Advertisement

ಸಫಾನಾ ಮನೆಗೆ ಕಾಂಗ್ರೆಸ್‌ ಪ್ರಮುಖರ ಭೇಟಿ: ಸಾಂತ್ವನ

02:58 PM Mar 28, 2017 | Team Udayavani |

ಮಡಿಕೇರಿ: ದೇವರಪುರ ಸಮೀಪದ ತಾರಿಕಟ್ಟೆಯಲ್ಲಿ ಕಾಡಾನೆ ದಾಳಿಗೆ ಬಲಿಯಾದ ವಿದ್ಯಾರ್ಥಿನಿ ಸಫಾನಾಳ ಮನೆಗೆ ತೆರಳಿದ ಕೊಡಗು ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಅಲ್ಪಸಂಖ್ಯಾತರ ಘಟಕ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿತು. 

Advertisement

    ಸರಕಾರದಿಂದ ದೊರೆಯಬೇಕಾದ  ಸೌಲಭ್ಯವನ್ನು ಶೀಘ್ರದಲ್ಲಿ ನೀಡಲಾಗುವುದು ಹಾಗೂ ಆಕೆಯ ಸಹೋದರ ಶಾಕೀರ್‌ಗೆ ಸರಕಾರಿ ಉದ್ಯೋಗ ನೀಡುವ ಮೂಲಕ ಕುಟುಂಬಕ್ಕೆ ನೆರವು ನೀಡಲು ಪ್ರಯತ್ನಿಸುತ್ತೇವೆ. ಜಿಲ್ಲೆಯಲ್ಲಿ ನಡೆಯುತ್ತಿರುವ ನಿರಂತರ ಆನೆ, ಮಾನವ ಸಂಘರ್ಷದ ಬಗ್ಗೆ ಅರಣ್ಯ ಮಂತ್ರಿ ಹಾಗೂ ಮುಖ್ಯಮಂತ್ರಿಯ ಬಳಿ ನಿಯೋಗ ತೆರಳಿ ವಾಸ್ತವ ಸ್ಥಿತಿ ತಿಳಿಸುವ ಪ್ರಯತ್ನ ಮಾಡುತ್ತೇವೆ ಎಂದು ಅಲ್ಪಸಂಖ್ಯಾಕ ಘಟಕದ ಜಿಲ್ಲಾಧ್ಯಕ್ಷ ಕೆ.ಎಂ ಯಕೂಬ್‌ ಭರವಸೆ ನೀಡಿದರು.    ಈಗಾಗಲೇ ಈ ಬಗ್ಗೆ ಉಸ್ತುವಾರಿ ಸಚಿವರೊಂದಿಗೆ ಚರ್ಚೆ ಮಾಡಿ ಕುಟುಂಬಕ್ಕೆ 20 ಲಕ್ಷದ ಪರಿಹಾರ ನೀಡುವಂತೆ ಬೇಡಿಕೆ ನೀಡಿದ್ದೇವೆ. ಸಚಿವರಿಂದ ಸಕರಾತ್ಮಕ ಸ್ಪಂದನೆ ದೊರಕಿದೆ ಎಂದು ಹೇಳಿದರು.

    ಪೊನ್ನಂಪೇಟೆ ಬ್ಲಾಕ್‌ ಕಾಂಗ್ರೆಸ್‌ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್‌ ರೆಹಮಾನ್‌ ಮಾತನಾಡಿ, ಈ ರೀತಿಯ ಘಟನೆಗಳು ಮುಂದಿನ ದಿನಗಳಲ್ಲಿ ನಡೆಯದಂತೆ ಅರಣ್ಯ ಇಲಾಖೆ ಎಚ್ಚರ ವಹಿಸಬೇಕು. ಸರಕಾರದ ಮಟ್ಟದಲ್ಲಿ ಆನೆ ಹಾವಳಿಯ ಬಗ್ಗೆ ಚರ್ಚಿಸಿ ಶಾಶ್ವತ ಪರಿಹಾರ ನೀಡುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

    ಭೇಟಿ ಸಂದರ್ಭ ಪೊನ್ನಂಪೇಟೆ ಬ್ಲಾಕ್‌ ಕಾಂಗ್ರೆಸ್‌ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಅಬ್ದುಲ್‌ ಸಮ್ಮದ್‌, ಗೋಣಿಕೊಪ್ಪ ನಗರ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎ.ಎಸ್‌ ಕಲೀಮುಲ್ಲಾ, ವಿರಾಜಪೇಟೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಬ್ದುಲ್‌ ಸಲಾಂ, ಕೊಡಗು ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ವಿ.ಕೆ ಪೋಕುಟ್ಟಿ, ಜಿಲ್ಲಾ ಕಾಂಗ್ರೆಸ್‌ ಸದಸ್ಯ ಶಮೀರ್‌, ಮುಸ್ಲಿಂ ಹಿತರಕ್ಷಣ ಸಮಿತಿ ಅಧ್ಯಕ್ಷ ಹನೀಫಾ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next