ಚಿಕ್ಕಬಳ್ಳಾಪುರ: ಮುಂಬರುವ ಲೋಕಸಭಾ ಚುನಾವಣೆ ಟಿಕೆಟ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರಲ್ಲಿ ಬಹಿರಂಗವಾಗಿ ಟಿಕೆಟ್ ವಾರ್ ಶುರುವಾಗಿರುವ ಬೆನ್ನಲ್ಲೇ ಮುಂದಿನ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯ ದರ್ಶಿ ಆಗಿರುವ ರಕ್ಷಾ ರಾಮಯ್ಯ ಸದ್ದಿಲ್ಲದೇ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.
ಹೌದು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಚಾರದಲ್ಲಿ ಈಗಾಗಲೇ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಹಾಗೂ ಮಾಜಿ ಸಚಿವ ಎಂ.ಆರ್. ಸೀತಾರಾಮ್ ನಡುವೆ ನೀನಾ, ನಾನಾ ಎನ್ನುವಷ್ಟರ ಮಟ್ಟಿಗೆ ಟಿಕೆಟ್‌ಗೆ ಗುದ್ದಾಟ ಆರಂಭವಾಗಿದ್ದು, ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಯುವ ಮತದಾರರ ಸೆಳೆಯಲು ತಂತ್ರ: ಮಾಜಿ ಸಚಿವ ಎಂ.ರ್.ಸೀತಾರಾಮ್ ಅವರ ಪುತ್ರ ರಕ್ಷಾ ರಾಮಯ್ಯ ಲೋಕಸಭಾ ಕ್ಷೇತ್ರದ ಯುವ ಮತದಾರರನ್ನು ಗುರಿಯಾಗಿಸಿಕೊಂಡು ಸದ್ದಿಲ್ಲದೇ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಕ್ಷೇತ್ರದ ವ್ಯಾಪ್ತಿಗೆ ಬರುವ ಜಿಲ್ಲೆಯ ಗೌರಿಬಿದನೂರು, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗುಡಿಬಂಡೆ ತಾಲೂಕುಗಳಲ್ಲಿ ಯುವ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಪ್ರಚಾರ ವಾಹನಕ್ಕೆ ರಕ್ಷಾ ರಾಮಯ್ಯ ಚಾಲನೆ ನೀಡಿದ್ದು, ವಿಶೇಷವಾಗಿ 18 ವರ್ಷ ತುಂಬಿರುವ ಯುವ ಮತದಾರರು ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಿ ಎಂಬ ಅಭಿಯಾನ ಶುರು ಮಾಡಿರುವುದು ತೀವ್ರ ಕುತೂಹಲ ಮೂಡಿಸಿದೆ. ಇದಕ್ಕಾಗಿಯೇ ವಿಶಿಷ್ಟ ಮಾದರಿಯ ಪ್ರಚಾರ ವಾಹನವನ್ನು ಸಿದ್ಧಪಡಿಸಿ ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರಕ್ಕೆ ಬಿಟ್ಟಿರುವುದು ಗಮನ ಸೆಳೆಯುತ್ತಿದೆ.
ನಿಮ್ಮ ಮೊದಲ ಮತವನ್ನು ಸಂಭ್ರಮಿಸಿ.. : ನಿಮ್ಮ ಮೊದಲ ಮತವನ್ನು ಸಂಭ್ರಮಿಸಿ ಎಂಬ ಘೋಷವಾಕ್ಯ ಪ್ರಚಾರದ ವಾಹನದ ಮೇಲೆ ಇದ್ದು, ಪ್ರಜ್ಞಾವಂತ ಪ್ರಜೆಯಾಗಿ ನಿಮ್ಮ ಸಂವಿಧಾನ ಬದ್ಧ ಹಕ್ಕನ್ನು 2024ರ ಲೋಕಸಭಾ ಚುನಾವಣೆಯಲ್ಲಿ ಚಲಾಯಿಸಿ ಎನ್ನುವ ಸಂದೇಶ ಸಾರುವ ಪ್ರಚಾರ ವಾಹನ ಕ್ಷೇತ್ರದಲ್ಲಿ ಸದ್ದು ಮಾಡುತ್ತಿದೆ. ಪ್ರಚಾರ ಫಲಕದಲ್ಲಿ ಕಾಂಗ್ರೆಸ್‌ನ ಎಲ್ಲಾ ನಾಯಕರ ಭಾವಚಿತ್ರಗಳಿರುವುದು ವಿಶೇಷ. ಅಸೆಂಬ್ಲಿ ಚುನಾವಣೆಯಲ್ಲಿ ಸುತ್ತಾಡಿದ್ದ ತಂದೆ-ಮಗ! : ಕಳೆದ ವಿಧಾನಸಭಾ ಚುನಾವಣೆಯಲ್ಲಿಯೇ ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ವೇದಿಕೆ ಸಿದ್ಧಪಡಿಸಿಕೊಳ್ಳುವ ನಿಟ್ಟಿನಲ್ಲಿ ಮಾಜಿ ಸಚಿವರಾದ ಸೀತಾರಾಮ್ ಹಾಗೂ ಅವರ ಪುತ್ರ ರಕ್ಷಾ ರಾಮಯ್ಯ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗಾಗಿ ತನು, ಮನ, ಧನ ಅರ್ಪಿಸಿ ಕೆಲಸ ಮಾಡುವ ಮೂಲಕ ಲೋಕಸಭೆ ಚುನಾವಣೆಗೆ ಕಣ ಪರೀಕ್ಷೆ ನಡೆಸಿದ್ದರು. ಚಿಕ್ಕಬಳ್ಳಾಪುರ ಮಾತ್ರವಲ್ಲದೇ ಬಲಿಜ ಸಮುದಾಯ ಹೆಚ್ಚಿರುವ ಬಾಗೇಪಲ್ಲಿ, ಗೌರಿಬಿದನೂರು ಪಟ್ಟಣದಲ್ಲಿ ಸಂಚರಿಸಿ ಕಾಂಗ್ರೆಸ್ ಪರ ಪ್ರಚಾರ ನಡೆಸಿದ್ದರು.
ಎಂ.ಆರ್.ಸೀತಾರಾಮ್ ವಾದ ಏನು?: ಎರಡು ಬಾರಿ ನನ್ನ ಕೈಗೆ ಬಂದಿದ್ದ ಟಿಕೆಟ್ ವೀರಪ್ಪ ಮೊಯ್ಲಿಗೆ ಬಿಟ್ಟು ಕೊಟ್ಟಿದ್ದೇನೆ. ಈ ಬಾರಿ ಕ್ಷೇತ್ರದ ಜನರು ನಮ್ಮ ಕುಟುಂಬಸ್ಥರು ಇಲ್ಲಿ ಸ್ಪರ್ಧಿಸಬೇಕೆಂಬ ಒತ್ತಡ ಹಾಕುತ್ತಿದ್ದಾರೆ. ಅಲ್ಲದೇ ಕ್ಷೇತ್ರದಲ್ಲಿ ನಮ್ಮ ಕುಟುಂಬಸ್ಥರು, ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ಈ ಬಾರಿ ಟಿಕೆಟ್‌ಗೆ ನಾವು ಪ್ರಯತ್ನ ಮಾಡುತ್ತೇವೆಂದು ಕಡ್ಡಿ ಮುರಿದಂತೆ ಮಾಜಿ ಸಚಿವ ಎಂ.ಆರ್.ಸೀತಾರಾಮ್ ಹೇಳುತ್ತಿದ್ದಾರೆ. ನನಗೆ ಅಥವಾ ನನ್ನ ಮಗನಿಗೆ ಆಗಲಿ ಲೋಕಸಭಾ ಚುನಾವಣೆ ಟಿಕೆಟ್ ಕೊಡಲೇಬೇಕೆಂದು ಸೀತಾರಾಮ್ ಹೇಳುತ್ತಿದ್ದಾರೆ.
–ಕಾಗತಿ ನಾಗರಾಜಪ್ಪ