ಬೆಂಗಳೂರು: ಬಿಜೆಪಿಯ ಸಾಮಾಜಿಕ ಜಾಲತಾಣದ “ವಾರ್‌ಗೇಮ್’ಗೆ ಪ್ರತಿಯಾಗಿ ಕಾಂಗ್ರೆಸ್ “ಫ್ಯಾಕ್ಟ್ ಬಸ್ಟರ್’ ಎಂಬ ಪ್ರತ್ಯಸ್ತ್ರವನ್ನು ರೂಪಿಸುತ್ತಿದೆ. ಕಾಂಗ್ರೆಸ್ ವಿರುದ್ಧ ಹರಿದಾಡುವ ಊಹಾಪೋಹಗಳು, ಸತ್ಯಕ್ಕೆ ದೂರವಾದ ಮಾಹಿತಿಗಳನ್ನು ಗುರುತಿಸಿ, ಇವುಗಳಿಗೆ ವಾಸ್ತವಾಂಶದ ಮೂಲಕ ತಿರುಗೇಟು ನೀಡಲು ಇದನ್ನು ತಯಾರಿಸಲಾಗಿದೆ. ಈ ಫ್ಯಾಕ್ಟ್ ಬಸ್ಟರ್ ತಂಡಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರೇ ನೇತೃತ್ವ ವಹಿಸಿದ್ದಾರೆ.
ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಸೇರಿದಂತೆ ಕಾಂಗ್ರೆಸ್ ಬಗ್ಗೆ ಇಲ್ಲಸಲ್ಲದ ಸುದ್ದಿಗಳು, ವದಂತಿಗಳು, ತಿರುಚಿದ ಸುದ್ದಿಗಳನ್ನು ಬಿಜೆಪಿಯೇ ಹರಿದಾಡಿಸುತ್ತಿದೆ ಎಂಬ ಆರೋಪಗಳಿವೆ. ಇವುಗಳನ್ನು ಪತ್ತೆಗಾಗಿಯೇ ಕೆಪಿಸಿಸಿ ಮಾಧ್ಯಮ ಘಟಕ, ಸಾಮಾಜಿಕ ಜಾಲತಾಣ ವಿಭಾಗ ಮತ್ತು ಸಂಶೋಧನಾ ಘಟಕದ ಪದಾಧಿಕಾರಿಗಳನ್ನು ಸೇರಿಸಿ ಈ ತಂಡ ರಚಿಸಲಾಗಿದೆ.
ಸುಳ್ಳುಗಳ ಪತ್ತೆ: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅಂತಿಮ ದರ್ಶನಕ್ಕೆ ನೆಹರು ಹೋಗಿರಲಿಲ್ಲ ಎಂದು ಇತ್ತೀಚೆಗೆ ಪ್ರಧಾನಿ ಹೇಳಿದ್ದರು. ಜತೆಗೆ ಸರ್ದಾರ್ ಪಟೇಲ್ ಅವರ ಅಂತ್ಯಸಂಸ್ಕಾರದಲ್ಲೂ ನೆಹರು ಪಾಲ್ಗೊಂಡಿರಲಿಲ್ಲ ಎಂದು ಬಿಜೆಪಿಯ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಾಕಲಾಗಿತ್ತು. ಈ ಬಗ್ಗೆ ಎಐಸಿಸಿ ಹಾಗೂ ಕೆಪಿಸಿಸಿ ಸಂಶೋಧನಾ ಘಟಕ ತಕ್ಷಣ ಇತಿಹಾಸವನ್ನು ಹುಡುಕಿ ಸತ್ಯವನ್ನು ಪ್ರಕಟಿಸುವ ಕೆಲಸ ಮಾಡಿತ್ತು ಎಂದು ನಟರಾಜ್ ಗೌಡ ಹೇಳಿದ್ದರು.
ಪದಾಧಿಕಾರಿಗಳಿಂದ ಸ್ವಯಂಘೋಷಣೆ: ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪಕ್ಷದ ವಿವಿಧ ಘಟಕಗಳಲ್ಲಿ ಕಾರ್ಯ ನಿರ್ವಹಿಸುವ ಪದಾಧಿಕಾರಿಗಳು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಯ ಯಾವುದೇ ನಾಯಕರ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡುವಂತಿಲ್ಲ, ಕೆಟ್ಟದಾಗಿ ಬಿಂಬಿಸುವಂತಿಲ್ಲ. ಯಾವುದೇ ರೀತಿಯ ಸುಳ್ಳು ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸದಂತೆ ಪಕ್ಷದ ಎಲ್ಲ ವಿಭಾಗಗಳ ಪದಾಧಿಕಾರಿಗಳಿಂದ ಪ್ರಮಾಣ ಪತ್ರ ಪಡೆಯಲಾಗಿದೆ. ಸುಳ್ಳು ಸಂದೇಶ ರವಾನಿಸಿದರೆ, ಬಿಜೆಪಿ ನಾಯಕರ ವಿರುದಟಛಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದರೆ ನಾವೇ ಹೊಣೆಗಾರರು ಎಂದು ಡಿಕ್ಲೇರೇಷನ್ ಬರೆಯಿಸಿಕೊಳ್ಳಲಾಗಿದೆ.
ಶಂಕರ ಪಾಗೋಜಿ