Advertisement

ಕಾಂಗ್ರೆಸ್ ಪಕ್ಷದ ಪಾದಯಾತ್ರೆ ನೀರಿಗಾಗಿ ಅಲ್ಲ,ಮತಕ್ಕಾಗಿ: ಹೆಚ್ ಡಿಕೆ ಕಿಡಿ

06:21 PM Dec 24, 2021 | Team Udayavani |

ಬಿಡದಿ: ಮೇಕೆದಾಟು ಹೆಸರು ಹೇಳಿಕೊಂಡು ಕಾಂಗ್ರೆಸ್ ನಾಯಕರು ಹಮ್ಮಿಕೊಂಡಿರುವ ಪಾದಯಾತ್ರೆ ನೀರಿಗಾಗಿ ಮಾಡುತ್ತಿರುವ ಪಾದಯಾತ್ರೆ ಅಲ್ಲ, ಅದು ಮತಕ್ಕಾಗಿ ಮಾಡುತ್ತಿರುವ ಯಾತ್ರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶುಕ್ರವಾರ ಹೇಳಿಕೆ ನೀಡಿದ್ದಾರೆ.

Advertisement

ಬಿಡದಿ ಪಟ್ಟಣ ಪಂಚಾಯತಿ ಚುನಾವಣೆ ಸಂಬಂಧ ಇಂದು ಭೈರವನ ದೊಡ್ಡಿ (ವಾರ್ಡ್ ನಂಬರ್ 18)ರಲ್ಲಿ ಪ್ರಚಾರ ಮಾಡುವ ವೇಳೆ ಮಾಧ್ಯಮಗಳ ಜತೆ ಅವರು ಮಾತನಾಡಿದರು.

ಮೇಕೆದಾಟು ಯೋಜನೆ ಗೌಡರ ಕನಸಿನ ಕೂಸು

ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡರು ರಾಜ್ಯದ ನೀರಾವರಿಗೆ ನೀಡಿದ ಕೊಡುಗೆ ಬಗ್ಗೆ ಕಾಂಗ್ರೆಸ್ ನಾಯಕರು ತಿಳಿದುಕೊಳ್ಳಬೇಕು. 1996ರಲ್ಲಿ ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ಸಂದರ್ಭದಲ್ಲೇ ಮೇಕೆದಾಟು ಯೋಜನೆ ಬಗ್ಗೆ ನೀಲನಕ್ಷೆ ರೂಪಿಸಲಾಗಿತ್ತು. ಈ ಯೋಜನೆ ಅವರ ಕನಸಿನ ಕೂಸು. ನಾನು ಮುಖ್ಯಮಂತ್ರಿ ಆಗಿದ್ದಾಗ ಸಮಗ್ರ ಯೋಜನಾ ವರದಿ (DPR) ಸಿದ್ಧ ಮಾಡಲಾಯಿತು. ಹಲವಾರು ಬಾರಿ ಪ್ರಧಾನಿಯನ್ನು ಹಾಗೂ ಕೇಂದ್ರ ಜಲ ಸಂಪನ್ಮೂಲ ಸಚಿವರನ್ನು ಕೂಡ ಭೇಟಿ ಮಾಡಿದ್ದೇನೆ. ಹೀಗಾಗಿ ಮೇಕೆದಾಟು ಯೋಜನೆ ಕಾಂಗ್ರೆಸ್ ಕೊಡುಗೆ ಅಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಗೌಡರು 1962ರಲ್ಲಿ ಮೊದಲ ಬಾರಿ ಪಕ್ಷೇತರ ಶಾಸಕರಾಗಿ ಗೆದ್ದು ಬಂದಾಗ ವಿಧಾನಸಭೆಯಲ್ಲಿ ಅವರು ನಡೆಸಿದ ಹೋರಾಟದ ಫಲವಾಗಿ ಇಂದು ಕಾವೇರಿ ನೀರು ರಾಜ್ಯದಲ್ಲಿ ಸದ್ಬಳಕೆ ಆಗುತ್ತಿದೆ. ಅಂದು ಗೌಡರು ಸದನದಲ್ಲಿ ಮಂಡಿಸಿದ ಒಂದು ನಿರ್ಣಯದಿಂದ ಹೇಮಾವತಿ, ಹಾರಂಗಿ ಸೇರಿ ಇನ್ನೂ ಹಲವು ಜಲಾಶಯಗಳ ನಿರ್ಮಾಣಕ್ಕೆ ಕಾರಣವಾಯಿತು. ಈ ಎಲ್ಲ ವಿವರಗಳನ್ನು ಕಾಂಗ್ರೆಸ್ ನಾಯಕರು ಅರಿತು ಯಾತ್ರೆ ಮಾಡಿದರೆ ಒಳಿತು ಎಂದರು.

Advertisement

ಮಾಗಡಿ ಮಾಜಿ ಶಾಸಕರ ವಿರುದ್ಧ ಬಿಸಿ

ರಾಮನಗರ ಜಿಲ್ಲೆಯ ಮಾಜಿ ಶಾಸಕರೊಬ್ಬರು ನಮ್ಮ ಪಕ್ಷ ಮುಳುಗುವ ಹಡಗು ಎಂದು ಹೇಳಿಕೊಂಡಿದ್ದಾರೆ. ಪಾಪ, ಅವರಿಗೆ ನಮ್ಮ ಬಗ್ಗೆ ಯಾಕೆ ಚಿಂತೆ? ಅವರು ನಮ್ಮ ಪಕ್ಷದ ಬಗ್ಗೆ ಮಾತನಾಡುವ ಬದಲು ಕಳೆದ ಚುನಾವಣೆಯಲ್ಲಿ ಆದ ಗತಿಯನ್ನು ಆತ್ಮಾಲೋಕನ ಮಾಡಿಕೊಳ್ಳಲಿ. ಸುಖಾಸುಮ್ಮನೆ ನಮ್ಮ ಪಕ್ಷದ ಬಗ್ಗೆ ಮಾತನಾಡುವುದು ಬೇಡ. ನಮ್ಮ ಪಕ್ಷವನ್ನು ಮುಳುಗಿಸುತ್ತವೆ ಎಂದು ಕಳೆದ ಬಾರಿ ಹೋದರಲ್ಲ, ಟೋಪಿ ಹಾಕಿ. ಆಗ ಆಗಿದ್ದನ್ನು ಮೊದಲು ಅರಗಿಸಿಕೊಳ್ಳಲಿ ಎಂದು ಪರೋಕ್ಷವಾಗಿ ಮಾಗಡಿಯ ಮಾಜಿ ಶಾಸಕ ಬಾಲಕೃಷ್ಣಗೆ ಟಾಂಗ್ ನೀಡಿದರು.

ದೇವರ ಕೃಪೆಯಿಂದ ನಿಖಿಲ್ ನಟನಾಗಿದ್ದು

ನಿಖಿಲ್ ಕುಮಾರಸ್ವಾಮಿ ಅವರು ನಟಿಸಿರುವ ರೈಡರ್ ಸಿನಿಮಾ ಚೆನ್ನಾಗಿ ಬಂದಿದೆ ಎನ್ನುವ ವರದಿ ಬಂದಿದೆ. ಅವರು ನಟರಾಗಿ ವೃತ್ತಿ ಪ್ರಾರಂಭಿಸಿದ್ದಾರೆ. ಈಗಾಗಲೇ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ. ನಮ್ಮ ಕುಟುಂಬದಲ್ಲಿ ಯಾರು ಕಲಾವಿದರಿರಲಿಲ್ಲ. ದೈವ ಕೃಪೆಯಿಂದ ಅವರು ನಟರಾಗಿದ್ದಾರೆ. ಅವರು ಕಲಾವಿದರಾಗಿಯೂ ಮುಂದುವರಿಯಲಿ ಎಂಬುದು ನನ್ನ ಅಭಿಪ್ರಾಯ ಎಂದರು.

ಬದಲಾವಣೆ ಪ್ರಶ್ನೆ ಇಲ್ಲ

ಮೇಲ್ಮನೆಯಲ್ಲಿಯೂ ಮತಾಂತರ ನಿಷೇಧ ಕಾಯ್ದೆಗೆ ವಿರೋಧ ಮಾಡುತ್ತೇವೆ, ಮತಾಂತರ ನಿಷೇಧ ಕಾಯ್ದೆ ವಿರೋಧಿಸುವ ಜೆಡಿಎಸ್ ಪಕ್ಷದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಮತಾಂತರ ಕಾಯ್ದೆ ವಿಚಾರವಾಗಿ ಜೆಡಿಎಸ್ ಸಂಪೂರ್ಣ ವಿರೋಧವಿದೆ. ಈಗಾಗಲೇ ಪಕ್ಷದ ನಿಲುವನ್ನು ತಿಳಿಸಿದ್ದೇವೆ. ಮೇಲ್ಮನೆಯ ನಮ್ಮ ಶಾಸಕರಿಗೆ ಸೂಚನೆ ಕೊಡಲಾಗಿದೆ. ಮತಕ್ಕೆ ಬಂದಾಗ ವಿರೋಧ ಮಾಡಲು ಸೂಚಿಸಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಮಾಗಡಿ ಶಾಸಕರಾದ ಮಂಜುನಾಥ್, ಜಿಲ್ಲೆಯ ಪಕ್ಷದ ಮುಖಂಡರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next