Advertisement

Congress; ಸಿದ್ದರಾಮಯ್ಯ ಮತ್ತು ಡಿಕೆಶಿ ಪೈಪೋಟಿಯಿಂದ ಆಡಳಿತದ ಮೇಲೆ ಕೆಟ್ಟ ಪರಿಣಾಮ:ಬೊಮ್ಮಾಯಿ

05:41 PM Aug 28, 2023 | Team Udayavani |

ಹಾವೇರಿ: ‘ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ನಡುವಿನ ಪೈಪೋಟಿ ಆಡಳಿತದ ಮೇಲೆ ಕೆಟ್ಟ ಪರಿಣಾಮ ಬೀರಿದೆ’ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೋಮವಾರ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Advertisement

ಶಿರಡಿ ಸಾಯಿಬಾಬಾ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಸಾಯಿಬಾಬಾ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ‘ರಾಜ್ಯದ ಕಾಂಗ್ರೆಸ್ ಸರಕಾರ ಬಹುಮತ ಪಡೆದ ಸರ್ಕಾರ ಯಾವ ರೀತಿ ಆಡಳಿತ ಮಾಡಬೇಕೋ ಆ ರೀತಿ ಕೆಲಸ ಮಾಡುತ್ತಿಲ್ಲ.ಮುಂದಿನ ಒಂದು ವರ್ಷ ಯಾವುದೇ ಅಭಿವೃದ್ಧಿ ಆಗದ ಹಾಗೆ ಅಭಿವೃದ್ಧಿಯನ್ನೇ ಸ್ತಬ್ದ ಮಾಡಿಬಿಟ್ಟಿದ್ದಾರೆ’ ಎಂದರು.

‘ರಾಜ್ಯದಲ್ಲಿ ಬರಗಾಲದ ಛಾಯೆ ಇದೆ. ಬರಗಾಲ ಘೋಷಣೆ ಮಾಡುತ್ತೇವೆ ಎಂದು ಜೂನ್, ಜುಲೈ ನಲ್ಲಿ ಹೇಳಿದ್ದ ರಾಜ್ಯ ಸರಕಾರ ಇದುವರೆಗೂ ಬರಗಾಲ ಘೋಷಣೆ ಮಾಡಿಲ್ಲ. ರಾಜ್ಯದ ಜಲವನ್ನು ಕಾಪಾಡುವುದರಲ್ಲಿ ವಿಫಲರಾಗಿದ್ದಾರೆ’ ಎಂದರು.

‘ರಾಜ್ಯದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಾ ಇದೆ. ಗುತ್ತಿಗೆದಾರರಿಗೆ ಬಿಲ್ ಕೊಡುವುದಕ್ಕೂ ಸಹಿತ ಕಮಿಷನ್ ಪಡೆಯಲಾಗುತ್ತಿದೆ. ಇಲಾಖೆಗಳಲ್ಲಿ ಕಮಿಷನ್ ದಂಧೆ ಹೆಚ್ಚಾಗುತ್ತಿದೆ. ನೀರಾವರಿ ಯೋಜನೆಗಳು ಸ್ತಬ್ದವಾಗಿವೆ, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕೊಲೆ, ಸುಲಿಗೆ ದಿನ ನಿತ್ಯ ನಡೆಯುತ್ತಿವೆ. ರಾಜ್ಯದ ಜನರ ನಿರೀಕ್ಷಗಳನ್ನು ನೂರು ದಿನಗಳಲ್ಲಿ ಹುಸಿ ಮಾಡಿದ್ದಾರೆ’ ಎಂದರು.

ಬಿಜೆಪಿಯ, ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಪ್ರೆಸ್ ಮೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಸೋತಿರುವ ಸಂದರ್ಭದಲ್ಲಿ ಬಹಳಷ್ಟು ವಿಚಾರ ಹೊರಗಡೆ ಬರುತ್ತಿದೆ. ಕೂತುಕೊಂಡು ಸಮಾಧಾನ ಪಡಿಸುವ ಶಕ್ತಿ ನಮಗಿದೆ. ಕಾಂಗ್ರೆಸ್ ನವರು ಲೋಕಸಭಾ ಚುನಾವಣೆಯಲ್ಲಿ 20ರಿಂದ 21 ಕ್ಷೇತ್ರ ಗೆಲ್ತೀವಿ ಅಂತಿದ್ದಾರೆ. ಆದರೆ ಅವರ ಬಳಿ ಅಭ್ಯರ್ಥಿಗಳೇ ಇಲ್ಲ. ಹೀಗಾಗಿ ನಮ್ಮವರನ್ನು ಆಪರೇಷನ್ ಮಾಡುವ ದುಸ್ಥಿತಿ ಅವರಿಗೆ ಬಂದಿದೆ’ ಎಂದರು.

Advertisement

ರೇಣುಕಾಚಾರ್ಯ ಕಾಂಗ್ರೆಸ್ ಸೇರತ್ತಾರೆ ಎಂಬ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿ,’ಈಗಾಗಲೇ ವರಿಷ್ಠರು ಇದರ ಬಗ್ಗೆ ಎಲ್ಲವನ್ನೂ ಗಮನಿಸಿದ್ದಾರೆ.ಕುಳಿತುಕೊಂಡು ಮಾತಾಡ್ತೇವೆ’ ಎಂದರು.

ಐದು ಗ್ಯಾರಂಟಿಗಳಿಂದ ಸರ್ಕಾರ ವಿವಿಧ ಯೋಜನೆಗಳಿಗೆ ಅನುದಾನ ಕೊರತೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ‘ಈಗಾಗಲೇ ಸರ್ಕಾರಿ ನೌಕರರ ಸಂಬಳ ಸರಿಯಾಗಿ ಬರುತ್ತಿಲ್ಲ. ಸಾರಿಗೆ ನೌಕರರ ಸಂಬಳ ಕೂಡಾ ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ನೀರಿನ ಕ್ಷಾಮ ಹಾಗೂ ವಿದ್ಯುತ್ ಕ್ಷಾಮ ರಾಜ್ಯ ಎದುರಿಸಲಿದೆ. ರಾಜ್ಯದಲ್ಲಿ ಎಷ್ಟು ರೈತರ ಆತ್ಮಹತ್ಯೆ ಆಗಿದೆ ಅದರಲ್ಲಿ ಅರ್ಧದಷ್ಟು ನಮ್ಮ ಹಾವೇರಿ ಜಿಲ್ಲೆಯಲ್ಲಿ ಆಗಿರೋದು ದುರಂತ. ಸಿಎಂ ಜಿಲ್ಲೆಗೆ ಬಂದು ಹೋದರೂ ಯಾವುದೇ ಸಹಾಯ ಸಹಕಾರ, ಆತ್ಮಸ್ಥೈರ್ಯ ರೈತರಿಗೆ ಸಿಕ್ಕಿಲ್ಲ. ರೈತರನ್ನು ಈ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ. ರೈತ ವಿರೋಧಿ, ಅಭಿವೃದ್ಧಿ ವಿರೋಧಿ ಜತೆಗೆ ಮಾನವೀಯತೆ ಕಳೆದುಕೊಂಡಿರುವ ಸರ್ಕಾರ ರಾಜ್ಯದಲ್ಲಿದೆ’ ಎಂದು ಬೊಮ್ಮಾಯಿ ಕಿಡಿ ಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next