Advertisement

Kalaburagi; ಸರ್ಕಾರದ ಹೊಸ ಮದ್ಯದಂಗಡಿ ಯೋಜನೆ ವಿರುದ್ದ ಆಡಳಿತ ಪಕ್ಷ ಶಾಸಕರ ಗುಡುಗು

03:56 PM Oct 02, 2023 | Team Udayavani |

ಕಲಬುರಗಿ: ರಾಜ್ಯ ಸರ್ಕಾರದ ಹೊಸ ಮದ್ಯದಂಗಡಿ ವಿರುದ್ಧ ಆಡಳಿತರೂಢ ಕಾಂಗ್ರೆಸ್ ಪಕ್ಷದ ಶಾಸಕರೇ ಗುಡುಗಿದ್ದು, ಯಾವ ಪುರುಷಾರ್ಥಕ್ಕಾಗಿ ಸಾವಿರ ಮದ್ಯದಂಗಡಿ ಎಂದು ಜಿಲ್ಲೆಯ ಆಳಂದ ಕ್ಷೇತ್ರದ ಶಾಸಕ ಬಿ.ಆರ್. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ರಾಷ್ಟ್ರಪಿತ ಮಹಾತ್ಮಾಗಾಂಧೀಜಿ ಜಯಂತಿ ಅಂಗವಾಗಿ ನಶೆ ಮುಕ್ತ ಭಾರತ ಜಾಗೃತಿ ಆಂದೋಲನ ಸಮಿತಿ ಹಮ್ಮಿಕೊಂಡ ಮದ್ಯಪಾನ ನಿಷೇಧ ಆಂದೋಲನ ಪ್ರತಿಭಟನಾ ಧರಣಿ ಉದ್ದೇಶಿಸಿ ಮಾತನಾಡಿದರು.

ಪಾಪದ ಹಣದಿಂದ ಸರ್ಕಾರ ನಡೆಸುವುದು ಬೇಡ, ಸರ್ಕಾರಕ್ಕೆ ಹಣದ ಕೊರತೆಯಾದರೆ ಜನರಿಂದ ಬೇಡಿ ಕೊಡುತ್ತೇವೆ. ಒಳ್ಳೆಯ ಗ್ಯಾರಂಟಿಗಳನ್ನು ಕೊಟ್ಟು ಮತ್ತೊಂದು ಮಗ್ಗುಲಿನಿಂದ ದಿವಾಳಿ ಮಾಡುವುದು ಸರಿಯಲ್ಲ. ಹಳ್ಳಿಗಳಿಗೆ ಹೊದಾಗ ಮಹಿಳೆಯರು ನೀರು, ರಸ್ತೆ ಏನೂ ಕೇಳುವುದಿಲ್ಲ. ಸಾರಾಯಿ ನಿಷೇಧ ಮಾಡುವಂತೆ ಒತ್ತಾಯಿಸುತ್ತಾರೆ. ಯಾರೂ ಮದ್ಯದಂಗಡಿ ತೆರೆಯುವಂತೆ ಅರ್ಜಿ ಹಾಕಿಲ್ಲ. ಆದರೂ ಸರ್ಕಾರ ಸಾವಿರ ಮದ್ಯದಂಗಡಿ ತೆರೆಯಲು ಮುಂದಾಗಿದೆ. ಪಾಪದ ಹಣದಿಂದ ಸರ್ಕಾರ ನಡೆಸುವುದು ಅವಶ್ಯಕತೆ ಇತ್ತೇ?ಎಂದು ಶಾಸಕಬಿ.ಆರ್. ಪಾಟೀಲ್ ಖಾರವಾಗಿ ಪ್ರಶ್ನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೂ ಮದ್ಯ ಮಾರಾಟ ನಿಷೇಧ ಬಗ್ಗೆ ಪ್ರಸ್ತಾಪಿಸಲಾಗಿದೆ. ಆದರೆ 36 ಸಾವಿರ ಕೋ. ರೂ ಆದಾಯ ಬಗ್ಗೆ ಹೇಳುತ್ತಾರೆ. ರಾಜ್ಯ ಸರ್ಕಾರದ ಜತೆಗೇ ಕೇಂದ್ರ ಸರ್ಕಾರವೂ ಮದ್ಯ ಮಾರಾಟ ನಿಷೇಧ ಜಾರಿಗೆ ತರಲಿ.‌ ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ ಒಳ್ಳೆಯ ಮಾತುಗಳನ್ನು ಹೇಳುತ್ತಾರೆ. ಧಾರ್ಮಿಕವಾಗಿ ಮಾತನಾಡುತ್ತಾರೆ. ಅವರೂ ದೇಶದಾದ್ಯಂತ ಮದ್ಯಪಾನ ಮಾರಾಟ ನಡುವೆ ನಿಷೇಧ ಕಾಯ್ದೆ ಜಾರಿಗೆ ತರಲಿ ಎಂದರು.

ಸ್ವಾಮೀಗಳು ಮುಂದಾಗಲಿ: ಜನರು ರಾಜಕಾರಣಿಗಳಿಗಿಂತ ಸ್ವಾಮೀಗಳ ಮಾತು ಕೇಳುತ್ತಾರೆ. ಹೀಗಾಗಿ ತಮ್ಮ ಹತ್ತಿರ ಬರುವ ಭಕ್ತರಿಗೆ ಮದ್ಯಪಾನ ಚಟ ಬಿಡಿಸುವ ಬಗ್ಗೆ ಹಿತೋಪದೇಶ ಹೇಳುವ ಜತೆಗೆ ಮಧ್ಯಪಾನ ಮುಕ್ತ ಆಂದೋಲನ ಬಲಪಡಿಸಲು ನೇತೃತ್ವ ವಹಿಸಬೇಕೆಂದು ಕರೆ ನೀಡಿದರು.

Advertisement

ಈಗಾಗಲೇ ಮೌನಯೋಗಿ ಜಡೆಯ ಶಾಂತಲಿಂಗ ಮಹಾಸ್ವಾಮಿಗಳವರು ಆಳಂದ ತಾಲೂಕಿನ ನಿಂಬಾಳದಲ್ಲಿ ತಮ್ಮ ಪ್ರಯತ್ನದ ಮೂಲಕ ದಶಕದ ಹಿಂದೆಯೇ ಭಕ್ತರ ಮನವೋಲಿಸಿ ಮದ್ಯಪಾನ ನಿಷೇಧಗೊಳಿಸಿದ್ದಾರೆ. ನಶೆಮುಕ್ತ ಭಾರತಕ್ಕಾಗಿ ಜನಾಂದೋಲನ ಮುಂದುವರೆಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಶಾಸಕ ಬಿ.ಆರ್. ಪಾಟೀಲ್ ಪ್ರಕಟಿಸಿದರು.

ದಿಲ್ಲಿಗೆ ಬರಲು ರೆಡಿ: ಹಳ್ಳಿಗಳಲ್ಲಿ ಸಾರಾಯಿ ನಿಷೇಧಕ್ಕಾಗಿ ದಿಲ್ಲಿಗೆ ಬರಲು ಸಿದ್ದರಿದ್ದೇವೆ. ಕುಡುಕ ಗಂಡನ ಸಲುವಾಗಿ ಸಾಕಾಗಿ ಹೋಗ್ಯಾದ್, ಮನ್ಯಾಗ ಒಂದು ಕ್ಷಣವೂ ನೆಮ್ಮದಿ ಇಲ್ದಾಂಗ್ಯಾಗದ್, ಮಿಸ್ ಕಾಲ್ ಕೊಟ್ಟರೆ ಮನಿಗಿ ಸಾರಾಯಿ ತಂದು ಕೊಡ್ತಾರೆ ಎಂದು ಹಲವು ಮಹಿಳೆಯರು ತಮ್ಮ ಅಸಾಯಕತೆ ತೋಡಿ ತಮ್ಮ ಅಳಲು ವ್ಯಕ್ತಪಡಿಸಿದರು.

ತಾಜಸುಲ್ತಾನಪುರದ ದೇವಮ್ಮ ಎನ್ನುವ ಮಹಿಳೆಯರು ಸಾರಾಯಿ ಮಾರಾಟ ನಿಷೇಧಕ್ಕೆ ದಿಲ್ಲಿಗೆ ಬರಲು ಸಿದ್ದ ಎಂದು ಆಕ್ರೋಶಭರಿತವಾಗಿ ಹೇಳಿದರು.

ಜನವಾದಿ‌ ಮಹಿಳಾ ಸಂಘಟನೆಯ ಕೆ.‌ನೀಲಾ ಮಾತನಾಡಿ, ಸರ್ಕಾರದ ವಿರುದ್ದವೇ ಅಡಳಿರೂಢ ಶಾಸಕರು ಹೋರಾಟಕ್ಕೆ ಇಳಿದಿರುವುದು ಹೆಮ್ಮೆ ಪಡುವಂತಾಗಿದೆ ಎಂದು ಹೇಳಿದರು.

ಮಾಜಿ ಸಚಿವ ಎಸ್.ಕೆ.ಕಾಂತಾ ಮಾತನಾಡಿ, ಮಹಿಳೆಯರಿಗೆ ಭಿಕ್ಷುಕರಂತೆ 2000 ರೂ ನೀಡುತ್ತಿದೆ. ರಾಜಕೀಯ ಲಾಭಕ್ಕಾಗಿ ಮಾಡಲಾಗುತ್ತಿದೆ.  ಅದರ ಬದಲು ಮದ್ಯಪಾನ ನಿಷೇಧ ಮಾಡಿದರೆ ಇಡೀ ಸಮಾಜ ಸುಧಾರಣೆಗೆ ನಾಂದಿ ಮಾಡಿದಂತಾಗುತ್ತದೆಯಲ್ಲದೇ ಗಂಡಸರು ದುಡಿಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಏನೇ ಆದರೂ ರಾಜಕೀಯ ಪಕ್ಷಗಳು ಜನಹಿತದ ಕಡೆಗೆ ಲಕ್ಷ್ಯ ವಹಿಸಬೇಕೆಂದರು.‌

ಶಾಸಕ ಎಂ.ವೈ. ಪಾಟೀಲ್ ವಿಚಾರವಾದಿ ಪ್ರೊ. ಆರ್.ಕೆ‌ ಹುಡಗಿ, ವಿವಿಧ ಮಠಾಧೀಶರಾದ ಚಿನ್ಮಯಗಿರಿ ಸಿದ್ದರಾಮ ಶಿವಾಚಾರ್ಯರು, ನರೋಣಾದ ಮಹಾಂತ ಶಿವಾಚಾರ್ಯರು, ಶ್ರೀ ನಿವಾಸ ಸರಡಗಿಯ ರೇವಣಸಿದ್ದ ಶಿವಾಚಾರ್ಯರು, ಅಪ್ಪಾರಾವ ದೇವಿ ಮುತ್ಯಾ, ಪಾಳಾ ಶ್ರೀ ಗಳು ಸೇರಿದಂತೆ, ಮುಖಂಡರಾದ ರವೀಂದ್ರ ಶಾಬಾದಿ,  ಡಿ.ಜಿ.ಸಾಗರ, ದೀಪಕ ಗಾಲಾ ಸೇರಿದಂತೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next