ಮುಂಬೈ: ಮಹಾರಾಷ್ಟ್ರದಲ್ಲಿ ಸರಕಾರ ರಚನೆಗೆ ಸಂಬಂಧಿಸಿದಂತೆ ಬಿಜೆಪಿ-ಶಿವಸೇನಾ ನಡುವೆ ಹಗ್ಗ ಜಗ್ಗಾಟ ಮುಂದುವರಿದಿರುವ ನಡುವೆಯೇ , ತಮ್ಮ ಪಕ್ಷದ ಜತೆ ಕಾಂಗ್ರೆಸ್, ಎನ್ ಸಿಪಿ ಪಕ್ಷಗಳೂ ಕೂಡಾ ಸಂಪರ್ಕದಲ್ಲಿದೆ ಎಂದು ಶಿವಸೇನಾ ಮುಖಂಡ, ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ತಿಳಿಸಿದ್ದಾರೆ.
ಮತ್ತೊಂದೆಡೆ ನೂತನವಾಗಿ ಆಯ್ಕೆಯಾದ ಪಕ್ಷದ ಶಾಸಕರ ಜತೆಗಿನ ಮಾತುಕತೆ ವೇಳೆ ಪಕ್ಷದ ವರಿಷ್ಠ ಉದ್ಧವ್ ಠಾಕ್ರೆ, ಯಾವುದೇ ಕಾರಣಕ್ಕೂ ಊಹಾಪೋಹಗಳನ್ನು ನಂಬಲು ಹೋಗಬೇಡಿ ಎಂದು ತಿಳಿಸಿದ್ದರು.
ನಮಗೆ ಬೇರೆ ರಾಜಕೀಯ ಪಕ್ಷಗಳ ಆಫರ್ ಇನ್ನಷ್ಟೇ ಬರಬೇಕಾಗಿದೆ. ಆದರೆ ಕೆಲವು ಪಕ್ಷಗಳು ಮಾಧ್ಯಮಗಳ ಮೂಲಕ ತಮ್ಮ ಪ್ರಸ್ತಾಪವನ್ನು ಮಂಡಿಸುತ್ತಿದ್ದಾರೆ. ಅಲ್ಲದೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಧಿಕಾರ ಹಂಚಿಕೆಯ 50;50 ಸೂತ್ರವನ್ನು ಈಡೇರಿಸಲಿದ್ದಾರೆ ಎಂದು ಉದ್ಧವ್ ಈ ಸಂದರ್ಭದಲ್ಲಿ ವಿಶ್ವಾಸವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣೆಗೂ ಮುನ್ನ ನಡೆದ ಮಾತುಕತೆ ವೇಳೆ 50;50 ಸೂತ್ರದ ಬಗ್ಗೆ ಒಪ್ಪಿಗೆ ಸೂಚಿಸಿರುವುದಾಗಿ ಉದ್ಧವ್ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.
ಈ ಮೂಲಕ ಮುಖ್ಯಮಂತ್ರಿ ಸ್ಥಾನದಲ್ಲಿ ಎರಡೂವರೆ ವರ್ಷ ಬಿಜೆಪಿಯ ಫಡ್ನವೀಸ್ ಗೆ ಹಾಗೂ ಉಳಿದ ಎರಡೂವರೆ ವರ್ಷ ಶಿವಸೇನಾದ ಆದಿತ್ಯ ಠಾಕ್ರೆಗೆ ನೀಡಬೇಕೆಂಬುದು ಶಿವಸೇನಾದ ಆಗ್ರಹವಾಗಿದೆ.