ಬೆಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರ ನೇಮಕದ ಬೆನ್ನಲ್ಲೇ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಕಾಂಗ್ರೆಸ್ ಸಚಿವರಿಗಾಗಿ ಔತಣಕೂಟ ಏರ್ಪಡಿಸಿದ್ದರು.
ಕಾವೇರಿ ನಿವಾಸದಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ, ಕೆ.ಜೆ.ಜಾರ್ಜ್, ರಮೇಶ್ ಜಾರಕಿಹೊಳಿ, ಜಮೀರ್ ಅಹಮದ್, ಆರ್.ಶಂಕರ್, ರಾಜಶೇಖರ ಪಾಟೀಲ್, ವೆಂಕಟರಮಣಪ್ಪ, ಜಯಮಾಲಾ, ಕೃಷ್ಣ ಬೈರೇಗೌಡ ಪಾಲ್ಗೊಂಡಿದ್ದರು.
ನಗರದ ಶಾಸಕರಾದ ಮುನಿರತ್ನ, ಬೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್ ಸಹ ಪಾಲ್ಗೊಂಡಿದ್ದು ವಿಶೇಷ. ಸಚಿವರು ಬರುತ್ತಿದ್ದಂತೆ ಸಿದ್ದರಾಮಯ್ಯ ಅವರು ಸ್ವಾಗತಿಸಿ ಉಪಚರಿಸಿದರು. ಉಭಯ ಕುಶಲೋಪರಿ ವಿಚಾರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರ ನೇಮಕಕ್ಕೆ ಸಂಬಂಧಿಸಿದಂತೆ ಕೆಲವು ಸಚಿವರಲ್ಲಿ ಅಸಮಾಧಾನ ಇದೆ ಎಂಬ ಹಿನ್ನೆಲೆಯಲ್ಲಿ ಖುದ್ದು ಚರ್ಚಿಸಲು ಔತಣಕೂಟ ಏರ್ಪಡಿಸಲಾಗಿತ್ತು. ಜತೆಗೆ ಲೋಕಸಭೆ ಚುನಾವಣೆ ನೇತೃತ್ವ ತಮಗೆ ಹೈಕಮಾಂಡ್ ವಹಿಸಿರುವ ಹಿನ್ನೆಲೆಯಲ್ಲಿ ಸಚಿವರ ಸಹಕಾರ ಪಡೆದು ಪಕ್ಷ ಬಲಪಡಿಸುವ ವಿಚಾರದಲ್ಲಿ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ. ಆದರೂ ಸಿದ್ದರಾಮಯ್ಯ ಅವರು ದಿಢೀರ್ ಔತಣಕೂಟ ಆಯೋಜಿಸಿದ ಬಗ್ಗೆ ನಾನಾ ರೀತಿಯ ವ್ಯಾಖ್ಯಾನಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ.
ಈ ಮಧ್ಯೆ, ಔತಣಕೂಟ ಕುರಿತು ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಎಲ್ಲರೂ ಒಟ್ಟಾಗಿ ಸೇರಿ ಊಟ ಮಾಡಲು ಸೇರುತ್ತಿದ್ದೇವೆ. ಇದರಲ್ಲಿ ವಿಶೇಷ ಏನೂ ಇಲ್ಲ ಎಂದು ಹೇಳಿದರು.