Advertisement

ಲವ್‌ ಜಿಹಾದ್‌ ಬಗ್ಗೆ ಮಾತನಾಡಿ ಎಂಬ ಹೇಳಿಕೆ: ಕಟೀಲು ಮಾತಿಗೆ ಕಾಂಗ್ರೆಸ್‌, ಜೆಡಿಎಸ್‌ ಟೀಕೆ

11:25 PM Jan 04, 2023 | Team Udayavani |

ಬೆಂಗಳೂರು: ರಸ್ತೆ-ಚರಂಡಿ ಸರಿಯಿಲ್ಲ ಎಂದು ಕೇಳಬೇಡಿ, ಲವ್‌ ಜಿಹಾದ್‌ ಬಗ್ಗೆ ಮಾತನಾಡಿ ಎಂಬ ನಳಿನ್‌ ಕುಮಾರ್‌ ಕಟೀಲು ಹೇಳಿಕೆಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾತನಾಡಿ, ಬಿಜೆಪಿಯವರಿಗೆ ಇಂತಹದ್ದು ಬಿಟ್ಟು ಬೇರೆ ಏನೂ ಅಜೆಂಡಾ ಇಲ್ಲ. ಅಭಿವೃದ್ಧಿ ಬಿಟ್ಟು ವಿವಾದಾತ್ಮಕ ವಿಚಾರಗಳೇ ಇವರಿಗೆ ಬೇಕು. ಗಾಂಧೀಜಿ ಕೊಂದ ಗೋಡ್ಸೆ ಸಂಸ್ಕೃತಿ ಅವರದು. ಹೀಗಾಗಿ, ಅವರಿಂದ ಇಂತಹುದು ಮಾತ್ರ ನಿರೀಕ್ಷಿಸಲು ಸಾಧ್ಯ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಭಾರತ ಜೋಡಿಸಲು ಯತ್ನಿಸುತ್ತದೆ. ಎಲ್ಲ ಸಮುದಾಯದವರು ಪ್ರೀತಿ ಪ್ರೇಮ, ವಿಶ್ವಾಸ, ಸ್ನೇಹದಿಂದ ಬದುಕಬೇಕು. ಶಿಕ್ಷಣ, ಉದ್ಯೋಗ, ಬಡತನ , ಅಭಿವೃದ್ದಿ ವಿಚಾರಗಳು ನಮ್ಮ ಆದ್ಯತೆ. ಬಿಜೆಪಿಯವರಿಗೆ ಇದ್ಯಾವುದೂ ಆದ್ಯತೆ ಅಲ್ಲ ಎಂದು ಕುಟುಕಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ಬಿಜೆಪಿಗೆ ಭಾವನಾತ್ಮಕ ಅಜೆಂಡಾಗಳೇ ಬಂಡವಾಳ. ಆವರಿಗೆ ಇದೇ ಬೇಕೇ ಹೊರತು ಅಭಿವೃದ್ಧಿಯ ಅಜೆಂಡಾ ಬೇಕಾಗಿಲ್ಲ. ಆದರೆ ಕಾಂಗ್ರೆಸ್‌ ಜನಸಾಮಾನ್ಯರ ಬದುಕಿನ ವಿಚಾರಕ್ಕೆ ಆದ್ಯತೆ ನೀಡುತ್ತದೆ. ಉದ್ಯೋಗವಿಲ್ಲದೆ, ಹಸಿವಿನಿಂದ ಬಳಲುತ್ತಿರುವವರ ಬದುಕು ಕಟ್ಟಿಕೊಡಲು ಪ್ರಯತ್ನಿಸುತ್ತದೆ ಎಂದು ಹೇಳಿದ್ದಾರೆ.

ನಳಿನ್‌ ಅವರು ತಮ್ಮ ಪಕ್ಷದ ಅಜೆಂಡಾ ಹೇಳಿದ್ದಾರೆ. ಬಿಜೆಪಿ ಅಜೆಂಡಾ ಜನರ ಮನಸ್ಸು ಕೆಡಿಸಿ ಸಮಾಜದ ಶಾಂತಿ ಕದಡಲು ಬಯಸುತ್ತದೆ. ಇದೇ ಕಾರಣಕ್ಕೆ ರಾಹುಲ್‌ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಪಾದಯಾತ್ರೆ ಮಾಡಿ ದೇಶದ ಜನರ ಮನಸ್ಸು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಜನಸಾಮಾನ್ಯರಲ್ಲಿ ಪರಸ್ಪರ ದ್ವೇಷ ಹುಟ್ಟು ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ. ನಳಿನ್‌ ಕುಮಾರ್‌ ಹಾಗೂ ಬಿಜೆಪಿ ನಾಯಕರ ಹೇಳಿಕೆಯನ್ನು ಇಡೀ ದೇಶ ಖಂಡಿಸುತ್ತದೆ. ಪಕ್ಷದ ಅಧ್ಯಕ್ಷನಾಗಿ ನಾನು ಕೂಡ ಖಂಡಿಸುತ್ತೇನೆ ಎಂದು ಹೇಳಿದ್ದಾರೆ.

Advertisement

ಸಿಎಂ ಇಬ್ರಾಹಿಂ ಖಂಡನೆ:

ಈ ಮಧ್ಯೆ, ನಳಿನ್‌ ಹೇಳಿಕೆ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಬಿಜೆಪಿ ಅಜೆಂಡಾ ಅಭಿವೃದ್ಧಿ ಅಲ್ಲ, ಪ್ರಚೋದನೆ ಎಂಬುದು ಅವರ ಹೇಳಿಕೆಯಿಂದ ಸಾಬೀತಾಗಿದೆ. ಚುನಾವಣೆಯಲ್ಲಿ ಇಂತಹವರನ್ನು ಜನತೆ ಒದ್ದು ಹೊರಗೆ ಕಳುಹಿಸಬೇಕು. ಲವ್‌ ಮಾಡದ ಇವರಿಗೆ ಯಾವುದೂ ಅರ್ಥವಾಗದು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next