ವಾಡಿ: ಪುರಸಭೆ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷ ಬಲಪಡಿಸಿದ್ದಾರೆ. ಪಟ್ಟಣದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಮುನ್ನುಡಿ ಬರೆಯಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯ್ಯದ್ ಮಹೆಮೂದ್ ಸಾಹೇಬ್ ತಿಳಿಸಿದರು. ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರ ಅಭಿವೃದ್ಧಿ ಗತಿ ಅರಿತುಕೊಂಡು ಬಿಜೆಪಿಯನ್ನು ದೂರ ಇಡುವ ಮೂಲಕ ಮತದಾರರು ಕಾಂಗ್ರೆಸ್ ಕನುಸುಗಳಿಗೆ ಬಲ ತುಂಬಿದ್ದಾರೆ. ಜನರ ನಿರೀಕ್ಷೆ ಹುಸುಗೊಳಿಸದೇ ಬದಲಾವಣೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು. ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿ ಬಂಡಾಯ ನಮಗೆ ತಲೆ ಬಿಸಿ ಮಾಡಿತು.
ಪಕ್ಷದ ವಿರುದ್ಧ ಕೆಲವರು ಕೆಲಸ ಮಾಡಿದ್ದರಿಂದ ಈ ಚುನಾವಣೆಯಲ್ಲಿ ಇನ್ನೂ ನಾಲ್ಕಾರು ಸ್ಥಾನಗಳು ಕೈತಪ್ಪಿದವು. ಕೆಲವೆಡೆ ಬಿಜೆಪಿ ಗೆಲ್ಲಲು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳು ಕಾರಣವಾಗಿದ್ದಾರೆ. ಪಕ್ಷ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಪಕ್ಷ ವಿರೋಧಿಧಿ ಚಟುವಟಿಕೆ ಮಾಡಿದವರ ಹೆಸರುಗಳನ್ನು ಹೈಕಮಾಂಡ್‌ಗೆ ಸಲ್ಲಿಸಲಾಗಿದೆ.
ಅಂತವರ ವಿರುದ್ಧ ಖಂಡಿತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಪುರಸಭೆ ಕಚೇರಿಗೆ ನೂತನ ಕಟ್ಟಡ, ಶುದ್ಧ ಕುಡಿಯುವ ನೀರು, ನಿಯಮಬದ್ಧವಾಗಿ ಬಡಾವಣೆಗಳಿಗೆ ನೀರು ಪೂರೈಕೆ, ಪ್ರತಿನಿತ್ಯ ಸ್ವತ್ಛತೆ ಮತ್ತು ಕಸ ವಿಲೇವಾರಿ, ಪೌರ ಕಾರ್ಮಿಕರಿಗೆ ಪ್ರತಿ ತಿಂಗಳು ಕಡ್ಡಾಯವಾಗಿ ವೇತನ ಬಿಡುಗಡೆ, ಕರ ವಸೂಲಿಗೆ ವಿಶೇಷ ಕ್ರಮ, ಹದಗೆಟ್ಟ ರಸ್ತೆಗಳ ದುರಸ್ಥಿ, ನಗರದ ವಿವಿಧ ಬಡಾವಣೆಗಳಿಗೆ ವಿದ್ಯುತ್ ಬೆಳಕಿನ ಸೌಕರ್ಯ ಒದಗಿಸಲಾಗುವುದು.
ಶ್ರೀನಿವಾಸಗುಡಿ ವೃತ್ತದಿಂದ ಬಳಿರಾಮ ಚೌಕ್ ವರೆಗಿನ ಮುಖ್ಯ ರಸ್ತೆ ಮಧ್ಯೆ ಸಾಲು ವಿದ್ಯುತ್ ದೀಪಗಳ ಅಳವಡಿಕೆ ಸೇರಿದಂತೆ ರಸ್ತೆಯನ್ನು ಎರಡು ಭಾಗವಾಗಿ ವಿಂಗಡಿಸಿ ಅಪಘಾತ ನಿಯಂತ್ರಣಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು. ಮತದಾರರಿಗೆ ಮಾತು ಕೊಟ್ಟಿರುವಂತೆ ನಡೆದುಕೊಳ್ಳುತ್ತೇವೆ.
ಕಾಂಗ್ರೆಸ್‌ನಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂಬುದನ್ನು ಸಾಧಿಧಿಸಿ ತೋರಿಸುತ್ತೇವೆ ಎಂದು ತಿಳಿಸಿದರು. ಕಾಂಗ್ರೆಸ್ ಹಿರಿಯ ಮುಖಂಡ ಟೋಪಣ್ಣ ಕೋಮಟೆ, ಎಪಿಎಂಸಿ ಮಾಜಿ ಅಧ್ಯಕ್ಷ ಶಂಕ್ರಯ್ಯಸ್ವಾಮಿ ಮದರಿ, ವಾಡಿ-ಶಹಾಬಾದ ನಗರ ಯೋಜನೆ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚಂದ್ರಸೇನ ಮೇನಗಾರ ಸುದ್ದಿಗೋಷ್ಠಿಯಲ್ಲಿದ್ದರು.