Advertisement

ಇಡಿ ನೋಟಿಸ್‌ಗೆ ಕಾಂಗ್ರೆಸ್‌ ಸಿಡಿಮಿಡಿ

03:42 PM Jul 23, 2022 | Team Udayavani |

ರಾಯಚೂರು: ಕಾಂಗ್ರೆಸ್‌ ವರಿಷ್ಠರಿಗೆ ಇಡಿ ನೋಟಿಸ್‌ ಜಾರಿ ಮಾಡಿ ವಿಚಾರಣೆಗೆ ಕರೆಯುವ ಮೂಲಕ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ತನ್ನ ಸ್ವಾರ್ಥಕ್ಕೆ ಬಳಸಿ ಕೊಳ್ಳುತ್ತಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ಶುಕ್ರವಾರ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

Advertisement

ನಗರದ ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ರಸ್ತೆ ಸಂಚಾರ ತಡೆಯುವ ಮೂಲಕ ಕೆಲಕಾಲ ಪ್ರತಿಭಟನೆ ನಡೆಸಿದರು. ಬಳಿಕ ಧರಣಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಮುಖಂಡರು, ಕೇಂದ್ರ ಸರ್ಕಾರವು ರಾಜಕೀಯ ದ್ವೇಷ ಸಾಧಿಸುತ್ತಿದ್ದು, ಸ್ವತಂತ್ರ ತನಿಖಾ ಸಂಸ್ಥೆಗಳನ್ನು ತನ್ನ ಸ್ವಾರ್ಥಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್‌ ನಾಯಕರನ್ನು ಗುರಿಯಾಗಿಸಿಕೊಂಡು ಅನಗತ್ಯ ವಿಚಾರಣೆ ಮಾಡಿಸುವ ಮೂಲಕ ತೇಜೋವಧೆ ಮಾಡುತ್ತಿದೆ. ಎಐಸಿಸಿ ನಾಯಕಿ ಸೋನಿಯಾ ಗಾಂಧಿ ಹಾಗೂ ಯುವ ನಾಯಕ ರಾಹುಲ್‌ ಗಾಂಧಿ ಅವರಿಗೆ ಇಡಿ ನೋಟಿಸ್‌ ನೀಡುವ ಮೂಲಕ ಪದೇ-ಪದೇ ವಿಚಾರಣೆ ನೆಪದಲ್ಲಿ ಸಮಸ್ಯೆ ಸೃಷ್ಟಿಸುತ್ತಿದೆ ಎಂದು ದೂರಿದರು.

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ ಮುಗಿದಿದ್ದರೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅದೇ ವಿಷಯವಾಗಿ ಅನಗತ್ಯ ಪ್ರಹಸನ ನಡೆಸುತ್ತಿದೆ. ತನಿಖೆಯ ಹೆಸರಲ್ಲಿ ಕಾಂಗ್ರೆಸ್‌ ನಾಯಕರ ಮನೋಬಲ ಕುಗ್ಗಿಸುವ ಷಡ್ಯಂತ್ರ ನಡೆಸುತ್ತಿದೆ ಎಂದು ದೂರಿದರು.

ಕಳೆದ ಎಂಟು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ತಾನು ನೀಡಿದ ಯಾವೊಂದು ಭರವಸೆ ಈಡೇರಿಸಿಲ್ಲ. ಪ್ರತಿ ವಸ್ತುವಿನ ಮೇಲೆ ಜಿಎಸ್‌ಟಿ ವಿಧಿಸಿದ ಬೆಲೆ ಹೆಚ್ಚಳ ಮಾಡುವುದೇ ಸಾಧನೆಯಾಗಿದೆ. ಬಡವರು ಸುಗಮ ಜೀವನ ನಡೆಸಲಾಗದ ಸ್ಥಿತಿ ನಿರ್ಮಿಸಿರುವುದೇ ಬಿಜೆಪಿ ಸಾಧನೆ ಎಂದು ವಾಗ್ಧಾಳಿ ನಡೆಸಿದರು.

Advertisement

ದೇಶದ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡುತ್ತಿಲ್ಲ. ದೇಶದ ಆಡಳಿತ ನಿರ್ವಹಿಸುವಲ್ಲಿ ಬಿಜೆಪಿ ಸಂಪೂರ್ಣ ವಿಫಲಗೊಂಡಿದೆ. ಸರ್ಕಾರದ ಅಧೀನದ ಸಂಸ್ಥೆಗಳನ್ನು ಖಾಸಗಿ ಒಡೆತನಕ್ಕೆ ನೀಡುತ್ತಿರುವುದೇ ಬಿಜೆಪಿ ಧ್ಯೇಯವಾಗಿದೆ. ಇನ್ನಾದರೂ ತನಿಖಾ ಸಂಸ್ಥೆಗಳನ್ನು ದ್ವೇಷಕ್ಕೆ ಬಳಸಿಕೊಳ್ಳುವುದನ್ನು ಸರ್ಕಾರ ನಿಲ್ಲಿಸಲಿ ಎಂದು ತಾಕೀತು ಮಾಡಿದರು.

ಪಕ್ಷದ ಜಿಲ್ಲಾಧ್ಯಕ್ಷ ಬಿ.ವಿ. ನಾಯಕ, ಎಐಸಿಸಿ ಕಾರ್ಯದರ್ಶಿ ಎನ್‌.ಎಸ್‌.ಬೋಸರಾಜು, ಶಾಸಕರಾದ ಬಸವನಗೌಡ ದದ್ದಲ್‌, ಬಸನಗೌಡ ತುರ್ವಿಹಾಳ, ಮಾಜಿ ಶಾಸಕರಾದ ಹಂಪನಗೌಡ ಬಾದರ್ಲಿ, ಹಂಪಯ್ಯ ನಾಯಕ, ಮುಖಂಡರಾದ ಜಯಣ್ಣ, ಜಿ.ಬಸವರಾಜರೆಡ್ಡಿ, ಕೆ.ಶಾಂತಪ್ಪ, ಅಬ್ದುಲ್‌ ಕರೀಂ, ನರಸಿಂಹಲು ಮಾಡಗಿರಿ, ಅಮರೇಗೌಡ ಹಂಚಿನಾಳ, ರುದ್ರಪ್ಪ ಅಂಗಡಿ, ಜಿಂದಪ್ಪ, ಬಾಲಸ್ವಾಮಿ ಕೊಡ್ಲಿ, ಅರುಣ್‌ ದೋತರಬಂಡಿ, ನಿರ್ಮಲಾ ಬೆಣ್ಣಿ, ಶಶಿಕಲಾ ಭೀಮರಾಯ, ವಂದನಾ, ರಾಣಿ, ರಿರ್ಚಡ್ಸ್‌ ಸೇರಿ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next