ಶಿವಮೊಗ್ಗ: ಹೊಸ ಸರ್ಕಾರ ರಚನೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ವರ್ತೂರ್ ಪ್ರಕಾಶ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೆಲುವ ಸಾಧಿಸುವ ಕ್ಷೇತ್ರ ಗುರುತಿಸಿ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 15 ಕ್ಷೇತ್ರಗಳಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದರು.
ಕಾಂಗ್ರೆಸ್ 50-60 ಹಾಗೂ ಬಿಜೆಪಿ 70-80 ಸ್ಥಾನಗಳಲ್ಲಿ ಜಯಗಳಿಸಬಹುದೆಂಬ ನಿರೀಕ್ಷೆ ಇದೆ. ಯಾವ ಪಕ್ಷ ಕೂಡ ಸ್ಪಷ್ಟ ಬಹುಮತ ಪಡೆಯುವುದಿಲ್ಲ. ಅಪ್ಪ-ಮಕ್ಕಳ ಪಕ್ಷವಾಗಿರುವ ಜೆಡಿಎಸ್ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಹೊಸ ಸರ್ಕಾರ ರಚನೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಭವಿಷ್ಯ ನುಡಿದರು.
ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ನೀಡಿದ ಆಶ್ವಾಸನೆಯನ್ನು ನಂಬಿ ಕುರುಬ ಸಮಾಜದವರು ಕಾಂಗ್ರೆಸ್‌ಗೆ ಮತ ನೀಡಿದ್ದರು. ಆದರೆ ಇದೀಗ ಯಾಮಾರಿರುವುದು ಗೊತ್ತಾಗಿದೆ. ಈ ಬಾರಿ ಕುರುಬ ಸಮಾಜದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ ನೋಡಿ ಮತ ನೀಡುವುದಿಲ್ಲ. ತಮಗೆ ಬೆಂಬಲ ನೀಡಲಿದ್ದಾರೆ. ಲಿಂಗಾಯತ-ವೀರಶೈವ ವಿಚಾರವು ಸಿದ್ದರಾಮಯ್ಯಗೆ ಮುಳುವಾಗಲಿದೆ ಎಂದರು.
ಕೆ.ಎಸ್. ಈಶ್ವರಪ್ಪ ಅವರಿಗೆ ಶಿವಮೊಗ್ಗ ನಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಿದೆ. ಆದರೆ ರಾಜಕೀಯ ತಂತ್ರಗಾರಿಕೆಯಿಂದ ಬಿಎಸ್‌ವೈ ಈಶ್ವರಪ್ಪರನ್ನು ಸೋಲಿಸುವುದರಲ್ಲಿ ಅನುಮಾನವಿಲ್ಲ ಎಂದು ವ್ಯಂಗ್ಯವಾಡಿದರು. ಶಿವಮೊಗ್ಗ ನಗರ ಕ್ಷೇತ್ರಕ್ಕೆ ಪಕ್ಷದ ಜಿಲ್ಲಾಧ್ಯಕ್ಷ ಎಂ.ಸಮೀವುಲ್ಲಾ ಅವರಿಗೆ ಟಿಕೆಟ್ ನೀಡಲಾಗಿದೆ. ಅವರು ಗೆಲುವು ಸಾಧಿಸುವ ವಿಶ್ವಾಸವಿದೆ. ಮುಂದಿನ ವಾರ 50 ರಿಂದ 60 ಅಭ್ಯರ್ಥಿಗಳನ್ನು ಘೋಷಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಪಕ್ಷದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸಾಯಿದ್ ಪಾಶ, ಎಂ.ಸಮೀವುಲ್ಲಾ, ಪ್ರಶಾಂತ್, ಫಾರೂಕ್ ಶರೀಫ್, ಸೈಯದ್ ಮಸೂದ್, ರಾಘವೇಂದ್ರ ಇದ್ದರು.