Advertisement

ರೌಡಿಸಂ ಪ್ರದರ್ಶನ ಮಾಡಿರುವ ಶಾಸಕ ಹಾಲಪ್ಪ ಕೃತ್ಯ: ಹಕ್ರೆ ಖಂಡನೆ

12:12 PM Mar 22, 2022 | Team Udayavani |

ಸಾಗರ: ಎಲ್‌ಬಿ ಕಾಲೇಜು ಆವರಣದಲ್ಲಿ ನಡೆದ ಮಲೆನಾಡು ಅಭಿವೃದ್ಧಿ ಪ್ರತಿಷ್ಟಾನದ 56ನೇ ಸರ್ವಸದಸ್ಯರ ಸಭೆಗೆ ತಮ್ಮ ಪಟಾಲಂ ಜೊತೆ ಅನಧಿಕೃತವಾಗಿ ಪ್ರವೇಶ ಮಾಡಿ ರೌಡಿಸಂ ಪ್ರದರ್ಶನ ಮಾಡಿರುವ ಶಾಸಕ ಹಾಲಪ್ಪ ಹರತಾಳು ಅವರ ಕೃತ್ಯವನ್ನು ಕಾಂಗ್ರೆಸ್ ಪಕ್ಷ ತೀವೃವಾಗಿ ಖಂಡಿಸುತ್ತಿದೆ ಎಂದು ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹಕ್ರೆ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಪ್ಪ ಅವರ ಈ ದೌರ್ಜನ್ಯ ಮತ್ತು ದಬ್ಬಾಳಿಕೆ ನಡೆಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಬುಧವಾರ ಅಥವಾ ಗುರುವಾರ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗುತ್ತದೆ ಎಂದರು.

ಹಾಲಪ್ಪ ಎಂಡಿಎಫ್ ಅಧಿಕೃತ ಸದಸ್ಯರಲ್ಲ. ಆದರೂ ಅಧ್ಯಕ್ಷರ ಸೂಚನೆ ಮೇರೆಗೆ ಸಭೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಹೋದವರು ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಲು ಮುಂದಾಗಿದ್ದಾರೆ. ಇದನ್ನು ತಡೆದ ಸಂಸ್ಥೆಯ ಕಾರ್ಯದರ್ಶಿ ಜಗದೀಶ್‌ಗೌಡ ಅವರ ಮೇಲೆ ಶಾಸಕರೂ ಸೇರಿದಂತೆ ಅವರ ಬೆಂಬಲಿಗರು ಹಲ್ಲೆ ಮಾಡಿದ್ದಾರೆ. ಇದರ ಜೊತೆಗೆ ಸಂಸ್ಥೆಯ ಉಪಾಧ್ಯಕ್ಷ ಶ್ರೀಪಾದ ಹೆಗಡೆ, ಅವರ ಕುಟುಂಬ ಮತ್ತಿತರರ ಮೇಲೆ ಸಹ ಹಲ್ಲೆ ನಡೆದಿದೆ. ಘಟನೆ ನಡೆದು ಐದು ದಿನ ಕಳೆದರೂ ಈತನಕ ಹಲ್ಲೆ ನಡೆಸಿದ ಶಾಸಕರು ಮತ್ತು ಅವರ ಹಿಂಬಾಲಕರ ಮೇಲೆ ಎಫ್‌ಐಆರ್ ದಾಖಲು ಮಾಡಿಲ್ಲ. ಎಎಸ್‌ಪಿ ರೋಹನ್ ಜಗದೀಶ್ ಶಾಸಕರ ಜೊತೆ ಶಾಮೀಲಾದಂತೆ ಕಾಣುತ್ತಿದೆ. ಶಾಸಕರ ದಾದಾಗಿರಿ ವರ್ತನೆ ಕ್ಷೇತ್ರಕ್ಕೆ ಕಪ್ಪುಮಸಿ ಬಳಿಯುವ ಜೊತೆಗೆ ಕಾಲೇಜಿನಲ್ಲಿ ಓದಿದ 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ತಲೆತಗ್ಗಿಸುವಂತೆ ಮಾಡಿದೆ ಎಂದರು.

ಕೆಪಿಸಿಸಿ ಕಾರ್ಯದರ್ಶಿ ಡಾ. ರಾಜನಂದಿನಿ ಮಾತನಾಡಿ, ಕಾಗೋಡು ತಿಮ್ಮಪ್ಪ ಅವರು ಸಹ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಅವರ ಆಡಳಿತದ ಅವಧಿಯಲ್ಲಿ ಇಂತಹ ಯಾವುದೇ ಘಟನೆ ನಡೆದಿರಲಿಲ್ಲ. ನಗರಸಭೆ ಅಧ್ಯಕ್ಷರಿಗೆ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಆದರೆ ಶಾಸಕರಿಗೆ ಅವಕಾಶವಿಲ್ಲ ಎಂದು ಗೊತ್ತಿದ್ದೂ ಅವರು ಅಧ್ಯಕ್ಷರು ಕರೆದಿದ್ದಾರೆ ಎಂದು ಹೋಗಿದ್ದಾರೆ. ಸಭೆಗೆ ಹೋದವರು ಹಲ್ಲೆಗೆ ಪ್ರಚೋದಿಸಿ, ತಾವೇ ಹಲ್ಲೆ ನಡೆಸಿರುವುದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಹಲ್ಲೆಗೆ ಒಳಗಾದವರು ದೂರು ನೀಡಿದ್ದರೂ ಪೊಲೀಸರು ಈತನಕ ಅವರ ವಿರುದ್ಧ ಎಫ್‌ಐಆರ್ ದಾಖಲು ಮಾಡದೆ ಇರುವುದು ಕ್ಷೇತ್ರವ್ಯಾಪ್ತಿಯಲ್ಲಿ ಕಾನೂನು ವ್ಯವಸ್ಥೆ ಕುಸಿದು ಹೋಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್ ಪಕ್ಷದ ಇದರ ವಿರುದ್ಧ ಜನಾಂದೋಲನ ರೂಪಿಸಲಿದೆ ಎಂದರು.

ಗೋಷ್ಠಿಯಲ್ಲಿ ಮಧುಮಾಲತಿ, ಎನ್.ಲಲಿತಮ್ಮ, ಅರುಣ್ ಪೂಜಾರಿ, ಆದರ್ಶ ಭಟ್, ದಳವಾಯಿ ದಾನಪ್ಪ, ವೆಂಕಟೇಶ್ ಮೆಳವರಿಗೆ, ನಾಗರಾಜ್ ಮಜ್ಜಿಗೆರೆ, ಸ್ವಾಮಿಗೌಡ, ಷಣ್ಮುಖ ಸೂರನಗದ್ದೆ ಇನ್ನಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next