ಮೂಡುಬಿದಿರೆ: ಸಚಿವ ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಬೆಳಗಾವಿ ಮೂಲದ ಗುತ್ತಿಗೆದಾರ, ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ವಿರುದ್ಧ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವ ಅಭಯಚಂದ್ರ ಅವರ ಹಿರಿತನದಲ್ಲಿ ತಾಲೂಕು ಕಚೇರಿ ಎದುರು ಬುಧವಾರ ಪ್ರತಿಭಟನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಗುತ್ತಿಗೆದಾರರು ತಾವು ಮಾಡಿರುವ ಕಾಮಗಾರಿಗಳ ಬಿಲ್ಲು ಮಂಜೂರಾಗಲು ಶೇ. 40ರಷ್ಟು ಮೊತ್ತಕ್ಕೆ ಬೇಡಿಕೆ ಇರಿಸಿದ್ದ ಸಚಿವರ ಬಗ್ಗೆ ಮುಖ್ಯಮಂತ್ರಿಯಿಂದ ತೊಡಗಿ ಪ್ರಧಾನ ಮಂತ್ರಿಯವರವರೆಗೂ ಗಮನಸೆಳೆದಿದ್ದು ಯಾರೂ ಸೂಕ್ತವಾಗಿ ಸ್ಪಂದಿಸಲಿಲ್ಲ . ಹಾಗಾಗಿ ಅವರು ಬೇರೆ ದಾರಿಕಾಣದೆ ಕರ್ನಾಟಕ ಪಂ.ರಾಜ್ ಮತ್ತು ಗ್ರಾಮೀಣ ಆಭಿವೃದ್ಧಿ ಸಚಿವ ಈಶ್ವರಪ್ಪ ಅವರ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ಸಾವಿಗೆ ಕಾರಣರಾದ ಸಚಿವ ಈಶ್ವರಪ್ಪನವರನ್ನು ತಕ್ಷಣವೇ ಸಂಪುಟದಿಂದ ವಜಾ ಮಾಡಬೇಕು ಮತ್ತು ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕು ಎಂದು ಅಭಯಚಂದ್ರ ಅವರು ಆಗ್ರಹಿಸಿದರು.
ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಮಾತನಾಡಿ, ಬಿಜೆಪಿ ಎದುರಿಸುತ್ತಿರುವ ಸಮಸ್ಯೆಗಳಿಂದ ಪಾರಾಗಲು ಜಾತಿ, ಮತಧರ್ಮ ಗಳನ್ನು ವಿಭಜಿಸುವ ವಿಷಬೀಜ ಬಿತ್ತುತ್ತಿದೆ ಎಂದು ಆಪಾದಿಸಿ, ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಸಮಗ್ರ ತನಿಖೆ ಆಗಲೇ ಬೇಕು. ಆಗದೇ ಇದ್ದರೆ ಧರಣಿ ಸತ್ಯಾಗ್ರಹಕ್ಕೂ ಕಾಂಗ್ರೆಸ್ ಸಿದ್ಧ ಎಂದು ಎಚ್ಚರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರ, ಮಹಿಳಾ ಕಾಂ. ಅಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ, ಪುರಸಭೆ ಸದಸ್ಯರಾದ ಸುರೇಶ್ ಕೋಟ್ಯಾನ್, ಸುರೇಶ ಪ್ರಭು, ಪಿ.ಕೆ. ಥಾಮಸ್, ಪುರಂದರ ದೇವಾಡಿಗ, ಇಕ್ಬಾಲ್ ಕರಿಂ, ಕೊರಗಪ್ಪ, ಪ್ರಮುಖರಾದ ಹರಿಣಾಕ್ಷಿ, ಜೋಕಿಂ ಕೊರೆಯ ಕಲ್ಲಮುಂಡ್ಕೂರು, ರಾಜೇಶ್ ಕಡಲಕೆರೆ, ಶಿವಾನಂದ ಪಾಂಡ್ರು, ಸತೀಶ್ ಭಂಡಾರಿ, ಬ್ಲಾಕ್ ಕಾಂ. ಪ್ರಧಾನ ಕಾರ್ಯದರ್ಶಿ ರತ್ನಾಕರ ಸಿ. ಮೊಯಿಲಿ ಮೊದಲಾದವರಿದ್ದರು.
ರಾಜ್ಯಪಾಲರಿಗೆ ಮೂಡುಬಿದಿರೆ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.