Advertisement

ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡಿದ್ದಕ್ಕೆ ಇ ಡಿ ನೋಟಿಸ್ : ಸಿ.ಟಿ.ರವಿ

06:06 PM Jul 17, 2022 | Team Udayavani |

ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನಬದ್ಧ ಸಂಸ್ಥೆಗಳ ಬಗ್ಗೆ ಗೌರವ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಹೇಳಿದ್ದಾರೆ.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋನಿಯಾ ಗಾಂಧಿಯವರಿಗೆ ಇ ಡಿ ನೋಟಿಸ್ ಕೊಟ್ಟಿದ್ದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ರಾಷ್ಟ್ರವ್ಯಾಪಿ ಹೋರಾಟ ಹಮ್ಮಿಕೊಂಡಿರುವುದರ ಕುರಿತ ಪ್ರಶ್ನೆಗೆ ಉತ್ತರಿಸಿ, ನ್ಯಾಷನಲ್ ಹೆರಾಲ್ಡ್ ಸಂಸ್ಥೆಗೆ ಸಂಬಂಧಿಸಿ ಆಗಿರುವ ಅವ್ಯವಹಾರಕ್ಕೆ ಸಂಬಂಧಿಸಿ ಇ ಡಿ ನೋಟಿಸ್ ಕೊಡಲಾಗಿದೆ. “ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ” ಎಂಬಂತೆ ನಡೆದುಕೊಂಡ ಕಾರಣ ನೋಟಿಸ್ ಕೊಟ್ಟಿದೆ. ಅವರು ಪ್ರಾಮಾಣಿಕರಿದ್ದರೆ ಇ.ಡಿ.ಗೆ ಯಾಕೆ ಹೆದರಬೇಕು? ಭ್ರಷ್ಟಾಚಾರ ಮಾಡಿದ್ದರೆ ಅವರನ್ನು ಹಾಗೇ ಬಿಡಬೇಕೆಂದು ಕಾಂಗ್ರೆಸ್‍ನವರು ಬಯಸುತ್ತಾರೆಯೇ? ಎಂದು ಪ್ರಶ್ನಿಸಿದರು.

ಸಂವಿಧಾನ ರಚನೆ ಸಂದರ್ಭದಲ್ಲಿ ಅವತ್ತು ಕಾಂಗ್ರೆಸ್ಸಿಗರಿಗೆ ಪ್ರಭಾವ ಇತ್ತು. ಆಗ, ಕಾಂಗ್ರೆಸ್‍ನವರು ಭ್ರಷ್ಟಾಚಾರ ಮಾಡಿದರೆ ಪ್ರಶ್ನಿಸುವಂತಿಲ್ಲ ಎಂಬ ವಿಧಿಯನ್ನು ಸಂವಿಧಾನದಲ್ಲಿ ಸೇರಿಸಬಹುದಿತ್ತು. ಇಷ್ಟಾಗಿಯೂ ತನಿಖೆ ನಡೆಸಿದ್ದರೆ ಅದು ಸಂವಿಧಾನ ವಿರೋಧಿ ಆಗುತ್ತಿತ್ತು. ಈಗ ತನಿಖೆ ನಡೆಸುವುದು ಸಂವಿಧಾನ ಬದ್ಧವಾಗಿದೆ ಎಂದು ತಿಳಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮೇಲೆ ಆರೋಪ ಬಂದಾಗ ಅವರು ಹೇಗೆ ನಡೆದುಕೊಂಡರು ಎಂಬುದನ್ನು ನೋಡಿ ಕಾಂಗ್ರೆಸ್‍ನವರು ಕಲಿಯಬೇಕಿದೆ. ಸತತ 7 ಗಂಟೆಗಳ ಕಾಲ ಎಸ್‍ಐಟಿ ತನಿಖೆಗೆ ಹಾಜರಾದರು. ನಿಮ್ಮ ಥರ ನಾಟಕ ಮಾಡಿಲ್ಲ. ಜನ ಸೇರಿಸಿ ಪ್ರತಿಭಟಿಸಲಿಲ್ಲ. ನ್ಯಾಷನಲ್ ಹೆರಾಲ್ಡ್ ಕೇಸಿನಲ್ಲಿನ ದೌರ್ಬಲ್ಯವನ್ನು ಜನರನ್ನು ಸೇರಿಸಿ ಮುಚ್ಚಿಹಾಕಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ. ಭ್ರಷ್ಟಾಚಾರ ಮುಚ್ಚಿ ಹಾಕಲು ಅದರ ಪ್ರಯತ್ನ ಸಾಗಿದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.

ಸೋನಿಯಾ ಗಾಂಧಿ ಮತ್ತಿತರರು ಜೈಲಿಗೆ ಹೋಗಲಿದ್ದಾರೆಯೇ ಎಂಬುದನ್ನು ತನಿಖಾ ಸಂಸ್ಥೆಗಳು ನಿರ್ಧರಿಸಬೇಕು. ನ್ಯಾಯಾಲಯ ಈ ಕುರಿತು ತಿಳಿಸಬೇಕು. ಜೈಲಿಗೆ ಕಳುಹಿಸುವ ಅಧಿಕಾರ ನನಗಿಲ್ಲ ಎಂದು ಈ ಸಂಬಂಧ ಮತ್ತೊಂದು ಪ್ರಶ್ನೆಗೆ ಅವರು ಉತ್ತರ ಕೊಟ್ಟರು. ಈ ವಿಚಾರದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅಮಾಯಕರಲ್ಲ. ಅಮಾಯಕರಾಗಿದ್ದರೆ ಅವರು ತಲಾ 38 ಶೇಕಡಾ ಷೇರನ್ನು ತಮ್ಮ ಹೆಸರಿಗೆ ವರ್ಗಾಯಿಸುತ್ತಿರಲಿಲ್ಲ ಎಂದರು.

Advertisement

ಸ್ವಾತಂತ್ರ್ಯ ಹೋರಾಟಗಾರರು ಹುಟ್ಟುಹಾಕಿದ ಸಂಸ್ಥೆ ನ್ಯಾಷನಲ್ ಹೆರಾಲ್ಡ್. ಅದನ್ನು ಖಾಸಗಿ ಆಸ್ತಿ ಮಾಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ಒಂದು ಸಾರ್ವಜನಿಕ ಆಸ್ತಿಯನ್ನು ಖಾಸಗಿ ಆಸ್ತಿಯಾಗಿ ಪರಿವರ್ತನೆ ಮಾಡಿಕೊಳ್ಳುವುದು ಅಪರಾಧವಲ್ಲವೇ? ಇದನ್ನು ಹೀಗೇ ಬಿಟ್ಟರೆ ಯಾರು ಭ್ರಷ್ಟಾಚಾರ ಮಾಡಿದರೂ ಪ್ರಶ್ನಿಸುವಂತಿಲ್ಲ ಎಂದಾಗುತ್ತದೆ. ಜನ ಸೇರಿಸಿ óಷೋ ಮಾಡಿದರೆ ಭ್ರಷ್ಟಾಚಾರ ಮುಚ್ಚಿಹಾಕಬಹುದು ಎಂಬ ತಪ್ಪು ಕಲ್ಪನೆ- ತಪ್ಪು ಸಂದೇಶವನ್ನು ಕೊಡಲು ಕಾಂಗ್ರೆಸ್ ಹೊರಟಿದೆ. ಈ ಮೂಲಕ ಭ್ರಷ್ಟಾಚಾರ ಮಾಡಿದವರು ಮೆರೆಯಬಹುದೆಂಬ ಸಂದೇಶ ದೇಶದ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಇದು ಸರಿಯಾದ ಕ್ರಮವಲ್ಲ. ಇದು ಖಂಡನೀಯ ಎಂದು ತಿಳಿಸಿದರು.

ಎನ್‍ಡಿಆರ್ ಎಫ್ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಹಾಳಾದ ಒಂದು ಮನೆಗೆ 95 ಸಾವಿರ ಪರಿಹಾರ ಕೊಡಬೇಕಿದ್ದು, ಬದಲಾಗಿ 5 ಲಕ್ಷವನ್ನು ಸರಕಾರ ನೀಡುತ್ತಿದೆ. ಇದೇ ನಿಯಮಾವಳಿ ಪ್ರಕಾರ ಕೃಷಿ ಭೂಮಿಯಲ್ಲಿ ಬೆಳೆ ನಷ್ಟವಾದರೆ ಒಂದು ಹೆಕ್ಟೇರ್‍ಗೆ 6,500 ರೂಪಾಯಿ ಬದಲಾಗಿ ನಾವು 13 ಸಾವಿರ ಕೊಡುತ್ತಿದ್ದೇವೆ ಎಂದು ಅವರು ವಿವರಿಸಿದರು. ತೋಟಗಾರಿಕೆ ಬೆಳೆಗಳಿಗೆ 28 ಸಾವಿರ ಕೊಡಲಾಗುತ್ತಿದೆ. ಎಲ್ಲ ವಿಷಯದಲ್ಲೂ ಪರಿಹಾರದ ಮೊತ್ತ ಜಾಸ್ತಿ ಮಾಡಿ ನೆರವಿಗೆ ಬರುತ್ತಿದ್ದೇವೆ ಎಂದು ತಿಳಿಸಿದರು.

ಬಹುತೇಕ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ನೆರೆ ಪರಿಹಾರ ಕಾಮಗಾರಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬಳಿಕ ರಾಷ್ಟ್ರಪತಿ ಆಯ್ಕೆ ಚುನಾವಣೆ ಸಂಬಂಧ ತರಬೇತಿಗೆ ಹಾಜರಾಗುತ್ತಿದ್ದಾರೆ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು. ಮುಖ್ಯಮಂತ್ರಿಯವರು ಜಿಲ್ಲಾಧಿಕಾರಿಗಳ ಸಭೆ ನಡೆಸಿದ್ದಲ್ಲದೆ, ಸ್ವತಃ ಅತಿವೃಷ್ಟಿ ಇರುವ ಜಿಲ್ಲೆಗಳಿಗೆ ಭೇಟಿ ಕೊಟ್ಟಿದ್ದಾರೆ. ನೆರೆ ಪರಿಹಾರ ಕಾಮಗಾರಿಯನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದರು.

ರಾಷ್ಟ್ರಪತಿ ಆಯ್ಕೆಗೆ ನಾಳೆ ಚುನಾವಣೆ ನಡೆಯಲಿದೆ. ವಿಧಾನಸಭೆ, ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರು ಮತದಾರರಾಗಿರುವರು. ಕಳೆದ ಬಾರಿ ಇದೇ ಚುನಾಯಿತ ಪ್ರತಿನಿಧಿಗಳ 17 ಮತಗಳು ಅಸಿಂಧುವಾಗಿದ್ದವು. ಹಾಗೆ ಆಗಬಾರದೆಂಬ ಹಿನ್ನೆಲೆಯಲ್ಲಿ ಬಿಜೆಪಿ ಇಡೀ ದೇಶದಲ್ಲಿ ಅಣಕು ಮತದಾನವನ್ನು ಏರ್ಪಡಿಸಿ ತರಬೇತಿ ಕೊಡಲಾಗುತ್ತಿದೆ ಎಂದು ತಿಳಿಸಿದರು. ಶೂನ್ಯ, ಅಸಿಂಧು ಮತ ಇದ್ದರೆ ಅದು ಭಾರತದ ಪ್ರಜಾಪ್ರಭುತ್ವ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಅಗೌರವ ತಂದು ಕೊಡಲಿದೆ ಎಂದು ಅಭಿಪ್ರಾಯಪಟ್ಟರು.

ರಾಷ್ಟ್ರಪತಿ ಚುನಾವಣೆಯಲ್ಲಿ ಜೆಡಿಎಸ್ ಎನ್‍ಡಿಎ ಅಭ್ಯರ್ಥಿಗೆ ಬೆಂಬಲ ಕೊಟ್ಟಿದೆ. ಇದು ಮುಂಬರುವ ಸಾರ್ವತ್ರಿಕ ಚುನಾವಣೆಯ ಫಲಿತಾಂಶದ ಮುನ್ಸೂಚನೆಯೇ ಎಂಬ ಪ್ರಶ್ನೆಗೆ ಉತ್ತರ ಕೊಟ್ಟ ಅವರು, ರಾಷ್ಟ್ರಪತಿ ಅಭ್ಯರ್ಥಿಯ ಆಯ್ಕೆಯನ್ನು ಎನ್‍ಡಿಎ ಮಾಡಿದ್ದರೂ ಆಯ್ಕೆಯಾದ ಬಳಿಕ ರಾಷ್ಟ್ರಪತಿ ಯಾವುದೇ ಪಕ್ಷಕ್ಕೆ ಸೇರಿದವರಾಗಿ ಇರುವುದಿಲ್ಲ. ಆಂಧ್ರದಲ್ಲಿ ಹಾವು ಮುಂಗುಸಿಯಂತಿರುವ ಟಿಡಿಪಿ ಮತ್ತು ವೈಎಸ್‍ಆರ್ ಸಿ ಪಿ ಬೆಂಬಲ ಕೊಟ್ಟಿವೆ. ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ, ಏಕನಾಥ ಶಿಂಧೆ ನೇತೃತ್ವದ ಶಿವಸೇನೆಗಳು ಬೆಂಬಲ ಕೊಡುತ್ತಿವೆ. ಒಡಿಶಾದಲ್ಲಿ ಬಿಜು ಜನತಾದಳದ ಬೆಂಬಲ ಲಭಿಸಿದೆ. ಜಾರ್ಖಂಡ್‍ನಲ್ಲಿ ಕಾಂಗ್ರೆಸ್ ಜೊತೆ ಅಧಿಕಾರದಲ್ಲಿರುವ ಜಾರ್ಖಂಡ್ ಮುಕ್ತಿ ಮೋರ್ಚಾವು ಕೂಡ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುತ್ತಿವೆ. ಇದನ್ನು ಪಕ್ಷಕ್ಕೆ ಜೋಡಿಸಿ ಸಣ್ಣ ರಾಜಕಾರಣ ಮಾಡಲು ಬಯಸುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next