Advertisement

ಗ್ಯಾಸ್‌ ವಿತರಣೆಯಲ್ಲಿ ಶಾಸಕರ ಹಸ್ತಕ್ಷೇಪಕ್ಕೆ ಕಾಂಗ್ರೆಸ್‌ ವಿರೋಧ

07:25 PM Mar 06, 2018 | |

ಶೃಂಗೇರಿ: ಅನಿಲ ಭಾಗ್ಯ ಯೋಜನೆಯಡಿ ತಾಲೂಕಿನ ಎಲ್ಲಾ ಬಿ.ಪಿ.ಎಲ್‌.ಪಡಿತರ ಚೀಟಿ ಹೊಂದಿದವರಿಗೆ ಗ್ಯಾಸ್‌ ಸಂಪರ್ಕ
ಉಚಿತವಾಗಿ ದೊರಕುತ್ತಿದ್ದರೂ, ಶಾಸಕ ಡಿ.ಎನ್‌.ಜೀವರಾಜ್‌ ಗ್ಯಾಸ್‌ ವಿತರಣೆಯಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡಿದ್ದಾರೆ
ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನಟರಾಜ್‌ ಆಕ್ಷೇಪಿಸಿದರು.

Advertisement

ಅವರು ಸೋಮವಾರ ಮೆಣಸೆ ಗ್ರಾ.ಪಂ.ಎದುರು ಬ್ಲಾಕ್‌ ಕಾಂಗ್ರೆಸ್‌ ಆಯೋಜಿಸಿದ್ದ ಧರಣಿ ಸಂದರ್ಭದಲ್ಲಿ ಮಾತನಾಡಿದರು.
ಫಲಾನುಭವಿ ಗ್ಯಾಸ್‌ ಪಡೆಯಲು ಗ್ರಾ.ಪಂ.ಗೆ ತೆರಳಿದಾಗ ಶಾಸಕರ ಪತ್ರ ತರಬೇಕು ಎಂದು ಅಧಿಕಾರಿಗಳು ಹೇಳಿದ್ದಾಗಿ
ಫಲಾನುಭವಿಗಳು ಹೇಳಿಕೊಂಡಿದ್ದಾರೆ. ಆದರೆ ಫಲಾನುಭವಿಗಳನ್ನು ಸರಕಾರ ನೇರವಾಗಿ ಅಂತರ್ಜಾಲದ ಮೂಲಕ ಆಯ್ಕೆ
ಮಾಡಿದ್ದು, ಇದರಲ್ಲಿ ಶಾಸಕರ ಪಾತ್ರವಿಲ್ಲ. ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‌ ಸರಕಾರದ ಸಾಧನೆಯನ್ನು ತಾನು
ಮಾಡಿರುವುದಾಗಿ ಜನರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು. ಮೆಸ್ಕಾಂ ನಿರ್ದೇಶಕ ಕಾನುವಳ್ಳಿ ಕೃಷ್ಣಪ್ಪ ಗೌಡ ಮಾತನಾಡಿ,ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ರಾಜ್ಯದಲ್ಲಿ 30 ಲಕ್ಷ ಅನಿಲ ರಹಿತ ಗ್ರಾಹಕರನ್ನು ಗುರುತಿಸಿ,ಅವರಿಗೆ
ಅನಿಲ ವಿತರಣೆಗೆ ಕ್ರಮ ಕೈಗೊಂಡಿದೆ. ಮೊದಲ ಹಂತವಾಗಿ 10 ಲಕ್ಷ ಜನರಿಗೆ ಅನಿಲ ದೊರಕಲಿದ್ದು,ಇದಕ್ಕಾಗಿ ಅಗತ್ಯ ದಾಖಲೆ
ನೀಡಬೇಕು.ಇದಕ್ಕಾಗಿ ಯಾರ ಪತ್ರ ಅಥವಾ ಶಿಪಾರಸ್ಸಿನ ಅಗತ್ಯವಿಲ್ಲ ಎಂದರು.

ಸ್ಥಳಕ್ಕೆ ಆಗಮಿಸಿದ ತಾ.ಪಂ. ಕಾರ್ಯನಿರ್ವಹಣಾ ಧಿಕಾರಿ ಮೂಕಪ್ಪಗೌಡ ಮಾತನಾಡಿ, ಶಾಸಕರ ಪತ್ರ ತರಬೇಕು ಎಂಬ
ಯಾವುದೇ ಸೂಚನೆಯನ್ನು ಅಧಿಕಾರಿಗಳಿಗೆ ನೀಡಿಲ್ಲ. ಈಗಾಗಲೇ ಮೊದಲ ಪಟ್ಟಿಯಂತೆ ಅರ್ಹ ಫಲಾನುಭವಿಗಳಿಗೆ ಗ್ಯಾಸ್‌
ನೀಡಲಾಗುತ್ತಿದೆ ಎಂದರು. ಖಚಿತ ಉತ್ತರ ದೊರಕಿದ ಹಿನ್ನೆಲೆಯಲ್ಲಿ ಧರಣಿಯನ್ನು ಹಿಂಪಡೆಯಲಾಯಿತು. ಧರಣಿಯಲ್ಲಿ ಮೆಣಸೆ ಗ್ರಾ.ಪಂ. ಸದಸ್ಯರಾದ ಶಾಮಣ್ಣ, ಶ್ವೇತಾ, ಮಂಜುನಾಥ, ಟಿ.ಎ.ಪಿ.ಸಿ.ಎಂ.ಎಸ್‌. ನಿರ್ದೇಶಕ ತ್ರಿಮೂರ್ತಿ, ಹಾಲಂದೂರು ಪಿ.ಎ.ಸಿ.ಎಸ್‌ .ಅಧ್ಯಕ್ಷ ಚಂದ್ರಶೇಖರ್‌, ಕಾಂಗ್ರೆಸ್‌ ಮುಖಂಡ ಎಸ್‌.ತಿಮ್ಮಪ್ಪ ಮತ್ತಿತರರು ಇದ್ದರು. 

ಕೂತಗೋಡಿನಲ್ಲೂ ಪ್ರತಿಭಟನೆ: ಶಾಸಕರು ಪ್ರತ್ಯೇಕವಾಗಿ ಅನಿಲ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಪತ್ರ ಬರೆದಿರುವುದು ಹಾಸ್ಯಸ್ಪದವಾಗಿದೆ ಎಂದು ಎ.ಪಿ.ಎಂ.ಸಿ.ಅಧ್ಯಕ್ಷ ಕೆ.ಎಂ.ರಮೇಶ್‌ ಭಟ್‌ ಹೇಳಿದರು. ಕೂತಗೋಡು ಗ್ರಾ.ಪಂ.ಎದುರು ಬ್ಲಾಕ್‌
ಕಾಂಗ್ರೆಸ್‌ ಸೋಮವಾರ ಆಯೋಜಿಸಿದ್ದ ಧರಣಿ ಸಂದರ್ಭದಲ್ಲಿ ಮಾತನಾಡಿದರು. ರಾಜ್ಯ ಸರಕಾರ ಬಡವರಿಗಾಗಿ ಅಹಲವಾರು ಯೋಜನೆಯನ್ನು ಜಾರಿಗೆ ತಂದಿದ್ದು,ಅದರಂತೆ ಅನಿಲ ಭಾಗ್ಯ ಯೋಜನೆಯಾಗಿದ್ದು,ಸರಕಾರ ನೀಡಿರುವ ಪಟ್ಟಿಯಂತೆ ಬಿ.ಪಿ.ಎಲ್‌.ಪಡಿತರ ಚೀಟಿ ಹೊಂದಿದವರಿಗೆ ಅನಿಲ ವಿತರಣೆಗೆ ಗ್ರಾ.ಪಂ.ಕ್ರಮ ಕೈಗೊಳ್ಳಬೇಕು. ಅನ್ನ ಭಾಗ್ಯ ಯೋಜನೆಯಂತೆ ಬಡವರು ಹೊಂದಿರುವ ಪಡಿತರ ಚೀಟಿ ಆಧಾರದ ಮೇಲೆ ಸರಕಾರ ಆಯ್ಕೆ ಪ್ರಕ್ರಿಯೆ ಆನ್‌ಲೈನ್‌ ಮೂಲಕ ಮಾಡಿದೆ. ಇದಕ್ಕಾಗಿ ಯಾರು ಅರ್ಜಿ ನೀಡಬೇಕಿಲ್ಲ. ಯಾರ ಅನುಮತಿ ಪತ್ರವೂ ಅಗತ್ಯವಿಲ್ಲ. ಕೇಂದ್ರ ಸರಕಾರ ಬಡವರಿಗೆ ಅನಿಲ ಭಾಗ್ಯ ಯೋಜನೆ ಜಾರಿ ತಂದಿದ್ದರೂ,ಅದನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ. ಆದರೆ ರಾಜ್ಯ ಸರಕಾರ ಇದಕ್ಕಾಗಿ 1350 ಕೋಟಿ ರೂ.ಮೀಸಲು ಇರಿಸಿದೆ ಎಂದರು.

ಕೂತಗೋಡು ಗ್ರಾ.ಪಂ.ಅಧ್ಯಕ್ಷ ನಾಗೇಶ್‌ ಹೆಗ್ಡೆ ಮಾತನಾಡಿ, ಗ್ರಾ.ಪಂ.ವ್ಯಾಪ್ತಿಯ ಅರ್ಹ ಬಿ.ಪಿ.ಎಲ್‌.ಪಡಿತರ ಚೀಟಿ ಹೊಂದಿದ ಗ್ರಾಹರೆಲ್ಲರಿಗೂ ಶೀಘ್ರದಲ್ಲಿ ಗ್ಯಾಸ್‌ ದೊರಕಲಿದೆ. ಸರಕಾರ ಈ ಆಯ್ಕೆ ಮಾಡಿದ್ದು,ಅಗತ್ಯ ದಾಖಲೆ ನೀಡಿ ಗ್ಯಾಸ್‌ ಪಡೆಯಬಹುದಾಗಿದೆ ಎಂದರು. ಧರಣಿಯಲ್ಲಿ ಸುಬ್ಬಣ್ಣ, ಶ್ರೀನಾಥ್‌, ಚಂದ್ರಶೇಖರ್‌, ಚನ್ನಕೇಶವ, ರಾಜಶೇಖರ್‌ ಮತ್ತಿತರರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next