ಹೊಸದಿಲ್ಲಿ: ಉತ್ತರ ಪ್ರದೇಶದ ಮುಖಂಡ ಜಿತಿನ್ ಪ್ರಸಾದ ಬಿಜೆಪಿ ಸೇರ್ಪಡೆಯಾದ ಬಳಿಕ ಕಾಂಗ್ರೆಸ್‌ನಲ್ಲಿ ಬೇಗುದಿ ಹೆಚ್ಚಾಗಿದೆ. ರಾಜಸ್ಥಾನದಲ್ಲಿನ ಅಶೋಕ್ ಗೆಹೊÉàಟ್ ನೇತೃತ್ವದ ಸರಕಾರದಲ್ಲಿ ಸಂಪುಟ ವಿಸ್ತರಣೆ ಆಗಬೇಕು ಎಂಬ ಬೇಡಿಕೆ ಹೆಚ್ಚುತ್ತಿದೆ. 2 ದಿನಗಳಿಂದ ಜೈಪುರದಲ್ಲಿ ಸಚಿನ್ ಪೈಲಟ್ ಪರ ಬೆಂಬಲಿಗರು ಸಭೆ ನಡೆಸಿ ಪೈಲಟ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಸಚಿನ್ ಪೈಲಟ್ ಬಂಡಾಯ ಎದ್ದಿದ್ದ ಸಂದರ್ಭದಲ್ಲಿ ನೀಡಲಾಗಿದ್ದ ಬೇಡಿಕೆ ಈಡೇರಿಕೆಗೆ ಕಾಂಗ್ರೆಸ್ ವರಿಷ್ಠರು ರಚಿಸಿದ್ದ ಸಮಿತಿಯಿಂದ ಪ್ರಯೋಜನವಾಗಿಲ್ಲ. ಅದು ಪೈಲಟ್ ಜತೆಗೆ ಮಾತುಕತೆ ಮಾಡಿಲ್ಲ ಎಂದು ಬೆಂಬಲಿಗರು ದೂರಿದ್ದಾರೆ. ಇದೇ ವೇಳೆ, ಸಿಎಂ ಅಶೋಕ್ ಗೆ
ಹ್ಲೋಟ್ ಕೂಡ ಸಂಪುಟ ವಿಸ್ತರಣೆ ಮಾಡುವ ಇರಾದೆ ಹೊಂದಿದ್ದಾರೆ ಎಂದು ಹೇಳಲಾಗಿದೆ.
ಅಮರಿಂದರ್ ಮುಂದುವರಿಕೆ?: ಪಂಜಾಬ್ ಕಾಂಗ್ರೆಸ್‌ನಲ್ಲಿ ಶಾಸಕ ನವ್‌ಜೋತ್ ಸಿಧು ನೇತೃತ್ವದಲ್ಲಿ ನಾಯಕತ್ವ ಬದಲಾಗಬೇಕು ಎಂಬ ಬೇಡಿಕೆಗೆ ಕಾಂಗ್ರೆಸ್ ವರಿಷ್ಠ ಮಂಡಳಿ ಸೊಪ್ಪು ಹಾಕಿಲ್ಲ. ರಾಜ್ಯಸಭೆಯಲ್ಲಿನ ಪ್ರತೀಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಸಮಿತಿ ಸಿಎಂ ಕ್ಯಾ| ಅಮರಿಂದರ್ ಸಿಂಗ್ ತಮ್ಮ ವರ್ತನೆಯಲ್ಲಿ ತಿದ್ದುಪಡಿ ಮಾಡಿಕೊಳ್ಳಬೇಕು ಮತ್ತು ಮಾಜಿ ಸಚಿವ ನವ್‌ಜೋತ್ ಸಿಧು ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಶಿಫಾರಸು ಮಾಡಿದೆ. ಹೀಗಾಗಿ, 1 ಡಿಸಿಎಂ ಹುದ್ದೆ ಸೃಷ್ಟಿಯಾಗುವ ಸಾಧ್ಯತೆ ಇದೆ.
ಸರ್ಜರಿಯಾಗಬೇಕು: ಜಿತಿನ್ ಪ್ರಸಾದ ಕಾಂಗ್ರೆಸ್ ತ್ಯಜಿಸಿರುವ ಹಿನ್ನೆಲೆಯಲ್ಲಿ ಪ್ರತೀಕ್ರಿಯೆ ನೀಡಿದ ಮಾಜಿ ಸಚಿವ ಎಂ.ವೀರಪ್ಪ ಮೊಲಿ ಪಕ್ಷಕ್ಕೆ ಮೇಜ ಸರ್ಜರಿ ಆಗಬೇಕಾಗಿದೆ ಎಂದಿದ್ದಾರೆ. “ಪಿಟಿಐ’ ಸುದ್ದಿಸಂಸ್ಥೆ ಜತೆಗೆ ಮಾತನಾಡಿದ ಅವರು, ನಾಯಕರಿಗೆ ಹೊಣೆ ಹಂಚುವ ಮೊದಲು ಅವರು ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿರುವರೇ ಎಂಬುದನ್ನು ಗಮನಿಸಬೇಕು ಎಂದು ಸಲಹೆ ಮಾಡಿದ್ದಾರೆ. ಜಿತಿನ್ ಪ್ರಸಾದ ವೈಯಕ್ತಿಕ ಮಹ ತ್ವಾಕಾಂಕ್ಷೆಗಳನ್ನು ಬೆಳೆಸಿಕೊಂಡಿದ್ದರು ಎಂದು ಆರೋಪಿಸಿದ್ದಾರೆ. ಜನರ ಒಲವು ಪಡೆಯದವರನ್ನು ನಾಯಕರನ್ನಾಗಿ ಮಾಡಬಾರದು. ಈ ಬಗ್ಗೆ ಪಕ್ಷದ ವರಿಷ್ಠರು ಪರಾಮರ್ಶೆ ಮಾಡಬೇಕಾಗಿದೆ ಎಂದಿದ್ದಾರೆ. ಪಕ್ಷದ ಜವಾಬ್ದಾರಿಯುತ ಹುದ್ದೆಗಳಿಗೆ ಅಸಮರ್ಥರನ್ನು ನೇಮಕ ಮಾಡದೆ, ಪರಿಶೀಲನೆ ನಡೆಸಿ ಸಮರ್ಥರನ್ನು ನಿಯೋಜಿಸಬೇಕು ಎಂದು ಹೇಳಿದ್ದಾರೆ.
ಬಿಜೆಪಿ ಸೇರಲ್ಲ: ಕೇವಲ ವೈಯಕ್ತಿಕ ಕಾರಣಗಳಿಗಾಗಿ ಜಿತಿನ್ ಪ್ರಸಾದ ಬಿಜೆಪಿ ಸೇರಿದ್ದಾರೆಂದು ಮಾಜಿ ಸಚಿವ ಕಪಿಲ್ ಸಿಬಲ್ ಟೀಕಿಸಿದ್ದಾರೆ. ನೀವು ಬಿಜೆಪಿ ಸೇರುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಬಳಿಕ “ನಾನು ಸತ್ತ ಬಳಿಕ ಆ ಪಕ್ಷ ಸೇರುವೆ’ ಎಂದು ಹೇಳಿದ್ದಾರೆ. 22 ಮಂದಿ ನಾಯಕರು ಪಕ್ಷದಲ್ಲಿ ಸುಧಾರಣೆಯಾಗಬೇಕು ಎಂದು ಒತ್ತಾಯಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು “ಅದೇನಿದ್ದರೂ, ವರಿಷ್ಠರಿಗೆ ಬಿಟ್ಟ ವಿಚಾರ’ ಎಂದರು.