Advertisement
ಸಂಕ್ರಾಂತಿ ಹಬ್ಬದ ಶುಭಾಶಯ ಕೋರುವ ನೆಪದಲ್ಲಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಸಚಿವ ಸತೀಶ್ ಜಾರಕಿಹೊಳಿ, ಮುಂದೂಡಲ್ಪಟ್ಟ ದಲಿತ ಮುಖಂಡರ ಔತಣಕೂಟ ಸಭೆ, ವರಿಷ್ಠರು ನೀಡಿದ ಶಿಸ್ತಿನ ಪಾಠ, ಸಿಎಲ್‌ಪಿ ಅನಂತರ ತಾವು ಸುರ್ಜೇವಾಲ ಅವರನ್ನು ಭೇಟಿ ಮಾಡಿದ್ದರ ಸಹಿತ ಹಲವು ವಿಷಯಗಳ ಕುರಿತು ಸುಮಾರು ಒಂದೂವರೆ ತಾಸು ಚರ್ಚೆ ನಡೆಸಿದರು. ಈ ವೇಳೆ ಸಿಎಲ್‌ಪಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ತಮ್ಮ ನಡುವೆ ನಡೆದ ಜಟಾಪಟಿ ಬಗ್ಗೆ ಪ್ರಮುಖವಾಗಿ ಪ್ರಸ್ತಾವವಾಯಿತು ಎನ್ನಲಾಗಿದೆ
ಈ ವೇಳೆ ಬೆಳಗಾವಿಯಲ್ಲಿ ಕಾಂಗ್ರೆಸ್ ಕಚೇರಿಯ ಕಟ್ಟಡ ಕಟ್ಟಿದ್ದು ನಾವು. 3 ಕೋಟಿ ರೂ. ಖರ್ಚು ಮಾಡಿದ್ದೇವೆ. ಹಿಂದೆಲ್ಲ ಪಕ್ಷಕ್ಕೆ ಖರ್ಚು ಮಾಡಿದ್ದು ನಾವು. ತಮಗೂ ಅದು ಗೊತ್ತಿದೆ. ಹೀಗಿರುವಾಗ ಸುರ್ಜೇವಾಲ ಮುಂದೆ ನನ್ನ ಮೇಲೆ ಗೂಬೆ ಕೂರಿಸಲಾಗಿದೆ. ದಿಲ್ಲಿಗೆ ಹೋದಾಗ ವರಿಷ್ಠರ ಗಮನಕ್ಕೆ ಇದನ್ನು ತರಬೇಕು ಎಂದು ಸತೀಶ್ ಜಾರಕಿಹೊಳಿ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು ಎಂದು ಮೂಲಗಳು ತಿಳಿಸಿವೆ. ಇವರ ಬೆನ್ನಲ್ಲೇ ಸಚಿವ ಎಂ.ಬಿ. ಪಾಟೀಲ್ ಕೂಡ ಸಿಎಂ ಅವರನ್ನು ಭೇಟಿಯಾದರು. ಅನಂತರ ಬೆಳಗಾವಿ ರಾಜಕಾರಣ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ಕೆ. ಶಿವಕುಮಾರ್ ಮತ್ತು ಸತೀಶ ಜಾರಕಿಹೊಳಿ ನಡುವೆ ಯಾವುದೇ ಜಗಳ ಅಥವಾ ಮನಸ್ತಾಪಗಳಿಲ್ಲ. ಎಲ್ಲರೂ ಸೇರಿಯೇ ಪಕ್ಷದ ಕಚೇರಿ ನಿರ್ಮಿಸಿದ್ದಾರೆ ಎಂದಿದ್ದಾರೆ. ಹಾಗಾಗಿ ಈ ವಿಷಯದಲ್ಲಿ ಗೊಂದಲ ಬೇಡ ಎಂದು ಸ್ಪಷ್ಟಪಡಿಸಿದರು.
Related Articles
ಬೆಳಗಾವಿ ಸಚಿವರ ಜಟಾಪಟಿ ವಿಷಯದಲ್ಲಿ ಗೃಹ ಸಚಿವ ಡಾ| ಪರಮೇಶ್ವರ ಅವರು ಸತೀಶ್ ಜಾರಕಿಹೊಳಿ ಪರ ಮಾತನಾಡಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗ ಬೆಳಗಾವಿಗೆ ಹೋದಾಗ ಕಚೇರಿ ಇರಲಿಲ್ಲ. ಆಗ ಪಕ್ಷದ ಕಚೇರಿ ನಿರ್ಮಿಸಿ ಎಂದು ನಾನು ಸತೀಶ್ ಜಾರಕಿಹೊಳಿಗೆ ಹೇಳಿದ್ದೆ. ಅದಕ್ಕಾಗಿ 45 ಲಕ್ಷ ರೂ. ಕೊಟ್ಟಿದ್ದೆ. ನಾನು ಕೆಳಗಿಳಿದ ಮೇಲೆ ಆ ಕಚೇರಿ ಉದ್ಘಾಟನೆ ಆಯಿತು. ಯಾರು ಹಣ ಕೊಟ್ಟರು ಎಂದು ಕೂಡ ಡಿ.ಕೆ. ಶಿವಕುಮಾರ್ ಹೇಳಿಲ್ಲ. ಆದರೆ ಸತೀಶ್ ಹೆಚ್ಚು ಹಣ ಕೊಟ್ಟಿದ್ದರು ಅಂತ ಹೇಳಬಹುದಿತ್ತು ಎಂದರು.
Advertisement