Advertisement

ಕೇಂದ್ರದ ಸರ್ವಾಧಿಕಾರಿ ಧೋರಣೆಗೆ ಖಂಡನೆ

01:57 PM Jun 18, 2022 | Team Udayavani |

ದೇವನಹಳ್ಳಿ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯನ್ನು ಜಾರಿ ನಿರ್ದೇಶನಾಲಯ(ಇಡಿ) ವಿಚಾರಣೆಗೆ ಒಳಪಡಿಸುವುದನ್ನು ಖಂಡಿಸಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ತಾಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೇಂದ್ರ ಬಿಜೆಪಿ ಸರ್ಕಾರ ಕಾಂಗ್ರೆಸ್‌ ನಾಯಕರನ್ನು ಗುರಿಯಾಗಿರಿಸಿಕೊಂಡು ಜಾರಿ ನಿರ್ದೇಶನಾಲಯದ ಮೂಲಕ ಪಕ್ಷವನ್ನು ಬಗ್ಗು ಬಡಿಯುವ ಕೆಲಸ ಮಾಡುತ್ತಿದೆ ಎಂದು ಕಾರ್ಯಕರ್ತರು ಆರೋಪಿಸಿದರು. ಈ ವೇಳೆ ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣ ಯ್ಯ ಮಾತನಾಡಿ, ಎಐಸಿಸಿ ಅಧ್ಯಕ್ಷರಾದ ಸೋನಿಯಾ ಗಾಂಧಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಇಡಿ ಸಮನ್ಸ್‌ ನೀಡಿರುವುದು ಪ್ರಧಾನಿ ಮೋದಿ ಸರ್ಕಾರದ ಕುತಂತ್ರ. ಐಟಿ, ಇಡಿ ಹಾಗೂ ಸಿಬಿಐನಂತಹ ಸಂವಿಧಾನಿಕ ಸಂಸ್ಥೆಗಳು ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕು ಎಂದರು.

ಸುಳ್ಳು ಮೊಕದ್ದಮೆ ದಾಖಲು: ಮಾಜಿ ಶಾಸಕ ಮುನಿ ನರಸಿಂಹಯ್ಯ ಮಾತನಾಡಿ, ಸ್ವಾತಂತ್ರ ಚಳವಳಿಯ ಮೂಲಕ ಕಾಂಗ್ರೆಸ್‌ ಜನಪರವಾದ ಧ್ವನಿಯಾಗಿತ್ತು. ಇದರ ಏಳಿಗೆಯನ್ನು ಸಹಿಸದ ಕೇಂದ್ರದಲ್ಲಿನ ಮೋದಿ ನೇತೃತ್ವದ ಬಿಜೆಪಿ ಸರ್ಕಾರ, ಕಾಂಗ್ರೆಸ್‌ ಮುಖಂಡರನ್ನೇ ಗುರಿಯಾಗಿಸಿ ಸರಣಿಯಾಗಿ ಸುಳ್ಳು ಮೊಕದ್ದಮೆ ದಾಖಲಿಸಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿಚಾರಣೆ ನೆಪದಲ್ಲಿ ಬಂಧಿಸುವುದು, ಅಪಮಾನಿಸುವುದು ಮಾಡುತ್ತಾ ಸೇಡಿನ ರಾಜ ಕಾರಣವನ್ನು ಮುಂದುವರಿಸಿಕೊಂಡು ಹೋಗುತ್ತಿದೆ ಎಂದು ಕಿಡಿಕಾರಿದರು.

ಮಾನವ ಹಕ್ಕುಗಳ ಉಲ್ಲಂಘನೆ: ಕೆಪಿಸಿಸಿ ಸದಸ್ಯ ಲಕ್ಷ್ಮೀಪತಿ ಮಾತನಾಡಿ, ಸತತ ಮೂರು ದಿನ ವಿಚಾರಣೆ ನೆಪದಲ್ಲಿ ರಾಹುಲ್‌ ಗಾಂಧಿ ಅವರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದು, ಇದನ್ನು ಪ್ರತಿಭಟಿಸುತ್ತಿದ್ದ ನಮ್ಮ ಪಕ್ಷದ ಹಿರಿಯ ಮುಖಂಡರು, ಸಂಸದರನ್ನು ಎಐಸಿಸಿ ಕೇಂದ್ರ ಕಚೇರಿಗೆ ಯಾವುದೇ ಪೂರ್ವ ಅನುಮತಿ ಇಲ್ಲದೆ ಅತಿಕ್ರಮಣ ಪ್ರವೇಶದ ಮೂಲಕ ಅಮಾನುಷವಾಗಿ ಮಹಿಳಾ ಮುಖಂಡ ರೆಂಬ ವಿವೇಚನೆಯಿಲ್ಲದೆ ಬಂಧಿಸಿದ್ದಾರೆ.

ಕೇಂದ್ರ ಸರ್ಕಾರ ಹಾಗೂ ದೆಹಲಿ ಪೊಲೀಸರು ಮಾನವ ಹಕ್ಕುಗಳ, ಮಹಿಳಾ ಹಕ್ಕುಗಳ ಹಾಗೂ ಪ್ರಜಾಪ್ರಭುತ್ವದ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದರು. ಈ ವೇಳೆ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್‌ ಅವರಿಗೆ ಮನವಿಪತ್ರ ಸಲ್ಲಿಸಿದರು.

Advertisement

ಮಾಜಿ ಶಾಸಕ ವೆಂಕಟಸ್ವಾಮಿ, ಕೆಪಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್‌, ಕೆಪಿಸಿಸಿ ಹಿಂದುಳಿದ ವರ್ಗದ ಉಪಾಧ್ಯಕ್ಷ ಸಿ.ಜಗನ್ನಾಥ್‌, ಕಾರ್ಯದರ್ಶಿ ಎಸ್‌.ಆರ್‌. ರವಿಕುಮಾರ್‌, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ದ್ಯಾವರಹಳ್ಳಿ ವಿ. ಶಾಂತಕುಮಾರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಸನ್ನಕುಮಾರ್‌, ಪ್ರಧಾನ ಕಾರ್ಯದರ್ಶಿ ನಾಗೇಗೌಡ, ಕಾಂಗ್ರೆಸ್‌ ಮುಖಂಡ ಶೆಟ್ಟಿಗೆರೆ ಎಂ.ರಾಜಣ್ಣ, ಕಾಂಗ್ರೆಸ್‌ ಎಸ್‌ಸಿ ವಿಭಾಗದ ಅಧ್ಯಕ್ಷ ಎಂ. ಲೋಕೇಶ್‌, ಕೆಪಿಸಿಸಿ ಸದಸ್ಯ ಎ.ಚಿನ್ನಪ್ಪ, ಮಾದಿಗ ದಂಡೋರ ಪ್ರಚಾರ ಸಮಿತಿ ಅಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ, ತಾಪಂ ಮಾಜಿ ಅಧ್ಯಕ್ಷ ವಿ.ನಾರಾಯಣಸ್ವಾಮಿ, ಎಪಿಎಂಸಿ ನಿರ್ದೇಶಕ ಸುಧಾಕರ್‌, ಗ್ರಾಪಂ ಸದಸ್ಯೆ ಮೀನಾಕ್ಷಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರೇವತಿ, ವಿವಿಧ ಘಟಕದ ಪದಾಧಿಕಾರಿಗಳು ಹಾಗೂ ದೊಡ್ಡಬಳ್ಳಾಪುರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಪದಾಧಿಕಾರಿಗಳು ಇದ್ದರು.

ವಿಚಾರಣೆ ನೆಪದಲ್ಲಿ ಕಿರುಕುಳ: ಆರೋಪ : ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಲೂ ರಾಜಕೀಯ ಎದುರಾಳಿಗಳನ್ನು ನೇರವಾಗಿ ಎದುರಿಸದೆ, ರಾಜಕೀಯ ಪ್ರೇರಿತ ಷಡ್ಯಂತ್ರ ನಡೆಸಿ ಐಟಿ, ಇಡಿ ಹಾಗೂ ಸಿಬಿಐ ನಂತಹ ಸಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಸುಳ್ಳು ಮೊಕದ್ದಮೆ ದಾಖಲಿಸಿ ವಿಚಾರಣೆ ನೆಪದಲ್ಲಿ ಕಿರುಕುಳ ನೀಡುತ್ತಿದ್ದಾರೆ. ಪ್ರಕರಣವನ್ನು ಕುಲಾಸೆ ಮಾಡಿತ್ತು. ಮತ್ತೆ ಪ್ರಕರಣಕ್ಕೆ ಮರುಜೀವ ನೀಡಿ ಕೇಸ್‌ ದಾಖಲಿಸಿಕೊಂಡಿದ್ದಾರೆ ಎಂದು ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next