Advertisement
ದಾವಣಗೆರೆಯ ಸಮಾವೇಶ ಸಿದ್ದರಾಮಯ್ಯ ಅವರ ಒನ್‌ಮ್ಯಾನ್ ಶೋ ಶಕ್ತಿ ಪ್ರದರ್ಶನದ ಅಖಾಡ’ವಾಗಲಿದ್ದು, ಇದು ಆಂತರಿಕ ಸಂಘರ್ಷಕ್ಕೆ ಎಡೆಮಾಡಿಕೊಡಬಹುದು ಎಂಬುದು ಹಿರಿಯ ನಾಯಕರ ಆತಂಕವಾಗಿದೆ. ಪಕ್ಷಕ್ಕೆ ಶಕ್ತಿ ತುಂಬಲಿದೆ ಎಂದು ಹೇಳಿಕೊಳ್ಳುತ್ತಲೇ ವೈಯಕ್ತಿಕ ಬಲ ಹೆಚ್ಚಿಸಿಕೊಳ್ಳುವ ಹಾಗೂ ಮುಂದಿನ ಸಿಎಂ ಎಂದು ಬಿಂಬಿಸಿಕೊಳ್ಳುವ ಪ್ರಯತ್ನಕ್ಕೆ ಕಡಿವಾಣ ಹಾಕಬೇಕು ಎಂದು ಕೆ.ಎಚ್.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್ ಸೇರಿ ಮೂಲ ಕಾಂಗ್ರೆಸ್ ನಾಯಕರು ಈ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈಗ ಹೈಕಮಾಂಡ್ ಮೊರೆ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
Related Articles
Advertisement
ರಾಹುಲ್‌ಗಾಂಧಿಯವರು ದೆಹಲಿಯಲ್ಲಿ ಮುಂದಿನ ವಿಧಾನಸಭೆ ಚುನಾವಣೆ ಎದುರಿಸುವ ಸಂಬಂಧ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಮುಖಾಮುಖೀ ಕೂರಿಸಿ ಹಲವಾರು ವಿಷಯ ಚರ್ಚಿಸಿದ್ದರು. ಆ ಸಭೆಗೆ ರಾಜ್ಯದ ಇತರೆ ಪ್ರಮುಖ ನಾಯಕರಿಗೆ ಆಹ್ವಾನ ಇರಲಿಲ್ಲ. ಈ ಸಂದರ್ಭದಲ್ಲಿ ಆಂತರಿಕ ಸಮೀಕ್ಷೆ ಪ್ರಕಾರ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆಗೆ ಹೋದರೆ ಹೆಚ್ಚು ಸ್ಥಾನ ಗೆಲ್ಲಬಹುದು ಎಂದು ಇದೆ. ಹೀಗಾಗಿ, ಅವರನ್ನೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಬಹುದಾ ಎಂಬ ಪ್ರಸ್ತಾಪವೂ ಆಯಿತು. ಆಗ ಡಿ.ಕೆ.ಶಿವಕುಮಾರ್, ಹಾಗೆ ಮಾಡಿದರೆ ಒಕ್ಕಲಿಗ, ಲಿಂಗಾಯಿತ, ದಲಿತ ಸಮುದಾಯಕ್ಕೆ ಬೇರೆ ಸಂದೇಶ ರವಾನೆಯಾಗುತ್ತದೆ. ಸಾಮೂಹಿಕ ನಾಯಕತ್ವ ಎಂದು ಹೋದರಷ್ಟೇ ಪಕ್ಷಕ್ಕೆ ಭವಿಷ್ಯ ಎಂದು ನೇರವಾಗಿಯೇ ಹೇಳಿದ್ದರು.
ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಕಾರ್ಯಕ್ರಮ ಪಕ್ಷಾತೀತವಾಗಿ ಮಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ಹಲವರಿಗೆ ಆಹ್ವಾನ ನೀಡಲು ಬೆಂಬಲಿಗರು ಸಿದ್ಧತೆ ನಡೆಸಿದ್ದರು. ಆದರೆ, ಇದು ರಾಜಕೀಯವಾಗಿ ಬೇರೆ ರೀತಿಯ ಸಂದೇಶ ಹೋಗುತ್ತದೆ ಎಂದು ಹೈಕಮಾಂಡ್ ಗಮನಕ್ಕೆ ತಂದು ಅದು ಪಕ್ಷದ ಬ್ಯಾನರ್‌ನಲ್ಲೇ ನಡೆಯುವಂತೆ ನಿರ್ದೇಶನ ಕೊಡಿಸಿದ್ದರು. ಇದರ ನಡುವೆಯೂ ಬೆಂಬಲಿಗರ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುವ ಪ್ರಯತ್ನಕ್ಕೆ ಮುಂದಾಗಿರುವುದು ಅಪಸ್ವರಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
ಅತಿಥಿಯಾಗಿ ಡಿಕೆಶಿ ಭಾಗಿ :
ಸಿದ್ದರಾಮಯ್ಯ ಹುಟ್ಟುಹಬ್ಬ ನೆಪದಲ್ಲಿ ಮುಖ್ಯಮಂತ್ರಿ ಎಂದು ಬಿಂಬಿಸುವ ಪ್ರಯತ್ನ ತೆರೆಮರೆಯಲ್ಲಿ ನಡೆಯುತ್ತಿರುವುದರಿಂದಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೇವಲ ಅತಿಥಿ’ಯಾಗಿ ಗುರುತಿಸಿಕೊಳ್ಳಲು ಮುಂದಾಗಿದ್ದಾರೆ. ಬಿ.ಕೆ.ಹರಿಪ್ರಸಾದ್-ಕೆ.ಎಚ್.ಮುನಿಯಪ್ಪ ಸೇರಿ ಪಕ್ಷದ ಹಲವು ನಾಯಕರಲ್ಲಿ ಹುಟ್ಟುಹಬ್ಬಕ್ಕೆ ಇಷ್ಟೊಂದು ಪ್ರಾಮುಖ್ಯತೆ ಕೊಡುತ್ತಿರುವ ಬಗ್ಗೆ ತೀವ್ರ ಅಸಮಾಧಾನವೂ ಇದೆ. ಪೂರ್ವಭಾವಿ ಸಭೆಯಲ್ಲಿ ಸಂಸದ ಡಿ.ಕೆ.ಸುರೇಶ್ ವ್ಯಕ್ತಿಪೂಜೆ ಆಗಬಾರದು, ಕೆಟ್ಟ ಸಂದೇಶ ಹೋಗಬಾರದು ಎಂದು ಹೇಳಿರುವುದರ ಬಗ್ಗೆಯೂ ಇದೀಗ ಪಕ್ಷದಲ್ಲಿ ನಾನಾ ವ್ಯಾಖ್ಯಾನಗಳು ನಡೆಯುತ್ತಿವೆ.
–ಎಸ್.ಲಕ್ಷ್ಮಿನಾರಾಯಣ