ಧಾರವಾಡ: ಅವಳಿನಗರ ವ್ಯಾಪ್ತಿಯಲ್ಲಿ ಬೈಪಾಸ್ ರಸ್ತೆ ನಿರ್ಮಾಣ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಪಿ.ಎಚ್. ನೀರಲಕೇರಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈಪಾಸ್ ರಸ್ತೆಯೇ ನಿಯಮ ಬಾಹಿರವಾಗಿ ಉಲ್ಲಂಘನೆಯಾಗಿದೆ. ಈ ಬಗ್ಗೆ ನಂದಿ ಇನ್ರ್ಫಾಸ್ಟ್ರಕ್ಚರ್ ಕಂಪನಿಗೆ 5 ಬಾರಿ ನೋಟಿಸ್ ನೀಡಿದರೂ ಮಾಲೀಕ ಅಶೋಕ ಖೇಣಿ ಕ್ಯಾರೇ ಎನ್ನದಿರುವುದು ವಿಷಾದನೀಯ. ಈ ಹಿಂದೆ ಧಾರವಾಡ ಹೈ ಕೋರ್ಟ್ ನ್ಯಾಯಮೂರ್ತಿ ನಾರಾಯಣಸ್ವಾಮಿ ಅವರು ನಂದಿ ಹೈ ವೈ ಇನ್ರ್ಫಾಸ್ಟ್ರಕ್ಚರ್, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ ಸಮಸ್ಯೆ ಸರಿಪಡಿಸುವಂತೆ ಸೂಚಿಸಿದ್ದರು.
1998ರಲ್ಲಿ ಆರಂಭಗೊಂಡ ಹು-ಧಾ ಬೈಪಾಸ್ ರಸ್ತೆ ವ್ಯಾಪ್ತಿಯಲ್ಲಿ 15-20 ಹಳ್ಳಿಗಳು ಬರುತ್ತವೆ. ಇಲ್ಲಿ ಈವರೆಗೂ ಒಟ್ಟು 12000 ಜಾನುವಾರುಗಳು ಅಪಘಾತದಲ್ಲಿ ಸಾವನ್ನಪ್ಪಿವೆ. ಭಾರತ್ ಪೋರ್ಚ್ ಪುಣೆ ಕಂಪನಿ, ನಂದಿ ಇನ್ರ್ಫಾಸ್ಟ್ರಕ್ಚರ್, ರಾಷ್ಟೀಯ ಹೆದ್ದಾರಿ ಪ್ರಾ ಧಿಕಾರ ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರ ನಡುವೆ ನಡೆದ ಈ ಒಪ್ಪಂದದಲ್ಲಿ ಅಶೋಕ ಖೇಣಿ ಹಿತವನ್ನು ಕಾಪಾಡಲಾಗಿದೆ ಎಂದು ಆಪಾದಿಸಿದರು.
ಎನ್‌ಎಚ್-4ನ ಬೈಪಾಸ್ ಅಡಿ 403.8 ಕಿಮೀ ಇಂದ 432 ಕಿಮೀ ರಸ್ತೆ ಬರುತ್ತದೆ. ಅದರಲ್ಲಿ ನಾಲ್ಕು ಟ್ರಕ್ ಲೇಪ್ ಬೈ ಬರುತ್ತದೆ. 26 ವರ್ಷಗಳಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. 2018ರಲ್ಲಿ ಸಮಸ್ಯೆ ಬೆಳಕಿಗೆ ಬಂದಾಗ ಆಗಿನ ಧಾರವಾಡ ಹೈಕೋರ್ಟ್ ನ್ಯಾಯಮೂರ್ತಿ ನಾರಾಯಣಸ್ವಾಮಿ ಅವರೇ ಖುದ್ದು ಸಭೆ ಮಾಡಿ 13 ಸಮಸ್ಯೆ ಸರಿಮಾಡಲು ನೋಟಿಸ್ ನೀಡಲಾಗಿತ್ತು ಎಂದರು.
ಈ ಬಗ್ಗೆ ಇತ್ತೀಚೆಗೆ ದೆಹಲಿಯಲ್ಲಿ ಸಭೆ ನಡೆಸಿದ ಕೇಂದ್ರ ಸಚಿವರು ಆರು ಪಥದ ರಸ್ತೆ ಮಾಡುವ ಪ್ರಸ್ತಾಪ ಮುಂದಿಟ್ಟಿದ್ದಾರೆ. ಅದಕ್ಕಾಗಿ 1200 ಕೋಟಿ ಯೋಜನೆ ರೂಪಿಸಿದ ಬಗ್ಗೆ ಜನಪ್ರತಿನಿ ಧಿಗಳು ಹೇಳುತ್ತಾರೆ. ಆದರೆ ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾ ಧಿಕಾರ, ಯೋಜನಾ ಇಲಾಖೆ ಅಧಿ ಕಾರಿಗಳಿಗೆ ಮಾಹಿತಿಯೇ ಇಲ್ಲ ಎಂದು ಹೇಳಿದರು. ಶ್ರೀಶೈಲಗೌಡ ಕಮತರ, ರವಿ ಗೌಳಿ, ವಿಲ್ಸನ್ ಫನಾಂìಡಿಸ್, ಐ.ಬಿ. ನಿಡಗುಂದಿ ಉಪಸ್ಥಿತರಿದ್ದರು.
ಇಂದಿನಿಂದ ಟೋಲ್ ಕೊಡಬ್ಯಾಡ್ರಿ ಅಭಿಯಾನ
ಬೈಪಾಸ್ ವ್ಯಾಪ್ತಿ ಒಟ್ಟು ಆರು ಟೋಲ್ ಬರುತ್ತವೆ. ಹು-ಧಾ ವಾಹನ ಸವಾರರು ಟೋಲ್ ಕೊಡಬಾರದು. ಫೆ. 19ರಿಂದ ಮಾ. 19ರವರೆಗೆ ಒಂದು ತಿಂಗಳ ಕಾಲ ಟೋಲ್ ಬಹಿಷ್ಕಾರ ಮಾಡಿ. ಯಾರೂ ದುಡ್ಡು ಕೊಡಬ್ಯಾಡ್ರಿ. ಆ ಮೂಲಕ ನಮ್ಮ ಅಭಿಯಾನಕ್ಕೆ ಬೆಂಬಲಿಸಿ ಎಂದು ಪಿ.ಎಚ್. ನೀರಲಕೇರಿ ಮನವಿ ಮಾಡಿದರು. ಮಾ. 21ರಂದು ಈ ಸಂಬಂಧ ಧಾರವಾಡದ ನರೇಂದ್ರ ಬೈಪಾಸ್‌ನಿಂದ ಗಬ್ಬೂರ ಕ್ರಾಸ್ ವರೆಗೆ ಸ್ವಾಭಿಮಾನ ಪಾದಯಾತ್ರೆ ಮಾಡುತ್ತೇವೆ ಎಂದು ತಿಳಿಸಿದರು.