ಇಂದೋರ್: ಭಾರತ್ ಜೋಡೋ ಯಾತ್ರೆಯ ವೇಳೆ ಮಧ್ಯಪ್ರದೇಶದ ಇಂದೋರ್ ನಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಬಿದ್ದು ಗಾಯಗೊಂಡಿದ್ದಾರೆ. ಕಾಲ್ತುಳಿತದಲ್ಲಿ ಸಿಲುಕಿದ ವೇಣುಗೋಪಾಲ್ ಕೈ ಮತ್ತು ಮೊಣಕಾಲಿಗೆ ಗಾಯಗಳಾಗಿವೆ.
ವರದಿಗಳ ಪ್ರಕಾರ ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ಉತ್ಸುಕರಾದ ಜನರು ಧಾವಿಸಿದ್ದರಿಂದ ಜನಸಂದಣಿ ಉಂಟಾಗಿದೆ. ಆದರೆ ಪೊಲೀಸರು ಗುಂಪನ್ನು ನಿಯಂತ್ರಿಸಲು ವಿಫಲರಾದರು. ಹೀಗಾಗಿ ಇದು ಕಾಲ್ತುಳಿತಕ್ಕೆ ಕಾರಣವಾಯಿತು.
ವೇಣುಗೋಪಾಲ್ ಅವರು ಭಾರತ್ ಜೋಡೋ ಯಾತ್ರೆಗಾಗಿ ಏರ್ಪಡಿಸಲಾಗಿದ್ದ ಶಿಬಿರದಲ್ಲಿ ಪ್ರಥಮ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಯಾತ್ರೆಯ ವೇಳೆ ಜನರು ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಗಳನ್ನು ಕೂಗುತ್ತಿದ್ದಾರೆ ಎಂಬ ಆರೋಪಗಳು ಬಂದ ನಂತರ ವೇಣುಗೋಪಾಲ್ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. “ಪಾದಯಾತ್ರೆಯ ಫಲಿತಾಂಶದ ಬಗ್ಗೆ ಬಿಜೆಪಿಗೆ ಭಯವಿದೆ” ಎಂದಿದ್ದಾರೆ.