ಬೀದರ/ಕಲಬುರಗಿ/ವಿಜಯಪುರ: ಕರ್ನಾಟಕವನ್ನು ದೇಶದ ನಂ. 1 ರಾಜ್ಯವನ್ನಾಗಿ ಮಾಡುವ ಕನಸು ಹೊಂದಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ ಭ್ರಷ್ಟ ಆಡಳಿತ ನಡೆಸಿದ ಬಿಜೆಪಿ ಸರಕಾರವೇ ಅವರ ಕನಸನ್ನು ನುಚ್ಚುನೂರು ಮಾಡಿದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ, “ಸರ್ವಾಂತರ್ಯಾಮಿ, 56 ಇಂಚಿನ ಎದೆಯುಳ್ಳ ಮೋದಿಯವರು ಲೂಟಿಯನ್ನು ತಡೆಯದೆ ಕಣ್ಣು ಮುಚ್ಚಿ ಕನಸು ಕಾಣುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.
ಬೀದರ, ಕಲಬುರಗಿ ಹಾಗೂ ವಿಜಯಪುರದಲ್ಲಿ ಬುಧವಾರ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಪ್ರಧಾನಿಯಿಂದ ಹಿಡಿದು ಶಾಸಕರ ವರೆಗೆ ಎಲ್ಲರಿಗೂ ಅಧಿಕಾರವೇ ಮುಖ್ಯ. ಅವರಿಗೆ ಬಡ ಜನರ ಕಾಳಜಿ ಬೇಕಾಗಿಲ್ಲ. ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಎಲ್ಲರೂ ಎಚ್ಚರಿಕೆ ವಹಿಸಬೇಕಾದ ಸಮಯ ಬಂದಿದೆ. ಮತ್ತೆ ಜನರ ಹಣ ಕೊಳ್ಳೆ ಹೊಡೆಯದಂತೆ ನೋಡಿಕೊಳ್ಳಬೇಕಾಗಿದೆ. ನಿಮ್ಮ ಪ್ರದೇಶ ಅಭಿವೃದ್ಧಿಗಾಗಿ ಎಲ್ಲ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಬಹುಮತದ ಸರಕಾರವನ್ನು ಅಸ್ತಿತ್ವಕ್ಕೆ ತರಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ನಂದಿನಿ ಜತೆಗೆ ಅಮುಲ್ ಜೋಡಿಸಿ ರಾಜ್ಯದ ಸಂಪತ್ತನ್ನು ಲೂಟಿ ಹೊಡೆಯುವ ಷಡ್ಯಂತ್ರವನ್ನು ಬಿಜೆಪಿ ನಡೆಸಿದೆ ಎಂದೂ ಪ್ರಿಯಾಂಕಾ ಆರೋಪಿಸಿದ್ದಾರೆ. ಕರ್ನಾಟಕದಲ್ಲಿ ಶಾಸಕರ ಖರೀದಿ ಮೂಲಕ ಅನೈತಿಕವಾಗಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರಕಾರ ಕಳೆದ ಮೂರೂವರೆ ವರ್ಷಗಳಲ್ಲಿ ಒಂದೂವರೆ ಲಕ್ಷ ಕೋಟಿ ರೂ. ಲೂಟಿ ಹೊಡೆದಿದೆ. ಬಿಜೆಪಿ ಸರಕಾರ ಲೂಟಿ ಹೊಡೆದ ಈ ಹಣದಲ್ಲಿ ಸಾವಿರಾರು ಸ್ಮಾರ್ಟ್ ಕ್ಲಾಸ್ ಸಹಿತ ಶಾಲೆ, ಲಕ್ಷಾಂತರ ಸೂರಿಲ್ಲದ ಜನರಿಗೆ ಮನೆ ಸೇರಿದಂತೆ ನೂರಾರು ಆಸ್ಪತ್ರೆ ಸ್ಥಾಪಿಸುವ ಅವಕಾಶವಿತ್ತು ಎಂದರು.
ಮೇ 6ರಂದು ಹುಬ್ಬಳ್ಳಿಗೆ ಸೋನಿಯಾ ಗಾಂಧಿ
ಬೆಂಗಳೂರು: ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಚುನಾವಣೆಯ ಪ್ರಚಾರಕ್ಕಾಗಿ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಇದೇ 6ರಂದು ಹುಬ್ಬಳ್ಳಿಗೆ ಅವರು ಆಗಮಿಸಲಿದ್ದು, ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆ ಅಂಗವಾಗಿ ಸೋನಿಯಾ ಗಾಂಧಿ ಅವರದು ಇದು ಮೊತ್ತಮೊದಲ ಪ್ರಚಾರ ಸಭೆಯಾಗಿದೆ. ಈಗಾಗಲೇ ಪುತ್ರ ರಾಹುಲ್ ಗಾಂಧಿ ಹಾಗೂ ಪುತ್ರಿ ಪ್ರಿಯಾಂಕಾ ವಾದ್ರಾ ಅವರು ರಾಜ್ಯದ ಹಲವೆಡೆ ಸಾರ್ವಜನಿಕ ಸಭೆ ಹಾಗೂ ರೋಡ್‌ಶೋಗಳನ್ನು ನಡೆಸುತ್ತಿದ್ದಾರೆ.