿದರು.

ಭಾಸ್ಕರ ಪಟಗಾರ ಕಾಂಗ್ರೆಸ್ ಸೇರ್ಪಡೆ

ಇಂದು ಜಿಲ್ಲಾ ಯುವ ಜನತಾ ದಳದ ಅಧ್ಯಕ್ಷ ಭಾಸ್ಕರ ಪಟಗಾರವರ ನೇತೃತ್ವದಲ್ಲಿ, ಯುವ ಜನತಾದಳದ ಪದಾಧಿಕಾರಿಗಳು ಮತ್ತು ಅವರ ಬೆಂಲಿಗರು ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ,ಪಕ್ಷದ ಮುಖಂಡರಾದ ಪ್ರಶಾಂತ ದೇಶಪಾಂಡೆ, ನಿವೇದಿತ್ ಆಳ್ವಾ,ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್. ನಾಯ್ಕ ,ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್ ತೆಂಗೇರಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next