Advertisement

ಜೇನುಗೂಡಿಗೆ ಕೈ ಹಾಕ್ತಾರಾ ದಿನೇಶ್‌?

07:00 AM Jul 29, 2018 | |

ಬೆಂಗಳೂರು: ಲೋಕಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್‌ ನಾಯಕರು ಮೊದಲ ಹಂತವಾಗಿ ಪಕ್ಷದ ಆಡಳಿತ ವೈಖರಿಯಲ್ಲೆ ಮೇಜರ್‌ ಸರ್ಜರಿ ಮಾಡಲು ನಿರ್ಧರಿಸಿದ್ದಾರೆ.

Advertisement

ಆಷಾಢ ಮಾಸದ ನಂತರ ಕೆಪಿಸಿಸಿಯನ್ನು ಪುನರ್‌ ರಚಿಸಲು ನೂತನ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ನಿರ್ಧರಿಸಿದ್ದು. ಹಾಲಿ ಪದಾಧಿಕಾರಿಗಳ ಕಾರ್ಯಕ್ಷಮತೆಯ ಬಗ್ಗೆ ಆಂತರಿಕ ವರದಿ ಪಡೆಯಲು ತೀರ್ಮಾನಿಸಿದ್ದಾರೆ.

ಕೆಪಿಸಿಸಿ ಪದಾಧಿಕಾರಿಗಳಲ್ಲಿ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿಗಳು ಸೇರಿದಂತೆ 270 ಜನರ  ದಂಡೇ ಇದ್ದರೂ ಚುನಾವಣೆಯಲ್ಲಿ ನಿರೀಕ್ಷಿತ ಫ‌ಲಿತಾಂಶ ಪಡೆಯಲು ಸಾಧ್ಯವಾಗಿಲ್ಲ. ಈಗಿರುವ ಪದಾಧಿಕಾರಿಗಳಲ್ಲಿ ಬಹುತೇಕರು ಪಕ್ಷದ ಕೆಲಸ ಮಾಡುವುದಕ್ಕಿಂತ ವಯಕ್ತಿಕ ವರ್ಚಸ್ಸಿಗಾಗಿ ವಿಜಿಟಿಂಗ್‌ ಕಾರ್ಡ್‌ ಪದಾಧಿಕಾರಿಗಳಾಗಿ ತಿರುಗಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ, ಹಲವರನ್ನು ಬದಲಾಯಿಸಿ ಸಕ್ರಿಯರಾಗಿರುವವರನ್ನು ಸೇರ್ಪಡೆ ಮಾಡಿಕೊಳ್ಳುವ ಮೂಲಕ  ಮೇಜರ್‌ ಸರ್ಜರಿಗೆ ದಿನೇಶ್‌ಗುಂಡೂರಾವ್‌ ಮುಂದಾಗಿದ್ದಾರೆ. ಆದರೆ, ಇದು ಒಂದು ರೀತಿಯಲ್ಲಿ ಜೇನು ಗೂಡಿಗೆ ಕಲ್ಲು ಹಾಕಿದಂತೆ ಎಂದು ಹೇಳಲಾಗುತ್ತಿದೆ.

ಏಕೆಂದರೆ ಕೆಪಿಸಿಸಿ ಪದಾಧಿಕಾರಿಗಳ ಸ್ಥಾನ ಪಡೆದಿರುವವರಲ್ಲಿ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್‌, ವೀರಪ್ಪಮೊಯಿಲಿ, ಕೆ.ಎಚ್‌.ಮುನಿಯಪ್ಪ, ಆಸ್ಕರ್‌ ಫ‌ರ್ನಾಂಡಿಸ್‌ ಹಾಗೂ ಡಾ.ಜಿ.ಪರಮೇಶ್ವರ್‌, ಡಿ.ಕೆ.ಶಿವಕುಮಾರ್‌ ಬೆಂಬಲಿಗರೇ ತುಂಬಿ ತುಳುಕಿದ್ದಾರೆ. ಇವರನ್ನು ಬದಲಾಯಿಸುವುದು ಅಷ್ಟು ಸುಲಭದ ಮಾತಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಮೂರು ಹಂತದ ವರದಿ
ಈಗಾಗಲೇ ಇರುವ ಪದಾಧಿಕಾರಿಗಳ ಕಾರ್ಯ ವೈಖರಿಯ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಲು ಮೂರು ಹಂತದಲ್ಲಿ ವರದಿ ಪಡೆಯಲು ಕೆಪಿಸಿಸಿ ನಿರ್ಧರಿಸಿದ್ದು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು ಮತ್ತು ಜಿಲ್ಲಾಧ್ಯಕ್ಷರ ಕಾರ್ಯ ವೈಖರಿ ಬಗ್ಗೆ ವರದಿ ನೀಡಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ.

Advertisement

ಪಕ್ಷವನ್ನು ತಳ ಮಟ್ಟದಲ್ಲಿ ಸಂಘಟಿಸಲು ಬ್ಲಾಕ್‌ ಮಟ್ಟದ ಕಾರ್ಯಕರ್ತರ ಜೊತೆ ಕಾರ್ಯದರ್ಶಿಗಳು ಹೇಗೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದನ್ನು ತಿಳಿದು ವರದಿ ನೀಡಲು ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ. ಇನ್ನು ಪ್ರಧಾನ ಕಾರ್ಯದರ್ಶಿಗಳ ಕಾರ್ಯ ವೈಖರಿಯ ಬಗ್ಗೆ ವರದಿ ನೀಡಲು ಉಪಾಧ್ಯಕ್ಷರಿಗೆ ಸೂಚನೆ ನೀಡಲಾಗಿದೆ.

ಪಕ್ಷದ ಎಲ್ಲ ಹಂತದ ಪದಾಧಿಕಾರಿಗಳ ಕಾರ್ಯ ವೈಖರಿಯ ಬಗ್ಗೆ ಆಗಸ್ಟ್‌ 15 ರೊಳಗೆ ಸಂಪೂರ್ಣ ವರದಿ ನೀಡುವಂತೆ ಸೂಚಿಸಲಾಗಿದ್ದು, ಆಗಸ್ಟ್‌ 15 ರ ನಂತರ ಪದಾಧಿಕಾರಿಗಳ ಪಟ್ಟಿಯಲ್ಲಿ ಮೇಜರ್‌ ಸರ್ಜರಿ ಮಾಡಲು ದಿನೇಶ್‌ ಗುಂಡೂರಾವ್‌ ನಿರ್ಧರಿಸಿದ್ದಾರೆ.

ಜಿಲ್ಲಾಧ್ಯಕ್ಷರು ಹಾಗೂ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ ಮೇಲೂ ದಿನೇಶ್‌ ಗುಂಡೂರಾವ್‌ ಕಣ್ಣಿಟ್ಟಿದ್ದು, ಸಕ್ರಿಯರಲ್ಲದ ಜಿಲ್ಲಾಧ್ಯಕ್ಷರು ಹಾಗೂ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರನ್ನು ಬದಲಾಯಿಸಲು ಆಲೋಚನೆ ನಡೆಸಿದ್ದು. ವರದಿ ಬಂದ ನಂತರ ಜಿಲ್ಲಾ ಹಾಗೂ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಿಗೂ ಕೊಕ್‌ ನೀಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಜತೆಗೆ, ಯುವ ಕಾಂಗ್ರೆಸ್‌ ಹಾಗೂ ಎನ್‌ಎಸ್‌ಯುಐ ಹೊರತು ಪಡಿಸಿ ಇನ್ನಿತರ ಮುಂಚೂಣಿ ಘಟಕಗಳಾದ ಹಿಂದುಳಿದ ವರ್ಗ, ಎಸ್ಸಿ ಎಸ್ಟಿ ಘಟಕ, ಮಹಿಳಾ ಘಟಕ, ಕಾರ್ಮಿಕ ಘಟಕ, ಸಾಮಾಜಿಕ ಜಾಲ ತಾಣ ಸೇರಿದಂತೆ ಹತ್ತಕ್ಕೂ ಹೆಚ್ಚು ಘಟಕಗಳ ಅಧ್ಯಕ್ಷರ ಬದಲಾವಣೆಯ ಬಗ್ಗೆಯೂ ಆಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.

ಕೆಪಿಸಿಸಿ ಪದಾಧಿಕಾರಿಗಳನ್ನು ಬದಲಾಯಿಸುವುದು ಅಷ್ಟು ಸುಲಭದ ಮಾತಲ್ಲ. ಪ್ರಭಾವಿ ನಾಯಕರ ಹಿಂಬಾಲಕರೇ ಹೆಚ್ಚಾಗಿ ಪದಾಧಿಕಾರಿಗಳು ಆಗಿರುವುದರಿಂದ ಬದಲಾವಣೆ ಮಾಡುವುದು ದುಸ್ಸಾಹಸದ ಕೆಲಸ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ  ಈ ಹಿಂದೆ ಜನಾರ್ದನ ಪೂಜಾರಿ, ಅಲ್ಲಂ ವೀರಭದ್ರಪ್ಪ, ಆರ್‌.ವಿ. ದೇಶಪಾಂಡೆ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗಲೂ ಪದಾಧಿಕಾರಿಗಳನ್ನು ಬದಲಾಯಿಸಿರಲಿಲ್ಲ. ಪದಾಧಿಕಾರಿಗಳನ್ನು ಬದಲಾಯಿಸಿದ್ದರು. ಹೀಗಾಗಿ, ದಿನೇಶ್‌ ಗುಂಡೂರಾವ್‌ ಅವರು ಕೆಪಿಸಿಸಿ ಪದಾಧಿಕಾರಿಗಳನ್ನು ಬದಲಾಯಿಸುವ ಮೂಲಕ ಜೇನುಗೂಡಿಗೆ ಕಲ್ಲು ಕೈ ಹಾಕ್ತಾರಾ ಎಂಬ ಮಾತುಗಳು ಕೇಳಿ ಬರುತ್ತಿವೆ.

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next