Advertisement

ಎರಡನೇ ಹಂತದ “ಪ್ರಜಾಧ್ವನಿ’ಯಾತ್ರೆಗೆ ಕಾಂಗ್ರೆಸ್‌ ಚಾಲನೆ

11:59 PM Feb 03, 2023 | Team Udayavani |

ಈಗಾಗಲೇ ಜಂಟಿಯಾಗಿ ಮೊದಲ ಹಂತದ “ಪ್ರಜಾಧ್ವನಿ’ ಯಾತ್ರೆಯನ್ನು 20 ಜಿಲ್ಲೆಗಳಲ್ಲಿ ಮುಗಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಶುಕ್ರವಾರದಿಂದ ಪ್ರತ್ಯೇಕವಾಗಿ ಎರಡನೇ ಹಂತದ ಯಾತ್ರೆಗೆ ಚಾಲನೆ ನೀಡಿದ್ದಾರೆ. ಸಿದ್ದರಾಮಯ್ಯ ಬೀದರ್‌ ಜಿಲ್ಲೆಯ ಬಸವಕಲ್ಯಾಣದ ಅನುಭವ ಮಂಟಪದಿಂದ ಹಾಗೂ ಡಿ.ಕೆ.ಶಿವಕುಮಾರ್‌ ಕೋಲಾರ ಜಿಲ್ಲೆಯ ಮುಳಬಾಗಿಲಿನ ಕೂಡುಮಲೆ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಯಾತ್ರೆಗೆ ಚಾಲನೆ ನೀಡಿದ್ದಾರೆ.

Advertisement

ವಿಧಾನಸೌಧ ಗೋಡೆಗೆ ಕಿವಿಗೊಟ್ಟರೆ “ಲಂಚ’ ಅನುರಣನ: ಸಿದ್ದು
ಬೀದರ್‌: ಉತ್ತರ ಕರ್ನಾಟಕದಲ್ಲಿ ಸಂಚರಿಸಲಿರುವ ಯಾತ್ರೆಗೆ ವಚನ ಚಳವಳಿಗೆ ಸಾಕ್ಷಿಯಾದ ಬಸವಕಲ್ಯಾಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ರಣಕಹಳೆ ಮೊಳಗಿಸಿದರು.

ಬಸವಕಲ್ಯಾಣದ ಥೇರ್‌ ಮೈದಾನದಲ್ಲಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಬಿಜೆಪಿ ಸರಕಾರದ ದುರಾಳಿತದಿಂದ ವಿಧಾನಸೌಧ ಕೊಳೆತು ನಾರುತ್ತಿದ್ದು, ಅಲ್ಲಿನ ಗೋಡೆಗಳಿಗೆ ಕಿವಿ ಕೊಟ್ಟರೆ ಲಂಚ ಲಂಚ ಶಬ್ದವೇ ಕೇಳಿ ಸಿಗುತ್ತದೆ. ನೇಮಕಾತಿಯಿಂದ ಹಿಡಿದು ವರ್ಗಾವಣೆವರೆಗೆ ಪ್ರತಿ ಹಂತದಲ್ಲೂ ಲಂಚಗುಳಿತನ ಹೆಚ್ಚಿದೆ. “ಅಲಿಬಾಬಾ ಮತ್ತು 40 ಕಳ್ಳರು’ ಎಂಬಂತ ಸ್ಥಿತಿ ಸರಕಾರದ್ದಾಗಿದೆ. ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ಮುಖ್ಯಮಂತ್ರಿಗೆ ತಾಕತ್ತು ಇದ್ದರೆ ನಮ್ಮ ಮತ್ತು ಬಿಜೆಪಿಯವರ ಆರೋಪಗಳ ಕುರಿತಂತೆ ಹೈಕೋರ್ಟ್‌ ನ್ಯಾಯಾ ಧೀಶರ ನೇತೃತ್ವದಲ್ಲಿ ತನಿಖೆ ನಡೆಸಲಿ ಎಂದು ಸವಾಲೆಸೆದರು.

ನುಡಿದಂತೆ ನಡೆದಿದ್ದೇವೆ, ಬೆಂಬಲಿಸಿ: ಡಿ.ಕೆ.ಶಿವಕುಮಾರ್‌
ಮುಳಬಾಗಿಲು: ಕಳೆದ ಚುನಾವಣೆಯಲ್ಲಿ ನೀಡಿದ್ದ ಎಲ್ಲ 165 ಆಶ್ವಾಸನೆಗಳನ್ನೂ ಕಾಂಗ್ರೆಸ್‌ ಈಡೇರಿಸಿದೆ. ಆದರೆ ಬಿಜೆಪಿ ನೀಡಿದ್ದ 500 ಭರವಸೆಗಳ ಪೈಕಿ 50ನ್ನೂ ಈಡೇರಿಸಿಲ್ಲ. ನುಡಿದಂತೆ ನಡೆದಿರುವ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮನವಿ ಮಾಡಿದರು.

ನಗರದ ಮುನಿಸಿಪಲ್‌ ಮೈದಾನದಲ್ಲಿ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾ ಡಿದ ಅವರು, ಬಿಜೆಪಿಯವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಜನತಾ ದಳದವರನ್ನು ತಲೆಗೆ ಹಾಕಿಕೊಳ್ಳಬೇಡಿ, ಕಾಂಗ್ರೆಸ್‌ನಿಂದ ಮಾತ್ರ ಬದಲಾವಣೆ ಸಾಧ್ಯ ಎಂದರು.

Advertisement

ತಾಲೂಕಿನ ಕೂಡುಮಲೆ ಶ್ರೀವಿನಾಯಕ ದೇಗುಲದಲ್ಲಿ ಪೂಜೆ ಸಲ್ಲಿಸಿ ಯಾತ್ರೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಶಿವಕುಮಾರ್‌, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರು ನನ್ನ ವಿರುದ್ಧ ಯಾವುದೇ ಪತ್ರ ಬರೆದಿಲ್ಲ. ಬಿಜೆಪಿಯವರು ಕುಚೇಷ್ಟೆ ಮಾಡುತ್ತಿದ್ದಾರೆ. ದಿನಕ್ಕೊಂದು ವೀಡಿಯೋ ಹಾಕುವುದು, ಪತ್ರ ಬರೆಯುವುದರ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದು ಕಿಡಿಕಾರಿದರು.

ಮುಳಬಾಗಿಲು: ಪ್ರಜಾಧ್ವನಿ ಯಾತ್ರೆಗೆ ಕೆ.ಎಚ್‌.ಮುನಿಯಪ್ಪ ಗೈರು
ಕೋಲಾರ: ಕಾಂಗ್ರೆಸ್‌ ಘಟಬಂಧನ್‌ ವಿರುದ್ಧ ಬಹಿರಂಗವಾಗಿಯೇ ಬಂಡಾಯವೆದ್ದಿರುವ ಮಾಜಿ ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಬಲವಂತಕ್ಕೂ ಬಗ್ಗದೆ ಮುಳಬಾಗಿಲಿನ ಪ್ರಜಾ ಧ್ವನಿ ಸಮಾವೇಶದಿಂದ ದೂರ ಉಳಿಯುವ ಮೂಲಕ ಬಂಡಾಯದ ಬಾವುಟ ಹಾರಿಸಿದರು. ಬೆಂಗಳೂರಿನಿಂದ ಬಂದ ಕೆಪಿಸಿಸಿ ಅಧ್ಯಕ್ಷರ ತಂಡವನ್ನು ಕೋಲಾರ ನಗರದ ಬೈಪಾಸ್‌ನ ಸಮೀಪ ಮುನಿಯಪ್ಪ ನೇತೃತ್ವದಲ್ಲಿ ಬೆಂಬಲಿಗರು ಸ್ವಾಗತಿಸಿದರು. ಪ್ರಜಾ ಧ್ವನಿ ವಾಹನದಿಂದ ಕೆಳಗಿಳಿದ ಡಿ.ಕೆ.ಶಿ. ಅವರು ಮುನಿಯಪ್ಪ ಅವರನ್ನು ಯಾತ್ರೆಗೆ ಆಗಮಿಸಲು ಕೋರಿದರು. ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ ಜತೆ ವೇದಿಕೆ ಹಂಚಿಕೊಳ್ಳಲು ನಿರಾಕರಿ ಸಿದ ಮುನಿಯಪ್ಪ ಮುಳಬಾಗಿಲಿನ ಸಮಾವೇಶಕ್ಕೆ ಬರುವುದಿಲ್ಲ ಎಂದರು. ಆದರೆ ಕುರುಡು ಮಲೆಯಲ್ಲಿ ಗಣಪತಿಗೆ ಸಲ್ಲಿಸಿದ ಪೂಜೆಯಲ್ಲಿ ಪಾಲ್ಗೊಂ ಡರು. ಸಂಜೆ ಕೆಜಿಎಫ್ನಲ್ಲಿ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಸರಕಾರ ಅಧಿ ಕಾರಕ್ಕೆ ಬರುವುದು ನಿಶ್ಚಿತವಾಗಿದ್ದು, ಬಸವಕಲ್ಯಾಣದಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಅನುಭವ ಮಂಟಪ ಉದ್ಘಾಟನೆಯನ್ನು ನಾನೇ ನೆರವೇರಿಸಲಿದ್ದೇನೆ. ನಾನು ಮುಖ್ಯಮಂತ್ರಿ ಆಗಿದ್ದಾಗ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ರೂಪುರೇಷೆ ಸಿದ್ಧಪಡಿಸಿ ಬಜೆಟ್‌ನಲ್ಲಿ ಪೂರಕ ಅನುದಾನ ಮೀಸಲಿಟ್ಟಿದ್ದೆ. ಬಳಿಕ ಕಾಂಗ್ರೆಸ್‌ ಸರಕಾರ ಬಿದ್ದು ಹೋಯಿತು. ಪವಿತ್ರ ನೆಲದಲ್ಲಿ ಅನುಭವ ಮಂಟಪ ಉದ್ಘಾಟನೆ ಮಾಡಿದರೆ ನನಗೆ ಪುಣ್ಯ ಬರುತ್ತದೆ.
-ಸಿದ್ದರಾಮಯ್ಯ, ವಿಪಕ್ಷ ನಾಯಕ

ಬಸವಕಲ್ಯಾಣದಲ್ಲಿ ಸಿದ್ದರಾಮಯ್ಯ ಅವರು ಪ್ರಚಾರ ಮಾಡುತ್ತಿದ್ದು, ನಾವು ದೇವ ಮೂಲೆ ಮುಳಬಾಗಿಲಿನಿಂದ ಪ್ರಚಾರ ಮಾಡುತ್ತಿದ್ದೇವೆ. ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ, ಕೆ.ಎಚ್‌.ಮುನಿಯಪ್ಪ ಸಹ ನಮ್ಮ ಜತೆ ಬಂದಿದ್ದಾರೆ. ಕೋಲಾರದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ, ಎಲ್ಲರೂ ಒಗ್ಗಟಾಗಿದ್ದೇವೆ.
-ಡಿ.ಕೆ.ಶಿವಕುಮಾರ್‌ , ಕೆಪಿಸಿಸಿ ಅಧ್ಯಕ್ಷ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next