Advertisement

ಹಾಸನದಲ್ಲೂ ಶೇ.50 ಕಮೀಷನ್‌ ದಂಧೆ

04:00 PM Sep 27, 2022 | Team Udayavani |

ಹಾಸನ: ರಾಜ್ಯ ಬಿಜೆಪಿ ಸರ್ಕಾರದಲ್ಲಿ ಶೇ.40 ಕಮೀಷನ್‌ ದಂಧೆ ನಡೆಯುತ್ತಿದ್ದರೆ, ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಶೇ.50 ದಂಧೆ ನಡೆಯುತ್ತಿದೆ. ಪ್ರೀತಂ ಜೆ.ಗೌಡ ಅತಿಭ್ರಷ್ಟ ಶಾಸಕರಾಗಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಬನವಾಸೆ ರಂಗಸ್ವಾಮಿ ಆರೋಪಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನದ ಸಬ್‌ರಿಜಿಸ್ಟ್ರರ್‌, ಹುಡಾ ಕಚೇರಿ, ಆರ್‌ಟಿಒ, ತಹಶೀಲ್ದಾರ್‌, ಡೀಸಿ ಸೇರಿ ಎಲ್ಲಾ ಕಚೇರಿಗಳಲ್ಲೂ ಶಾಸಕರ ಸೂಚನೆ ಇಲ್ಲದೆ, ಯಾವ ಕೆಲಸವೂ ನಡೆ ಯುವುದಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಲಂಚ, ಭ್ರಷ್ಟಾ ಚಾರ ತಾಂಡವವಾಡುತ್ತಿದೆ ಎಂದು ದೂರಿದರು.

ಭ್ರಷ್ಟ ಶಾಸಕರ ಪಟ್ಟಿಯಲ್ಲಿದ್ದಾರೆ: ಹಾಸನದಲ್ಲಿ ನಡೆಯುತ್ತಿರುವ ರಸ್ತೆ, ಚರಂಡಿ ಕಾಮಗಾರಿಗಳು ಕಳಪೆ ಗುಣಮಟ್ಟದ್ದಾಗಿವೆ. ಶಾಸಕರು ಶೇ.50 ಕಮಿಷನ್‌ ದಂಧೆ ನಡೆಸುತ್ತಿರುವುದರಿಂದ ಕಾಮಗಾರಿಗಳು ಕಳಪೆಯಾಗಿವೆ. ಹಾಸನದ ಶಾಸಕ ಪ್ರೀತಂ ಜೆ.ಗೌಡ ಅವರ ಅತಿ ಭ್ರಷ್ಟ ಶಾಸಕರ ಪಟ್ಟಿಯಲ್ಲಿದ್ದಾರೆ ಎಂದು ಆರೋಪಿಸಿದರು.

ರಾಜಕೀಯ ಮೇಲಾಟದ ಆರೋಪ: ಶಾಸಕ ಪ್ರೀತಂ ಜೆ.ಗೌಡ, ಸಂಸದ ಪ್ರಜ್ವಲ್‌ ರೇವಣ್ಣ ಅವರ ನಡುವೆ ವಾಕ್ಸಮರ ಮಾತ್ರ ನಡೆಯುತ್ತಿದೆ. ಅದು ಕೇವಲ ವೈಯಕ್ತಿಕ, ಸ್ವಾರ್ಥ, ರಾಜಕೀಯ ಮೇಲಾಟದಿಂದ ಕೂಡಿದೆಯೇ ಹೊರತು ಅಭಿವೃದ್ಧಿಯ ವಿಚಾರಗಳಿಗಲ್ಲ ಎಂದು ಹೇಳಿದರು. ಒಂದೇ ನಾಣ್ಯ ಎರಡು ಮುಖ: ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ನಾಲ್ಕೈದು ವರ್ಷಗಳಲ್ಲಿ ಗುರ್ತಿಸುವಂತಹ ಮಹತ್ವದ ಅಭಿವೃದ್ಧಿ ಯೋಜನೆಗಳಾಗಿಲ್ಲ. ರಸ್ತೆ, ಚರಂಡಿ ಕಾಮಗಾರಿಗಳು ಕಮಿಷನ್‌ಗಾಗಿ ನಡೆಯುತ್ತಿವೆ ಎಂದು ಶಾಸಕ ಪ್ರೀತಂ ಜೆ.ಗೌಡ ಅವರ ಮೇಲೆ ರಂಗಸ್ವಾಮಿ ಹರಿಹಾಯ್ದರು.

ಕಾಂಗ್ರೆಸ್‌ ಬೆಂಬಲದಿಂದ ಸಂಸದರಾಗಿರುವ ಪ್ರಜ್ವಲ್‌ ರೇವಣ್ಣ ಕೂಡ ಯಾವ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಸಂಸದರಾದ ಪ್ರಜ್ವಲ್‌ ರೇವಣ್ಣ, ಶಾಸಕ ಪ್ರೀತಮ್‌ ಗೌಡ ಇಬ್ಬರು ಒಂದೇ ನಾಣ್ಯದ ಎರಡು ಮುಖ ಎಂದು ಟೀಕಿಸಿದರು.

Advertisement

ದೊಡ್ಡ ನಾಯಕರ ಟೀಕಿಸಿದ್ರೆ ದೊಡ್ಡವರಾಗಲ್ಲ: ದೊಡ್ಡ ನಾಯಕರನ್ನು ಟೀಕಿಸಿದರೆ ದೊಡ್ಡ ರಾಜಕಾರಣಿಯೆಂದು ಗುರ್ತಿಸಿಕೊಳ್ಳಬಹುದು ಎಂಬ ತಪ್ಪು ಕಲ್ಪನೆ ಹಾಸನ ಕ್ಷೇತ್ರದ ಶಾಸಕರದ್ದಾಗಿದೆ. ಹಾಗಾಗಿಯೇ ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ, ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಛೇಡಿಸಿದರು.

ಶಾಸಕರ ಧೋರಣೆ ಖಂಡನೀಯ: ದೊಡ್ಡ ಕೆಲಸ ಮಾಡಿದಾಗ ಮಾತ್ರ ನಾಯಕರಾಗಬಹುದೇ ಹೊರತು, ದೊಡ್ಡ ನಾಯಕರನ್ನು ಟೀಕೆ ಮಾಡಿದರೆ ದೊಡ್ಡ ನಾಯಕರಾಗುವುದಿಲ್ಲ. ಶಾಸಕ ಪ್ರೀತಂ ಜೆ. ಗೌಡ ಅವರ ಧೋರಣೆ ಖಂಡನೀಯ. ಹಾಸನ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿರುವುದಾಗಿ ಪ್ರೀತಂ ಜೆ. ಗೌಡ ಸುಳ್ಳು ಭರವಸೆ ಕೊಡುತ್ತಿದ್ದಾರೆ ಎಂದು ಹೇಳಿದರು.

ಹಾಸನ ತಾಲೂಕಿನ ಸಾಲಗಾಮೆ ಹೋಬಳಿ ಕೇಂದ್ರದ ಸರ್ಕಾರಿ ಶಾಲೆಯು ಮುಚ್ಚುವ ಸ್ಥಿತಿ ತಲುಪಿದೆ. ಮಳೆ ಬಂದರೇ ಶಾಲೆ ಒಳಗೆ ಹೋಗದ ಪರಿಸ್ಥಿತಿಯಿದೆ. ಶಾಸಕ ಪ್ರೀತಂ ಜೆ.ಗೌಡ ಈ ಶಾಲೆ ಕಡ ಗಮನ ಕೊಟ್ಟು ಅಭಿವೃದ್ಧಿ ಪಡಿಸಬಹುದಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ನನ್ನನ್ನು ಆಶೀರ್ವದಿಸಿ: ಮುಂದಿನ ಚುನಾವಣೆಯಲ್ಲಿ ಜನರು ನನ್ನನ್ನು ಆಶೀರ್ವದಿಸಿ ಶಾಸಕರನ್ನಾಗಿ ಮಾಡಿದಲ್ಲಿ ತಾಲೂಕಿನಲ್ಲಿ ಇರುವ ಎಲ್ಲಾ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಗೊಳಿಸಲಾಗುವುದು. ಈ ವರ್ಷವೇ ಸಾಲಗಾಮೆ ಗ್ರಾಮದ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸುವೆ. ಈ ಸಂಬಂಧ ಶಿಕ್ಷಣ ಇಲಾಖೆಯ ಅಧಿಕಾರಿಗಳ ಅನುಮತಿ ಪಡೆದು ಕ್ರಮ ಕೈಗೊಳ್ಳುವೆ ಎಂದು ರಂಗಸ್ವಾಮಿ ಅವರು ಹೇಳಿದರು.

ಜೊಡೋ ಯಾತ್ರೆಯಲ್ಲಿ ಭಾಗಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೋ ಯಾತ್ರೆಯು ಕೇರಳ, ತಮಿಳುನಾಡಿನಲ್ಲಿ ಯಶಸ್ವಿಯಾಗಿದ್ದು, 30ರಂದು ಕರ್ನಾಟಕ ಪ್ರವೇಶ ಮಾಡಿ, 21ದಿನ ರಾಜ್ಯದ ವಿವಿಧ ಕಡೆ ಸಂಚಾರ ಮಾಡಲಿದೆ. ಅ.7ರಂದು ನಾಗಮಂಗಲಕ್ಕೆ ಯಾತ್ರೆ ಬರಲಿದ್ದು, ಆ ಸಂದರ್ಭದಲ್ಲಿ ಹಾಸನ ಕ್ಷೇತ್ರದ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅದರ ಪೂರ್ವಭಾವಿ ಸಭೆಯು ಮಂಗಳವಾರ ಬೆಳಗ್ಗೆ 10.30ಕ್ಕೆ ಹಾಸನ ನಗರದ ಹೊರವಲಯದ ನಂದಗೋಕುಲ ಕನ್ವೆನÒನ್‌ ಹಾಲ್‌ನಲ್ಲಿ ನಡೆಯಲಿದೆ ಎಂದು ಹೇಳಿದರು.

ಸಭೆಯಲ್ಲಿ ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ರೋಜಿ ಜಾನ್‌, ಪಕ್ಷದ ಹಾಸನ ಜಿಲ್ಲಾ ಉಸ್ತುವಾರಿ ಗಳಾದ ಡಿ.ಕೆ. ಸುರೇಶ್‌, ಧ್ರುವನಾರಾಯಣ, ಜಿಲ್ಲಾ ಸಂಯೋಜಕ ಅನಿಲ್‌ ಕುಮಾರ್‌ ಅವರ ಸಭೆಯಲ್ಲಿ ಪಾಲ್ಗೊಳ್ಳುವರು ಎಂದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ಕುಮಾರಸ್ವಾಮಿ, ಕೀರ್ತಿಕುಮಾರ್‌, ಮಲ್ಲೇಶ್‌, ಸದಾಶಿವ, ಕುಮಾರ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next