Advertisement

ಇಡಿ ದುರ್ಬಳಕೆ ವಿರೋಧಿಸಿ ಕಾಂಗ್ರೆಸ್‌ ಪ್ರತಿಭಟನೆ

12:09 PM Jun 18, 2022 | Team Udayavani |

ಕಲಬುರಗಿ: ಕೇಂದ್ರದ ಬಿಜೆಪಿ ಸರ್ಕಾರ ದೇಶದ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ರಾಜಕೀಯ ಹಿತಾಸಕ್ತಿಗಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ವಿನಾಕಾರಣ ವಿಚಾರಣೆ ಮಾಡುತ್ತಿದೆ. ಆದ್ದರಿಂದ ಕೂಡಲೇ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ನಗರದ ಸರದಾರ್‌ ವಲ್ಲಭಬಾಯಿ ಪಟೇಲ್‌ ವೃತ್ತದಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಮಾಜಿ ಶಾಸಕ ಬಿ.ಆರ್‌. ಪಾಟೀಲ ಮಾತನಾಡಿ, ರಾಹುಲ್‌ ಗಾಂಧಿ ಅವರನ್ನು ಸತತವಾಗಿ ವಿಚಾರಣೆ ಮಾಡುವ ಮೂಲಕ ಕೇಂದ್ರ ಸರಕಾರ ದೇಶದ ಜನತೆ ಎದುರು ತಪ್ಪು ಅಭಿಪ್ರಾಯ ಬಿಂಬಿಸುವ ಮೂಲಕ ಮುಂದಿನ ರಾಜಕೀಯ ಅಪಾಯವನ್ನು ತಪ್ಪಿಸಿಕೊಳ್ಳಲು ಹವಣಿಸುತ್ತಿದೆ ಎಂದು ದೂರಿದ ಅವರು, ಕೇಂದ್ರದ ಕೈಗೊಂಬೆಯಾಗಿರುವ ಜಾರಿ ನಿರ್ದೇಶನಾಲಯ ಸೇಡಿನ ರಾಜಕಾರಣ ಮಾಡುತ್ತಿದೆ. ಕಾನೂನು ಪ್ರಕಾರ ತನಿಖೆ ಮಾಡಲು ತಕರಾರು ಇಲ್ಲ, ಮೊದಲು ಎಫ್‌ಐಆರ್‌ ಹಾಕಿ ತನ್ನ ನೈತಿಕತೆ ತೋರಿಸಬೇಕು ಎಂದು ಆಗ್ರಹಿಸಿದರು.

ದೆಹಲಿ ಪೊಲೀಸರಂತೂ ತೀರಾ ಭಿನ್ನವಾಗಿ ವರ್ತಿಸಿ ತಮ್ಮ ಮರ್ಯಾದೆ ಕಳೆದುಕೊಂಡಿದ್ದಾರೆ. ಕಾಂಗ್ರೆಸ್‌ ಕಚೇರಿಗೆ ತೆರಳಿ ಗಲಾಟೆ ಮಾಡಿದ್ದಾರೆ. ಸಂಸದ ಡಿ.ಕೆ. ಸುರೇಶ ಅವರನ್ನು ತಳ್ಳಿ ಅವಮಾನಿಸಿದ್ದಾರೆ. ಕಾಂಗ್ರೆಸ್‌ ಎಲ್ಲ ತನಿಖೆಗೆ ಸಿದ್ಧವಿದೆ. ನೀವು ಮುಖಾಮುಖೀಯಾಗಿರಿ? ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.

ಪ್ರತಿಭಟನೆಯಲ್ಲಿ ಶಾಸಕಿ ಕನೀಜ್‌ ಫಾತಿಮಾ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ, ಮಜರ್‌ ಖಾನ್‌, ಸುಭಾಷ ರಾಠೊಡ, ಯುವ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಶಿವಾನಂದ ಹೊನಗುಂಟಿ, ಲಿಂಗರಾಜ ತಾರಫೈಲ್‌, ರೇಣುಕಾ ಸಿಂಗೆ ಹಾಗೂ ಇನ್ನಿತರರು ಇದ್ದರು.

Advertisement

ರಾಹುಲ್‌ ವಿರುದ್ಧ ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ. ಇಡಿ, ಸಿಬಿಐ ಮತ್ತು ಇತರೆ ಸಂಸ್ಥೆಗಳನ್ನು ಬಳಕೆ ಮಾಡಿಕೊಂಡು ಹಲವು ನಾಯಕರನ್ನು ಅದರಲ್ಲೂ ಪ್ರಮುಖವಾಗಿ ಕಾಂಗ್ರೆಸ್‌ ನಾಯಕರನ್ನು ಗುರಿ ಮಾಡುತ್ತಿದೆ. ಇದು ಸಂವಿಧಾನ ವಿರೋಧಿ. ಇದರಿಂದ ದೇಶದ ಜನತೆಗೂ ಬಿಜೆಪಿ ಒಳಮುಖ ಗೊತ್ತಾಗುತ್ತದೆ. ಈಗಾಗಲೇ ಜನರು ಎಂಟು ವರ್ಷಗಳಿಂದ ದಾರಿ ತಪ್ಪಿದ್ದಾರೆ. ಇನ್ನು ಹಾಗಾಗದೇ ಇರಲು ಹೋರಾಟ ಮಾಡಲಾಗುತ್ತಿದೆ. -ಚೇತನ ಗೋನಾಯಕ, ಯುವ ಕಾಂಗ್ರೆಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಕೇಂದ್ರ ಸರಕಾರ ಡಾ| ಮಲ್ಲಿಕಾರ್ಜುನ ಖರ್ಗೆ ಅವರನ್ನು ಕರೆಯಿಸಿ ವಿಚಾರಣೆ ಮಾಡುವ ನಾಟಕವಾಡಿ ಮಾನಸಿಕವಾಗಿ ಕುಗ್ಗಿಸಲು ಯತ್ನಿಸಿದೆ. ಇದು ಯಾರಿಂದಲೂ ಸಾಧ್ಯವಿಲ್ಲ. ಖರ್ಗೆ ತುಂಬಾ ಗಟ್ಟಿಗರು. ಕಾಂಗ್ರೆಸ್‌ ಸಂವಿಧಾನವನ್ನು ಗೌರವಿಸಿತ್ತು. ಜನರ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ತೊಲಗಬೇಕು. -ತಿಪ್ಪಣ್ಣಪ್ಪ ಕಮಕನೂರು, ವಿಧಾನ ಪರಿಷತ್‌ ಮಾಜಿ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next