ವಿಜಯಪುರ: ದೇಶದ ಮತದಾರರಿಂದ ತಿರಸ್ಕರಿಸಲ್ಪಟ್ಟ ಕಾಂಗ್ರೆಸ್ ಪಕ್ಷ ಮತದಾರರ ಮನಸ್ಸಿನಿಂದಲೂ ದೂರವಾಗಿದೆ. ಕರ್ನಾಟಕದಲ್ಲೂ ಜನರಿಂದ ದೂರವಾಗಿರುವ ಕಾಂಗ್ರೆಸ್ ಪಕ್ಷ ಹೇಗಾದರೂ ಮಾಡಿ ಅಧಿಕಾರಕ್ಕೆ ಬರುವ ಹಗಲು ಕನಸು ಕಾಣುತ್ತಿದೆ. ಭ್ರಷ್ಟಾಚಾರದ ಕುರಿತು ಬಿಜೆಪಿ ವಿರುದ್ದ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಆರೋಪಗಳು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಹಾಸ್ಯಾಸ್ಪದ ಎನಿಸಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ಹೊರ್ತಿ ಗ್ರಾಮದಲ್ಲಿ ಶ್ರೀರೇವಣಸಿದ್ದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರಕ್ಕೂ, ಕಾಂಗ್ರೆಸ್ ಪಕ್ಷಕ್ಕೂ ಅವಿನಾಭಾವ ಸಂಬಂಧ. ಹೀಗಾಗಿ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯೋಗ್ಯತೆಯನ್ನು ಕಾಂಗ್ರೆಸ್ ನಾಯಕರು ಉಳಿಸಿಕೊಂಡಿಲ್ಲ ಎಂದು ಕುಟುಕಿದರು.
ಇದನ್ನೂ ಓದಿ:ಮಕ್ಕಳಲ್ಲಿ ಅಸ್ತಮಾ ಬರುವುದೇಕೆ?ಯಾವ ಮಕ್ಕಳಿಗೆ ಅಸ್ತಮಾ ಹೆಚ್ಚು ಕಾಣಿಸಿಕೊಳ್ಳುತ್ತದೆ
ಕಾಂಗ್ರೆಸ್ ರಾಜ್ಯ ಘಟಕದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಧ್ಯೆ ಅಧಿಕಾರಕ್ಕಾಗಿ ಆಂತರಿಕ-ಬಹಿರಂಗ ಸಮರವೇ ನಡೆದಿದೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕಾಗಿ ಡಿ.ಕೆ.ಶಿವಕುಮಾರ ರಾಜ್ಯಾಧ್ಯಕ್ಷರಾಗಬೇಕಾ ಎಂದು ಡಿಕೆಶಿ ಪರ ಮೃದು ಧೋರಣೆಯ ಮಾತನಾಡಿದ ವಿಜಯೇಂದ್ರ, ದಿನದಿಂದ ದಿನಕ್ಕೆ ಕಾಂಗ್ರೆಸ್ ಪಕ್ಷದಲ್ಲಿರುವ ಗೊಂದಲಗಳು ಹೆಚ್ಚಾಗುತ್ತಿವೆ. ಕೆಲವೇ ದಿನಗಳಲ್ಲಿ ಇದು ತಾರಕಕ್ಕೇರಿ ಜನತೆಗೂ ಬಹಿರಂಗವಾಗಿಯೇ ತಿಳಿಯಲಿದೆ ಎಂದರು.