Advertisement
ಇಲ್ಲಿನ ಪುರಸಭೆಗೆ ಮೇ 29ರಂದು ಚುನಾವಣೆ ನಡೆಯಲಿದೆ. ಎಲ್ಲೆಡೆ ಚುನಾವಣೆಯ ಕಾವುಬಿರುಸುಗೊಂಡಿದೆ. ನಾಮಪತ್ರ ಸಲ್ಲಿಕೆ ಕಾರ್ಯ ಈಗಾಗಲೇ ಮುಗಿದಿದೆ. ಆದರೆ, ರಾಜಕೀಯ ಪಕ್ಷಗಳ ಪೈಪೋಟಿ ನಡುವೆಯೂ ಬಂಡಾಯ ಅಭ್ಯರ್ಥಿಗಳು ಪಕ್ಷೇತರರಾಗಿ ಕಣಕ್ಕೆ ಇಳಿದ ಪರಿಣಾಮ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದೆ.
Related Articles
Advertisement
ಬಂಡಾಯ ಅಭ್ಯರ್ಥಿಗಳು: ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿ ಟಿಕೆಟ್ ವಂಚಿತರಾದ ಅಭ್ಯರ್ಥಿಗಳು ಬಂಡಾಯ ಅಭ್ಯರ್ಥಿಗಳಾಗಿ ಆಯಾ ಪಕ್ಷದ ವಿರುದ್ಧವೇ ಸೆಡ್ಡು ಹೊಡೆಯಲು ಸ್ಪರ್ಧಿಸಿದ್ದಾರೆ. 21ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಗೇಂದ್ರ ವಿರುದ್ಧ ಅವರ ಪಕ್ಷದ ಪುರಸಭಾ ಮಾಜಿ ಅಧ್ಯಕ್ಷೆ ನಳಿನಾ ಪಕ್ಷೇತರಾಗಿ ಕಣಕ್ಕೆ ಇಳಿದಿದ್ದಾರೆ. ಜೆಡಿಎಸ್ ಅಭ್ಯರ್ಥಿ ರಂಗಸ್ವಾಮಿ ವಿರುದ್ಧ ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಲ್.ಹರೀಶ್ ಪಕ್ಷೇತರಾಗಿ ಕಣಕ್ಕೆ ಇಳಿದಿದ್ದಾರೆ. ಕಾಂಗ್ರೆಸ್ ಮುಖಂಡ ರೆಹಮಾನ್ ಷರೀಷ್ ತಮ್ಮ ಮಗಳಿಗೆ ಟಿಕೆಟ್ ಸಿಗಲಿಲ್ಲ ಎಂದು 15, 16, 17 ವಾರ್ಡ್‌ಗಳಿಗೆ ಬಂಡಾಯ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದಾರೆ. 22ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಗುತಾ ರಂಗನಾಥ್ ವಿರುದ್ಧ ಸ್ಥಳೀಯ ಕಾಂಗ್ರೆಸ್ ಯುವ ಮುಖಂಡ ಮಲ್ಲಿಪಾಳ್ಯ ಶ್ರೀನಿವಾಸ್ ಸ್ಪರ್ಧಿಸಿದ್ದಾರೆ. 9ನೇ ವಾರ್ಡ್‌ನಿಂದ ಕಾಂಗ್ರೆಸ್ ಅಭ್ಯರ್ಥಿ ದಿನೇಶ್‌ಕುಮಾರ್ ವಿರುದ್ಧ ಅಮರ್‌ನಾಥ್ ಶೆಟ್ಟಿ ಸ್ಪರ್ಧಿಸಿದ್ದಾರೆ.
12ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೀಟಾ ಎದುರು ಪಕ್ಷೇತರಾಗಿ ಆರ್. ರೂಪಿಣಿ ಕಣಕ್ಕೆ ಇಳಿದಿದ್ದಾರೆ. ಕಾಂಗ್ರೆಸ್‌ನಿಂದ ಟಿಕೆಟ್ ವಂಚಿತ ಪುರಸಭಾ ಮಾಜಿ ಸದಸ್ಯ ಜಗದೀಶ್ ಜೆಡಿಎಸ್ ಅಭ್ಯರ್ಥಿಯಾಗಿ 6ನೇ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ಅರುಣ್‌ಕುಮಾರ್ ವಿರುದ್ಧ ಸ್ಪರ್ಧೆ ಒಡ್ಡಿದ್ದಾರೆ. 20ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿವಕುಮಾರ್ ವಿರುದ್ಧ ಪುರಸಭಾ ಮಾಜಿ ಅಧ್ಯಕ್ಷೆ ರಾಜೇಶ್ವರಿ ಪಕ್ಷೇತರಾಗಿ ಸ್ಪರ್ಧೆ ಮಾಡಿದ್ದಾರೆ. ಇದು ಪಕ್ಷದ ನಾಯಕರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.
ನಾಮಪತ್ರ ಹಿಂಪಡೆಯಲು ಇಂದು ಕೊನೆ: ನಾಮಪತ್ರ ಹಿಂಪಡೆಯಲು ಮೇ 20ರ ಸೋಮವಾರ ಕೊನೆ ದಿನವಾಗಿದೆ. ಬಂಡಾಯ ಅಭ್ಯರ್ಥಿಗಳ ಮನವೋಲಿಕೆಯಲ್ಲಿ ಶಾಸಕ ಡಾ.ಎಚ್.ಡಿ.ರಂಗನಾಥ್, ಜೆಡಿಎಸ್ ಹಿರಿಯ ಮುಖಂಡ, ಮಾಜಿ ಸಚಿವ ಡಿ.ನಾಗರಾಜಯ್ಯ ನಿರತರಾಗಿದ್ದಾರೆ. ಇದರಲ್ಲಿ ಅವರು ಎಷ್ಟರ ಮಟ್ಟಿಗೆ ಯಶಸ್ವಿ ಕಾಣುತ್ತಾರೋ ಕಾದುನೋಡ ಬೇಕಾಗಿದೆ. ಆದರೆ, ಇದರ ನಡುವೆ ಬಂಡಾಯ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರದಲ್ಲಿ ತೊಡಗಿರುವುದು ಪಕ್ಷದ ನಾಯಕರ ತಲೆ ಬಿಸಿ ಮಾಡಿದೆ.
ಎಡಗೈ ಜನಾಂಗ ಅಸಮಾಧಾನ: ಈ ಬಾರಿ 20, 22, 12ನೇ ವಾರ್ಡ್‌ಗಳು ಮೀಸಲು ಕ್ಷೇತ್ರವಾಗಿವೆ. ಆದರೆ,ಪ.ಜಾತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಎಡಗೈ (ಮಾದಿಗ) ಸಮುದಾಯ ಅಭ್ಯರ್ಥಿಗೆ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯಿಂದ ಟಿಕೆಟ್ ನೀಡದೇ ಈ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದುಸಮುದಾಯದ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.
ಹೀಗಾಗಿ ಈ ಮೂರು ಪಕ್ಷಗಳಿಗೆ ತಕ್ಕ ಪಾಠ ಕಲಿಸಲು ರಾಜಕೀಯ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕದೇ ಪಕ್ಷೇತರ ಅಭ್ಯರ್ಥಿಗಳಿಗೆ ಬೆಂಬಲಿಸುವಂತೆ ಎಡಗೈ ಜನಾಂಗದ ಮುಖಂಡರುಹೇಳುತ್ತಿದ್ದಾರೆ. ಮತ್ತೋಂದೆಡೆ ಈಗಾಗಲೇ ಸಮುದಾಯ ಹಲವು ಮುಖಂಡರು 22ನೇ ವಾರ್ಡ್ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿರುವ ಎಡಗೈ ಸಮುದಾಯದ ಅಭ್ಯರ್ಥಿ ಶ್ರೀನಿವಾಸ್ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.
●ಕೆ.ಎನ್.ಲೋಕೇಶ್