Advertisement

2023ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ

06:13 PM Jun 18, 2022 | Team Udayavani |

ಮಂಡ್ಯ: 2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುಮತ ಪಡೆಯಲಿದ್ದು, ಜೆಡಿಎಸ್‌ ನೊಂದಿಗೆ ಕೈಜೋಡಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ತಿಳಿಸಿದರು.

Advertisement

ರಾಜ್ಯಸಭೆ ಚುನಾವಣೆಯಿಂದಲೇ ಅವರ ಜತೆ ಕೈಜೋಡಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದೇವೆ. ಮುಂದೆಯೂ ಯಾವುದೇ ಕಾರಣಕ್ಕೂ ಜೆಡಿಎಸ್‌ ನೊಂದಿಗೆ ಕೈ ಜೋಡಿಸುವುದಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಬಹುಮತ ಬರುತ್ತೆ, ಅನುಮಾನ ಬೇಡ: ಜಿಲ್ಲೆಯಲ್ಲಿ ಕಾಂಗ್ರೆಸ್‌ ಏಳಕ್ಕೆ ಏಳು ಸ್ಥಾನ ಗೆಲ್ಲಲಿದೆ. ಹಳೇ ಮೈಸೂರು ಭಾಗದಲ್ಲಿ ಶೇ.70 ಗೆಲ್ಲುವ ವಿಶ್ವಾಸವಿದೆ. ನೂರಕ್ಕೆ ಸಾವಿರಪಟ್ಟು ಕಾಂಗ್ರೆಸ್‌ ಬಹುಮತ ಬರಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದರು.

ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ: ನಿಯೋಜಿತ ಅಭ್ಯರ್ಥಿಗಳ ರೀತಿ ನಾವೆಲ್ಲ ಕೆಲಸ ಮಾಡುತ್ತೇವೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆದಿಯಾಗಿ ನಾವೇ ಅಭ್ಯರ್ಥಿಗಳು ಅಂತಾ ಘೋಷಣೆ ಮಾಡಿಕೊಳ್ಳಲ್ಲ. ಹೈಕಮಾಂಡ್‌ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಹೇಳಿದರು. ಕಾಂಗ್ರೆಸ್‌ ಬಿಜೆಪಿಯ ಬಿ ಟೀಂ ಎಂಬ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ,ಈಗಾಗಲೇ ಸಾಕಷ್ಟು ಚುನಾವಣೆಗಳು, ಇತರೆ ಸಮಯದಲ್ಲೂ ಬಿಜೆಪಿ ಜೊತೆ ಜೆಡಿಎಸ್‌ ಕೈಜೋಡಿಸಿದೆ. ಬಿ ಟೀಂ ಯಾರು ಎಂದು ಜನತೆಯೇ ತೀರ್ಮಾನ ಮಾಡಲಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಧೋರಣೆ ಸರಿಯಲ್ಲ: ಹೈಕಮಾಂಡ್‌ ಆದೇಶ ಪಾಲಿಸುವ ಏಕೈಕ ಪಕ್ಷ ಕಾಂಗ್ರೆಸ್‌. ಚುನಾವಣೆ ಸಮೀಪಿಸುತ್ತಿದ್ದಂತೆ 2015ರ ಪ್ರಕರಣವನ್ನು ಕೇಂದ್ರ ಸರ್ಕಾರ ಕೆದಕುತ್ತಿದೆ. ವರಿಷ್ಠರ ವಿರುದ್ಧ ಇಡಿ ವಿಚಾರಣೆ ನೆಪದಲ್ಲಿ ಕಿರುಕುಳ ನೀಡಲಾಗುತ್ತಿದೆ. ಬಿಜೆಪಿ ನಾಯಕರ ರಾಜಕೀಯ ಧೋರಣೆ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಜೆಡಿಎಸ್‌ ನಾಯಕರಿಗೂ ಧನ್ಯವಾದ: ವರ್ಷದ ಮುಂಚಿತವಾಗಿ ಅಭ್ಯರ್ಥಿ ಆಯ್ಕೆ ಮಾಡಿದ್ದು, ಗೆಲುವಿಗೆ ಸಹಕಾರಿಯಾಯಿತು. ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿತ ರಾಗಿದ್ದ ಕೀಲಾರ ಜಯರಾಂ ಆ ಪಕ್ಷಕ್ಕಾಗಿ ಕಳೆದ 30 ವರ್ಷದಿಂದ ಕೆಲಸ ಮಾಡಿದ್ದರು. ಅವರಿಗೆ ಟಿಕೆಟ್‌ ನೀಡದ ಕಾರಣ, ಬಂಡೆದ್ದು ಮರಿತಿಬ್ಬೇಗೌಡ ಜೊತೆ ಕಾಂಗ್ರೆಸ್‌ಗೆ ಬೆಂಬಲ ನೀಡಿರುವುದು ಸಹ ಪಕ್ಷದ ಅಭ್ಯರ್ಥಿ ಗೆಲುವಿಗೆ ಕಾರಣವಾಗಿದೆ. ಅವರಿಗೂ ಧನ್ಯವಾದ ತಿಳಿಸುತ್ತೇವೆ ಎಂದರು. ಗೋಷ್ಠಿಯಲ್ಲಿ ಮಾಜಿ
ಸಚಿವ ಪಿ.ಎಂ.ನರೇಂದ್ರಸ್ವಾಮಿ, ವಿಧಾನ ಪರಿಷತ್‌ ಸದಸ್ಯ ದಿನೇಶ್‌ಗೂಳಿಗೌಡ, ಮಾಜಿ ಶಾಸಕ ರಮೇಶ್‌ ಬಾಬು ಬಂಡಿಸಿದ್ದೇಗೌಡ, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್‌, ಡಾ.ಕೃಷ್ಣ, ರವಿಕುಮಾರ್‌ ಗಣಿಗ ಇದ್ದರು.

ಮತದಾರರಿಗೆ ಮಧು ಜಿ.ಮಾದೇಗೌಡ ಅಭಿನಂದನೆ
ದಕ್ಷಿಣ ಪದವೀಧರ ಕ್ಷೇತ್ರ ವ್ಯಾಪ್ತಿಯ 29 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಇದಕ್ಕೆ ಸಹಕರಿಸದ ಮತದಾರರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ವಿಧಾನ ಪರಿಷತ್‌ ನೂತನ ಸದಸ್ಯ ಮಧು ಜಿ.ಮಾದೇಗೌಡ ಹೇಳಿದರು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನನ್ನ ಮೇಲೆ ವಿಶ್ವಾಸ ಇಟ್ಟು ಟಿಕೆಟ್‌ ನೀಡಿದರು.

ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ಚುನಾವಣೆಯಲ್ಲಿ ಯಾವ ರೀತಿ ಕೆಲಸ ಮಾಡಬೇಕು ಎಂಬುದನ್ನು ತೋರಿಸಿಕೊಟ್ಟರು. ಅದೇ ರೀತಿ ಮುಖಂಡರಾದ ಎಂ.ಎಸ್‌.ಆತ್ಮಾನಂದ, ಪಿ.ಎಂ.ನರೇಂದ್ರಸ್ವಾಮಿ, ರಮೇಶ್‌ಬಾಬು ಬಂಡಿಸಿದ್ದೇಗೌಡ, ಡಾ.ರವೀಂದ್ರ, ಚಂದ್ರಶೇಖರ್‌, ಡಾ.ಕೃಷ್ಣ ಸೇರಿ ತಾಲೂಕಿನ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತೆ ತಿಳಿಸುತ್ತೇನೆ ಎಂದರು. ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ಜಿಲ್ಲೆಯಲ್ಲಿ ನನ್ನ ಪರ ವ್ಯಾಪಕ ಪ್ರಚಾರ ಮಾಡಿದ್ದಾರೆ. ಜೆಡಿಎಸ್‌ನ ಮರಿತಿಬ್ಬೇಗೌಡ, ಕೀಲಾರ ಜಯರಾಮು ಅವರ ಬೆಂಬಲವು ಸಹ ನನ್ನ ಗೆಲುವಿಗೆ ಸಹಾಯವಾಗಿದೆ. ಭಾರತಿ ಎಜುಕೇಷನ್‌ ಟ್ರಸ್ಟ್‌, ಗಾಂಧಿ ಸ್ಮಾರಕ ಟ್ರಸ್ಟ್‌ ಹಾಗೂ ಎಲ್ಲಾ ಆಡಳಿತ ಮಂಡಳಿಗಳು ನನ್ನ ಪರವಾಗಿ ಪ್ರಚಾರ ಮಾಡಿ ಹಗಲು ರಾತ್ರಿ ಎನ್ನದೇ ಶ್ರಮಿಸಿದ್ದಾರೆ. ಇವರಿಗೂ ಧನ್ಯವಾದ ಸಲ್ಲಿಸುತ್ತೇನೆ. ಕಳೆದ 35 ವರ್ಷಗಳಲ್ಲಿಯೇ ಇತಿಹಾಸ ಸೃಷ್ಟಿಸಿದ ಗೆಲುವಾಗಿದ್ದು, ಇದರಲ್ಲಿ ನನ್ನ ಪಾತ್ರವಿಲ್ಲ. ಬದಲಿಗೆ ಹಿರಿಯ ಮುಖಂಡರು, ಕಾರ್ಯಕರ್ತರ ಕೆಲಸದ ಪರಿಣಾಮ ಗೆಲುವು ಸಿಕ್ಕಿದೆ ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next