ಬೆಂಗಳೂರು : ರಾಜ್ಯ ಕಾಂಗ್ರೆಸ್‌ಗೆ ಅಧ್ಯಕ್ಷರನ್ನು ನೇಮಿಸುವಂತೆ ಒತ್ತಾಯ ಮಾಡಿದ್ದೇವೆ. ಇನ್ನೆರಡು ದಿನದಲ್ಲಿ ಈ ಕುರಿತು ಸ್ಪಷ್ಟತೆ ಸಿಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ
ಈಶ್ವರ್ ಖಂಡ್ರೆ ಹೇಳಿದರು.
ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದಿಂದ ನಗರದ ಗುರುನಾನಕ್ ಭವನದಲ್ಲಿ ಏರ್ಪಡಿಸಿದ್ದ ಜಾಗೃತಿ ಸಾಮಾಜಿಕ ಜಾಲತಾಣ ಕಾರ್ಯಗಾರ ಮತ್ತು ಕರ್ನಾಟಕದ ಧ್ವನಿ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗೆಗಿನ ಗೊಂದಲ ಬಗೆಹರಿಸುವಂತೆ ಕೇಂದ್ರಕ್ಕೆ ಒತ್ತಾಯ ಮಾಡಿದ್ದೇವೆ.
ಈ ಬಗ್ಗೆ ಚರ್ಚೆ ಮಾಡಲು ಕೆಪಿಸಿಸಿ ಅಧ್ಯಕ್ಷರಾದ
ದಿನೇಶ್‌ಗುಂಡೂರಾವ್ ಅವರು
ರಾಹುಲ್‌ಗಾಂಧಿಯವರನ್ನು ಭೇಟಿ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಆದಷ್ಟು ಬೇಗ ನಿರ್ಧಾರ ತೆಗೆದುಕೊಳ್ಳುವಂತೆ ನಾವೂ ಒತ್ತಾಯಿಸಿದ್ದೇವೆ. ದಿನೇಶ್ ಗುಂಡೂರಾವ್ ಅವರೇ ಮುಂದುವರೆಯಲಿ ಅಥವಾ ಹೊಸ ಅಧ್ಯಕ್ಷರನ್ನಾದರೂ ನೇಮಕ ಮಾಡಲಿ. ಆದಷ್ಟು ಬೇಗ ಗೊಂದಲ ಬಗೆಹರಿಸಿ ಎಂದು ಮನವಿ ಮಾಡಿದ್ದೇವೆ ಎಂದು ಹೇಳಿದರು.
ಇದಕ್ಕೂ ಮುನ್ನ ಕಾರ್ಯಗಾರ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯವರು ಆರು ವರ್ಷದಿಂದ ಅಧಿಕಾರ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟ, ದೇಶದ ಅಭಿವೃದ್ಧಿ ಸೇರಿದಂತೆ ಯಾವುದಕ್ಕೂ ಕೊಡುಗೆ ನೀಡದ ಬಿಜೆಪಿ ಇದೀಗ ಅಧಿಕಾರ ದೊರೆತರೂ ಸುಳ್ಳೇ ಸಾಧನೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ನಾಯಕರ ಶ್ರಮ ಹಾಗೂ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ಈ ಬಗ್ಗೆ ನಮ್ಮ ಯುವಕರಿಗೆ ಇತಿಹಾಸ ಗೊತ್ತಿಲ್ಲ. ಬಿಜೆಪಿಯವರು ಸುಳ್ಳು ಹೇಳುತ್ತಾ, ಸಮಾಜ ವಿರೋಧಿ ಚಟುವಟಿಕೆಯಲ್ಲಿ ತೊಡಗುತ್ತಿದ್ದಾರೆ. ಇದರ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ರೋಹನ್ ಗುಪ್ತಾ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾದ ಡಾ. ಪುಷ್ಪಾ ಅಮರನಾಥ್, ನಟರಾಜ್ ಗೌಡ, ಮಂಜುನಾಥ ಅದ್ದೆ, ಸೂರ್ಯ ಮುಕುಂದರಾಜ್, ಅಹಮದ್ ಮತ್ತಿತರರು ಪಾಲ್ಗೊಂಡಿದ್ದರು.