Advertisement

ಸೋಲಿನ ನಿರಾಸೆ ಬಿಟ್ಟು ಗೆಲುವಿಗೆ ಮುಂದಾಗಿ : ಡಿ.ಕೆ. ಶಿವಕುಮಾರ

01:49 PM Sep 13, 2021 | Team Udayavani |

ಹುಬ್ಬಳ್ಳಿ: ಎಲ್ಲಿ ಶ್ರಮವಿದೆಯೋ ಅಲ್ಲಿ ಫಲವಿದೆ. ಎಲ್ಲಿ ಮನಸ್ಸಿದೆಯೋ ಅಲ್ಲಿ ಮಾರ್ಗವಿದೆ. ಎಲ್ಲಿ ಭಕ್ತಿಯಿದೆಯೋ ಅಲ್ಲಿ ದೇವರಿದ್ದಾನೆ. ಜನ ಸೇವೆ ಜನಾರ್ದನ ಸೇವೆ. ಜನರಲ್ಲೇ ಭಗವಂತನನ್ನು ಕಾಣಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದರು.

Advertisement

ಕಾರವಾರ ರಸ್ತೆಯ ಕಾಂಗ್ರೆಸ್‌ ಪಕ್ಷದ ಕಾರ್ಯಾಲಯದಲ್ಲಿ ರವಿವಾರ ಹಮ್ಮಿಕೊಂಡಿದ್ದ ಹು-ಧಾ ಮಹಾನಗರ ಪಾಲಿಕೆಗೆ ಪಕ್ಷದಿಂದ ಆರಿಸಿ ಬಂದ ನೂತನ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕರ್ತರೇ ಪಕ್ಷಕ್ಕೆ ಆಧಾರ ಸ್ತಂಭ. ಅವರಿಲ್ಲದಿದ್ದರೆ ಪಕ್ಷವಿಲ್ಲ. ನಾಯಕರಿಲ್ಲ. ಮಾನವೀಯತೆ ಗುಣ ಬೆಳೆಸಿಕೊಳ್ಳುವ ಜವಾಬ್ದಾರಿ ನಿಮ್ಮ ಕೈಯಲ್ಲಿದೆ. ಗೆದ್ದವರು ಹಾಗೂ ಸೋತವರು ನಿರಾಸೆಗೊಳ್ಳದೆ ಜನರ ಸೇವೆ ಮಾಡುವ ಮೂಲಕ ಅವರ ವಿಶ್ವಾಸ ಗೆಲ್ಲಿ. ಜವಾಹರಲಾಲ ನೆಹರು, ಬಿ.ಡಿ. ಜತ್ತಿ, ಕೆಂಗಲ್‌ ಹನುಮಂತಯ್ಯ, ನಾನು ಸೇರಿದಂತೆ ಕೆಳಮಟ್ಟದಿಂದಲೇ ಬಂದವರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ. ವಿಧಾನಸಭೆ ಚುನಾವಣೆಯಲ್ಲಿ ಎಐಎಂಐಎಂ ಎಂಬ ತಲೆಕೆಡಿಸಿಕೊಳ್ಳಬೇಡಿ. ಮುಂದಿನ ಬಾರಿ ನಿಮ್ಮಲ್ಲಿಯವರೇ ಹು-ಧಾ ಪಾಲಿಕೆ ಮಹಾಪೌರ, ಉಪ ಮಹಾಪೌರರಾಗುತ್ತೀರಿ ಎಂದರು.

ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷವಾಯಿತು. ಈ ಹಿನ್ನೆಲೆಯಲ್ಲಿ ವರ್ಷಾಂತ್ಯದವರೆಗೂ ಕಾರ್ಯಕ್ರಮ ಆಚರಿಸಲು ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ತಿಳಿಸಿದ್ದು, ಅ. 2ರಿಂದ ರಾಜ್ಯದ ಎಲ್ಲ ಜಿಲ್ಲೆ ಮತ್ತು ಗ್ರಾಮ, ನಗರಗಳಲ್ಲಿ ವಾರ್ಡ್‌ ಮತ್ತು ಬ್ಲಾಕ್‌ ಮಟ್ಟಗಳಲ್ಲಿ ಮಹಾತ್ಮಾ ಗಾಂಧೀಜಿ ಹೆಸರಿನಲ್ಲಿ ಸಭೆ ಹಾಗೂ ಸರಕಾರದ ವಿರುದ್ಧ ಪ್ರತಿಭಟನೆಗಳು ಕಡ್ಡಾಯವಾಗಿ ನಡೆಯಬೇಕು. ಪ್ರತಿಯೊಬ್ಬರು ಪಾಲ್ಗೊಳ್ಳಬೇಕು ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ, ಶಾಸಕ ಪ್ರಸಾದ ಅಬ್ಬಯ್ಯ, ವಿಪ ಸದಸ್ಯ ಶ್ರೀನಿವಾಸ ಮಾನೆ, ಇಸ್ಮಾಯಿಲ್‌ ತಮಟಗಾರ, ನಾಗರಾಜ ಛಬ್ಬಿ, ಅಲ್ತಾಫ ಹಳ್ಳೂರ ಮಾತನಾಡಿದರು. ಮಾಜಿ ಸಚಿವರಾದ ಎ.ಎಂ. ಹಿಂಡಸಗೇರಿ, ಶಿವಾನಂದ ಪಾಟೀಲ, ಮುಖಂಡರಾದ ವೀರಣ್ಣ ಮತ್ತಿಗಟ್ಟಿ ಮೊದಲಾದವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next