Advertisement

ಜಾತಿವಾದ, ಭ್ರಷ್ಟತೆಯೇ ಕಾಂಗ್ರೆಸ್‌ ಮಾದರಿ: ಮೆಹ್ಸಾನಾ ರ್‍ಯಾಲಿಯಲ್ಲಿ ಪ್ರಧಾನಿ ಮೋದಿ

12:29 AM Nov 24, 2022 | Team Udayavani |

ಮೆಹ್ಸಾನಾ: “ಕಾಂಗ್ರೆಸ್‌ ಮಾದರಿ ಎಂದರೆ ಜನರ ನಡುವೆ ಕಂದಕ ಸೃಷ್ಟಿಸುವಂಥ ಜಾತಿವಾದ, ಮತ­ಬ್ಯಾಂಕ್‌ ರಾಜಕಾರಣವೇ ಆಗಿದೆ. ಇಡೀ ದೇಶವನ್ನೇ ಹಾಳು ಮಾಡಿರುವಂಥ ಮಾದರಿಯಿದು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Advertisement

ಗುಜರಾತ್‌ನ ಮೆಹ್ಸಾನಾದಲ್ಲಿ ಬಿಜೆಪಿ ಅಭ್ಯರ್ಥಿ ಪರ ಬುಧವಾರ ನಡೆದ ಪ್ರಚಾರ ರ್‍ಯಾಲಿಯಲ್ಲಿ ಮಾತನಾಡಿದ ಅವರು, “ಬಿಜೆಪಿ ಯಾವತ್ತೂ ತಾರತಮ್ಯ ಮತ್ತು ಓಲೈಕೆ ರಾಜಕಾರಣ ಮಾಡಿಲ್ಲ. ಅದೇ ಕಾರಣಕ್ಕೆ ಆಡಳಿತಾರೂಢ ಪಕ್ಷದ ಮೇಲೆ ಯುವಜನರು ನಂಬಿಕೆಯಿಟ್ಟಿರುವುದು. ಕಾಂಗ್ರೆಸ್‌ ಮಾದರಿ ಎಂದರೆ ಭ್ರಷ್ಟಾಚಾರ, ಸ್ವಜನಪಕ್ಷ­ಪಾತ, ವಂಶಾಡಳಿತ, ಜಾತಿವಾದ’ ಎಂದು ಹೇಳಿದರು.

ಬಳಿಕ, ದಾಹೋದ್‌ನಲ್ಲಿ ರ್‍ಯಾಲಿ ನಡೆಸಿದ ಮೋದಿ, “ವಿಪಕ್ಷ ಕಾಂಗ್ರೆಸ್‌ಗೆ ಬುಡಕಟ್ಟು ಜನಾಂಗದವರ ಮೇಲೆ ಅಷ್ಟೊಂದು ಗೌರವವಿದ್ದರೆ, ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಅವರಿಗೆ ಏಕೆ ಬೆಂಬಲ ನೀಡಲಿಲ್ಲ’ ಎಂದು ಪ್ರಶ್ನಿಸಿದರು.

ಆಪ್‌ನ ಶೋಲೆ ಡೈಲಾಗ್‌: ಆಮ್‌ ಆದ್ಮಿ ಪಕ್ಷದ ಪರವಾಗಿ ಬುಧವಾರ ಅಹ್ಮದಾಬಾದ್‌ನಲ್ಲಿ ಪ್ರಚಾರ ನಡೆಸಿದ ಸಂಸದ ರಾಘವ್‌ ಛಡ್ಡಾ, ಬಾಲಿವುಡ್‌ ಬ್ಲಾಕ್‌ಬಸ್ಟರ್‌ “ಶೋಲೆ’ ಸಿನೆಮಾದ ಡೈಲಾಗ್‌ ಹೇಳುವ ಮೂಲಕ ಗಮನ ಸೆಳೆದಿದ್ದಾರೆ.

ಭ್ರಷ್ಟರಿಗೆ ಕೇಜ್ರಿವಾಲ್‌ ಅವರು ಸಿಂಹಸ್ವಪ್ನ ಎಂದ ಅವರು, “ಶೋಲೆ ಸಿನೆಮಾದಲ್ಲಿ ಸೋ ಜಾ ಬೇಟಾ ವರ್ನಾ ಗಬ್ಬರ್‌ ಆ ಜಾಯೇಗಾ’ ಎಂಬ ಡೈಲಾಗ್‌ ಇದೆ. ಈಗ ಗುಜರಾತ್‌ನಲ್ಲೂ ಯಾವುದೇ ಭ್ರಷ್ಟ ರಾಜಕಾರಣಿ ಸದ್ದು ಮಾಡಲು ಯತ್ನಿಸಿದರೆ, ಆತನ ತಾಯಿ, “ಸೋ ಜಾ ಬೇಟಾ ವರ್ನಾ ಕೇಜ್ರಿವಾಲ್‌ ಆ ಜಾಯೇಗಾ'(ಮಲಗು ಮಗನೇ, ಇಲ್ಲದಿದ್ದರೆ ಕೇಜ್ರಿವಾಲ್‌ ಬರುತ್ತಾರೆ ಮತ್ತು ನಿನ್ನನ್ನು ಜೈಲಿಗಟ್ಟುತ್ತಾರೆ) ಎಂದು ಹೇಳುತ್ತಾರೆ. ಕೇಜ್ರಿವಾಲ್‌ ಹುಟ್ಟಿರುವುದೇ ಭ್ರಷ್ಟಾಚಾರ ಕೊನೆಗಾಣಿ­ಸಲು ಎಂದೂ ರಾಘವ್‌ ಹೇಳಿದ್ದಾರೆ.

Advertisement

ಮತ ಹಾಕದಿದ್ರೆ ಫೈನ್‌!
ರಾಜ್‌ಕೋಟ್‌ನ ರಾಜ್‌ ಸಮಾಧಿಯಾಲಾ ಎಂಬ ಗ್ರಾಮದಲ್ಲಿ ವಿಚಿತ್ರ ನಿಯಮವೊಂದನ್ನು ಜಾರಿ ಮಾಡಲಾಗಿದೆ. ಈ ಗ್ರಾಮದಲ್ಲಿ ರಾಜಕೀಯ ಪ್ರಚಾರಕ್ಕೆ ನಿಷೇಧ ಹೇರಲಾಗಿದೆ. ಪಕ್ಷಗಳು ಪ್ರಚಾರಕ್ಕೆ ಬರುವುದರಿಂದ ಗ್ರಾಮಕ್ಕೆ ತೊಂದರೆ­ಯಾಗುತ್ತದೆ ಎಂಬ ಕಾರಣಕ್ಕೆ ಯಾವುದೇ ಅಭ್ಯರ್ಥಿಯನ್ನೂ ಇಲ್ಲಿಗೆ ಬರಲು ಬಿಡುತ್ತಿಲ್ಲ. ಆದರೆ ಗ್ರಾಮಸ್ಥರೆಲ್ಲರೂ ಹಕ್ಕು ಚಲಾಯಿಸಬೇಕು ಎಂಬ ಆದೇಶವನ್ನೂ ನೀಡಲಾಗಿದೆ. ಯಾರು ಮತ ಚಲಾಯಿಸುವು­ದಿಲ್ಲವೋ ಅವರಿಗೆ 51 ರೂ. ದಂಡ ವಿಧಿಸುವುದಾಗಿ ಎಚ್ಚರಿಸಲಾಗಿದೆ.

ರಾಹುಲ್‌ ಸದ್ದಾಂ ಹುಸೇನ್‌ರಂತೆ ಕಾಣುತ್ತಾರೆ!
ಭಾರತ್‌ ಜೋಡೋ ಯಾತ್ರೆ ನಡೆಸುತ್ತಿರುವ ರಾಹುಲ್‌ ಗಾಂಧಿ ಅವರು ಈಗ “ಸರ್ವಾಧಿಕಾರಿ ಸದ್ದಾಂ ಹುಸೇನ್‌’ರಂತೆ ಕಾಣುತ್ತಾರೆ. ಲುಕ್‌ ಬದಲಿಸಬೇಕೆಂದರೆ ವಲ್ಲಭಭಾಯಿ ಪಟೇಲ್‌ರಂತೆ ಅಥವಾ ನೆಹರೂರಂತಾದರೂ ಪ್ರಯತ್ನ ಮಾಡಬಹುದಿತ್ತು. ಆದರೆ ನೀವು ಸದ್ದಾಂ ಹುಸೇನ್‌ರಂತೆ ಕಾಣುತ್ತಿರುವುದೇಕೆ ಎಂದು ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಶರ್ಮ ಪ್ರಶ್ನಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್‌, “ನಿಮ್ಮ ನಾಯಕ(ಪ್ರಧಾನಿ ಮೋದಿ) ಅಷ್ಟುದ್ದ ಗಡ್ಡ ಬಿಟ್ಟಾಗ ನಾವು ಯಾವುದೇ ಹೇಳಿಕೆ ನೀಡಿರಲಿಲ್ಲ. ಏಕೆಂದರೆ ನಾವು ನೈಜ ಸಮಸ್ಯೆಗಳ ಬಗ್ಗೆ ಮಾತ್ರವೇ ಗಮನಹರಿಸುತ್ತೇವೆ’ ಎಂದಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next