Advertisement

ನೂತನ ಸ್ಪೀಕರ್ ಬಗ್ಗೆ ಎಚ್ ಡಿಕೆ, BSY, ಸಿದ್ದು ಹೇಳಿದ್ದೇನು?

01:09 PM May 25, 2018 | Team Udayavani |

ಬೆಂಗಳೂರು: ನೂತನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ವಿಶ್ವಾಸಮತ ಯಾಚನೆಗೂ ಮುನ್ನ ಕಾಂಗ್ರೆಸ್ ಪಕ್ಷದ ಕೆಆರ್ ರಮೇಶ್ ಕುಮಾರ್ ಅವರನ್ನು ಅವಿರೋಧವಾಗಿ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಆಯ್ಕೆ ಮಾಡಲಾಯಿತು.

Advertisement

ಬಿಜೆಪಿಯ ಸುರೇಶ್ ಕುಮಾರ್ ಅವರು ಕೊನೆಯ ಕ್ಷಣದಲ್ಲಿ ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ರಮೇಶ್ ಕುಮಾರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ನೂತನ ಸ್ಪೀಕರ್ ಗೆ ಅಭಿನಂದನೆ:

ಕುಮಾರಸ್ವಾಮಿ: ನೂತನ ಸಭಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ರಮೇಶ್ ಕುಮಾರ್ ಅವರಿಗೆ ಅಭಿನಂದನೆಗಳು. ದೇವರಾಜ್ ಅರಸು ಅವರು ಮುಖ್ಯಮಂತ್ರಿಗಳಾಗಿದ್ದಾಗ ನಾನು ವಿದ್ಯಾರ್ಥಿಯಾಗಿದ್ದೆ. ಆಗ ನಡೆಯುತ್ತಿದ್ದ ಕಲಾಪದಲ್ಲಿ ನಾವು ಗ್ಯಾಲರಿಯಲ್ಲಿ ವೀಕ್ಷಕರಾಗಿ ಕುಳಿತುಕೊಳ್ಳುತ್ತಿದ್ದೇವು. ಬಳಿಕ ನಮ್ಮ ತಂದೆ ದೇವೇಗೌಡರು ಸಿಎಂ ಸ್ಥಾನದಲ್ಲಿದ್ದಾಗ ನೀವು ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದೀರಿ. ನಿಮ್ಮ ಪಾರದರ್ಶಕವಾದ ನಡವಳಿಕೆ ಎಲ್ಲರಿಗೂ ಮಾದರಿಯಾಗಿತ್ತು ಎಂದು ನೂತನ ಸಿಎಂ ಕುಮಾರಸ್ವಾಮಿ ಹೇಳಿದರು.

ನೂತನವಾಗಿ ಆಯ್ಕೆಯಾದ ಶಾಸಕರಿಗೂ ಹೆಚ್ಚಿನ ಸಮಯಾವಕಾಶ ನೀಡಬೇಕಾಗಿದೆ. ಸ್ಪೀಕರ್ ಹುದ್ದೆ ತುಂಬಾ ಗೌರವಯುತವಾದದ್ದು ಅದನ್ನು ತಾವು ಸಮರ್ಥವಾಗಿ ನಿಭಾಯಿಸಬಲ್ಲಿರಿ ಎಂದು ತಿಳಿಸಿದರು.

Advertisement

ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ:

ನೇರ, ನಿಷ್ಠುರ ವ್ಯಕ್ತಿತ್ವಕ್ಕೆ ಹೆಸರಾದ ನೀವು, ಈ ಹಿಂದೆಯೇ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದವರು. ಹೀಗಾಗಿ ಸ್ಪೀಕರ್ ಹುದ್ದೆಗೆ ಗೌರವ ಕೊಡುವ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಯ(ಸುರೇಶ್ ಕುಮಾರ್) ನಾಮಪತ್ರ ವಾಪಸ್ ಪಡೆದು ನಿಮ್ಮನ್ನು(ರಮೇಶ್ ಕುಮಾರ್) ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಬಿಎಸ್ ಯಡಿಯೂರಪ್ಪ ತಮ್ಮ ಅಭಿನಂದನಾ ಭಾಷಣದಲ್ಲಿ ಹೇಳಿದರು.

ಈ ಸದನದಲ್ಲಿ ತುಂಬಾ ಹೊಸ ಶಾಸಕರಿದ್ದಾರೆ, ಅವರಿಗೆ ನಿಮ್ಮ ಸಲಹೆ, ಸೂಚನೆ ನೀಡಿ ನಿಷ್ಪಕ್ಷಪಾತವಾಗಿ ಸ್ಪೀಕರ್ ಹುದ್ದೆಯನ್ನು ನಿಭಾಯಿಸಿಕೊಂಡು ಹೋಗುತ್ತೀರಿ ಎಂಬ ವಿಶ್ವಾಸ ನಮ್ಮದು ಎಂದರು.

ಸಿದ್ದರಾಮಯ್ಯ: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸ್ಪೀಕರ್ ಹುದ್ದೆ ಪ್ರಮುಖವಾದದ್ದು. ವಿಧಾನಸಭೆ, ವಿಧಾನಪರಿಷತ್, ಲೋಕಸಭೆ, ರಾಜ್ಯಸಭೆ ಸರಿಯಾಗಿ ಕೆಲಸ ಮಾಡಬೇಕು, ಉನ್ನತ ಮಟ್ಟದ ಚರ್ಚೆ ನಡೆಯಬೇಕು. ಹಾಗಿದ್ದಾಗ ಮಾತ್ರ ಪ್ರಜಾತಂತ್ರ ಸುಭದ್ರವಾಗಿರಲು ಸಾಧ್ಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿ ಮಾತನಾಡಿದರು.

ವೈಕುಂಠ ಬಾಳಿಗಾ ಅವರು ಅತ್ತ್ಯುತ್ತಮ ಸಭಾಧ್ಯಕ್ಷರಾಗಿದ್ದರು. ನಿಮಗೂ ಶಾಸಕರಾಗಿ, ಸಚಿವರಾಗಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ ಅನುಭವ ಇದೆ. ನಿಮಗೆ 40 ವರ್ಷ ಸುದೀರ್ಘ ರಾಜಕೀಯ ಅನುಭವ ಇದೆ. ನಿಮಗೆ ನಾವು ಎಲ್ಲಾ ಶಾಸಕರು ಪೂರ್ಣ ಸಹಕಾರ ನೀಡುವುದಾಗಿ ಸಿದ್ದರಾಮಯ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next