ಬೆಂಗಳೂರು : ಜಮಖಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿದ್ಧು ನ್ಯಾಮಗೌಡ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.
ದಿಲ್ಲಿಗೆ ಹೋಗಿದ್ದ ಅವರು ಗೋವೆಗೆ ಬಂದು ಅಲ್ಲಿಂದ ಕಾರಿನಲ್ಲಿ ಊರಿಗೆ ಮರಳುತ್ತಿದ್ದಾಗ ನಡೆದು ರಸ್ತೆ ಅಪಘಾತದಲ್ಲಿ ನ್ಯಾಮಗೌಡ ಅವರಿಗೆ ಎದೆಗೆ ತೀವ್ರ ಪೆಟ್ಟಾಗಿತ್ತು. ಒಡನೆಯೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ಚಿಕಿತ್ಸೆ ಪಲಕಾರಿಯಾಗದೆ ಅವರು ಅಸುನೀಗಿದರು ಎಂದು ತಿಳಿದು ಬಂದಿದೆ.
ನ್ಯಾಮಗೌಡ ಅವರು ನೂತನ ರಾಜ್ಯ ಸರಕಾರದ ಸಂಪುಟದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಕಾಂಗ್ರೆಸ್ ಉನ್ನತ ನಾಯಕರೊಂದಿಗೆ ಉತ್ತಮ ನಂಟು ಹೊಂಧಿದ್ದರು.
ನ್ಯಾಮಗೌಡ ಅವರು ಪ್ರಯಾಣಿಸುತ್ತಿದ್ದ ಕಾರಿನ ಟೈರ್ ಸ್ಫೋಟಗೊಂಡದ್ದೇ ಅವಘಡಕ್ಕೆ ಕಾರಣವಾಯಿತು. ನಿಯಂತ್ರಣ ತಪ್ಪಿದ ಕಾರು ಡಿವೈಡರ್‌ಗೆ ಢಿಕ್ಕಿ ಹೊಡೆದಿತ್ತು. ಕಾರಿನಲ್ಲಿದ್ದ ಇತರರು ಪಾರಾಗಿದ್ದಾರೆ.
ನ್ಯಾಮಗೌಡ ಅವರು 1991-96ರ ಅವಧಿಯಲ್ಲಿ ಬಾಗಲಕೋಟೆ ಕ್ಷೇತ್ರದ ಸಂಸದರಾಗಿದ್ದರು. ಕೇಂದ್ರದಲ್ಲಿ ಕಲ್ಲಿದ್ದಲು ಖಾತೆಯ ಸಹಾಯಕ ಸಚಿವರಾಗಿದ್ದರು. ನ್ಯಾಮಗೌಡ ಅವರು ಪತ್ನಿ ಮತ್ತು ನಾಲ್ಕು ಮಕ್ಕಳನ್ನು ಅಗಲಿದ್ದಾರೆ.