Advertisement

ಯಾದಗಿರಿಯಲ್ಲಿ ಸೊರಗುತ್ತಿದೆ ಕಾಂಗ್ರೆಸ್‌

05:57 PM Sep 06, 2021 | Team Udayavani |

ಯಾದಗಿರಿ: ಜಿಲ್ಲೆಯ ಕಾಂಗ್ರೆಸ್‌ನಲ್ಲಿದ್ದ ಘಟಾನುಘಟಿ ನಾಯಕರು ಒಬ್ಬೊಬ್ಬರಾಗಿ ಪಕ್ಷ ಬಿಟ್ಟು ತೆರಳುತ್ತಿದ್ದು, ಜಿಲ್ಲೆಯ ಕಾಂಗ್ರೆಸ್‌ ಈಗ ನಾಯಕರಿಲ್ಲದ ಹಡಗಿನಂತಾಗುತ್ತಿದೆ. ಒಂದು ಕಾಲದಲ್ಲಿ ಯಾದಗಿರಿ ಜಿಲ್ಲೆ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಕಾಂಗ್ರೆಸ್‌ನಿಂದ ಆರಿಸಿ ಬಂದ ಹಲವು ನಾಯಕರು ಸಚಿವರಾಗಿ ಅಧಿಕಾರ ಸ್ವೀಕರಿಸಿ ಕಾಂಗ್ರೆಸ್‌ ಪಕ್ಷ ಕಟ್ಟಿ ಬೆಳೆಸಿದ್ದರು. ಆದರೀಗ ಜಿಲ್ಲೆಯ ಕಾಂಗ್ರೆಸ್‌ ಪಕ್ಷಕ್ಕೆ ನಾಯಕರೇ ಇಲ್ಲದಂತಾಗಿದೆ.

Advertisement

ಹಿಂದೆ ಕಾಂಗ್ರೆಸ್‌ ಪಕ್ಷ ಜಿಲ್ಲೆಯಲ್ಲಿ 3 ಮತಕ್ಷೇತ್ರಗಳನ್ನು ವಶಪಡಿಸಿಕೊಂಡಿತ್ತು. ಕಳೆದ ವಿಧಾನಸಭೆಯಲ್ಲಿ ಅದು ಸುಳ್ಳಾಗಿ ಬರೀ 1ಮತಕ್ಷೇತ್ರ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಮುಂದಿನ ಚುನಾವಣೆಯಲ್ಲಿ 1ಮತಕ್ಷೇತ್ರವೂ ಕೈ ತಪ್ಪುವ ಲಕ್ಷಣಗಳು ಗೋಚರಿಸತೊಡಗಿವೆ. ಒಂದು ಕಾಲದಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ನಗರಸಭೆ, ಪುರಸಭೆ, ಎಪಿಎಂಸಿಯಾದಿಯಾಗಿ ಹಲವು ಸಂಘ-ಸಂಸ್ಥೆ, ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೆಸ್‌ ತನ್ನ ಅಧಿಪತ್ಯ ಮೆರೆದಿತ್ತು. ಬದಲಾದ ಕಾಲಘಟ್ಟದಲ್ಲಿ ಕಾಂಗ್ರೆಸ್‌ ತನ್ನ ಎಲ್ಲ ಕ್ಷೇತ್ರಗಳನ್ನು ಕಳೆದುಕೊಂಡಿದೆಯಲ್ಲದೇ ಕಾಂಗ್ರೆಸ್‌ ಕಚೇರಿಗಳಲ್ಲಿ ಅಧಿಕೃತ ಬೋರ್ಡ್‌ಗಳಲ್ಲಿ ಮಾತ್ರ ಕಾಂಗ್ರೆಸ್‌ ನಾಯಕರ ಹೆಸರುಗಳು ರಾರಾಜಿಸುತ್ತಿವೆ.

ಯಾದಗಿರಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ದಿನೇ ದಿನೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತ ಸಾಗಿದೆ. ಮಾಜಿ ಸಚಿವರಾದ ಡಾ|ಎ.ಬಿ.ಮಾಲಕರೆಡ್ಡಿ, ಬಾಬುರಾವ್‌ ಚಿಂಚನಸೂರ ಸೇರಿದಂತೆ ಹಲವು ನಾಯಕರು ಕಾಂಗ್ರೆಸ್‌ ತೊರೆದಿರುವುದು ಇದಕ್ಕೆ ಪುಷ್ಟೀಕರಿಸುವಂತಿದೆ. ಕಳೆದ 10 ವರ್ಷಗಳಿಂದ ಜಿಲ್ಲಾಧ್ಯಕ್ಷರನ್ನು ಕೂಡ ಬದಲಿಸುವಲ್ಲಿ ಕಾಂಗ್ರೆಸ್‌ ಮೀನಮೇಷ ಎಣಿಸುತ್ತಿರುವುದು ವಿಪರ್ಯಾಸವಾಗಿದೆ.

ದಶಕಗಳಿಂದ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಗುರುಮಠಕಲ್‌ಕ್ಷೇತ್ರ ಕಾಂಗ್ರೆಸ್‌ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಪ್ರತಿನಿಧಿಸುತ್ತಿರುವಷ್ಟು ವರ್ಷ ಅದು ಕಾಂಗ್ರೆಸ್‌ ಭದ್ರಕೋಟೆಯಾಗಿತ್ತು. ತದ ನಂತರ ಬಾಬುರಾವ್‌ ಚಿಂಚನಸೂರ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಎರಡು ಬಾರಿ ಆಯ್ಕೆಯಾಗಿ ಸಚಿವರು ಕೂಡ ಆಗಿದ್ದರು. ಕಳೆದ ಚುನಾವಣೆಯಲ್ಲಿ ನಡೆದ ಹಲವು ಘಟನೆಗಳಿಂದ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಗುರುಮಠಕಲ್‌ ಕ್ಷೇತ್ರದಲ್ಲಿ ಜೆಡಿಎಸ್‌ನ ಹೊಡೆತಕ್ಕೆ ತತ್ತರಿಸಿ ನಾಗನಗೌಡ ಕಂದಕೂರು ಶಾಸಕರಾಗಿ ಆಯ್ಕೆಯಾಗಿದ್ದರಿಂದ ಕಾಂಗ್ರೆಸ್‌ನ ಭದ್ರಕೋಟೆ ಛಿದ್ರವಾಯಿತು.

ಇನ್ನು ಯಾದಗಿರಿ ಮತಕ್ಷೇತ್ರವು ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಂತಿತ್ತು. ಕೆಲವು ಸಲ ಮಾತ್ರ ಒಂದೊಂದು ಸಾರಿ ಮಾತ್ರ ಬೇರೆ ಪಕ್ಷದವರು ಶಾಸಕರಾಗಿ ಆಯ್ಕೆಯಾಗಿದ್ದು ಬಿಟ್ಟರೆ ಹಲವು ಬಾರಿ ಕಾಂಗ್ರೆಸ್‌ನ ಹಿರಿಯ ನಾಯಕ ಡಾ|ಮಾಲಕರೆಡ್ಡಿ ಆಯ್ಕೆಯಾಗಿದ್ದರು ಇಲ್ಲಿಯೂ ಕೂಡ ಕಳೆದ ಚುನಾವಣೆಯಲ್ಲಿ ನಡೆದ ರಾಜಕೀಯ ನಡೆಯಲ್ಲಿ ಕಾಂಗ್ರೆಸ್‌ನ ಡಾ|ಮಾಲಕರೆಡ್ಡಿ ಸೋಲು ಕಂಡು ರಾಜಕೀಯ ನಿವೃತ್ತಿ ಘೋಷಣೆ ಮಾಡುವ ಹಂತಕ್ಕೆ ತಲುಪಿ ನಂತರ ಅವರು ಬಿಜೆಪಿ ಸೇರ್ಪಡೆಯಾಗಿರುವುದು ಕೂಡ ಇತಿಹಾಸವಾಗಿದೆ.

Advertisement

ಶಹಾಪುರಕ್ಕೆ ಶರಣಬಸಪ್ಪ ದರ್ಶನಾಪುರ, ಸುರಪುರಕ್ಕೆ ರಾಜಾ ವೆಂಕಟಪ್ಪ ನಾಯಕರೇ ಅನಿವಾರ್ಯ. ಸೋಲು ಗೆಲುವಿನ ಲೆಕ್ಕಾಚಾರಕ್ಕೆ ಹೋಲಿಸಿದರೆ ದರ್ಶನಾಪುರ ತಮ್ಮ ಬೆಂಬಲಿಗರೊಂದಿಗೆ ಪಕ್ಷ ಜೀವಂತವಿಡುವಲ್ಲಿ ಶ್ರಮಿಸುತ್ತಿದ್ದಾರೆ. ಆದರೆ ಸುರಪುರದಲ್ಲಿ ಹಾಲಿ ಶಾಸಕ ರಾಜುಗೌಡರ ದರ್ಬಾರ್‌ದಲ್ಲಿ ಕಾಂಗ್ರೆಸ್‌ ಸಂಘಟನಾತ್ಮಕವಾಗಿ ತೀರಾ ಹಿಂದುಳಿದಿದೆ. ಪಕ್ಷ ಸಂಘಟನೆ ವಿಷಯಕ್ಕೆ ಬಂದರೆ ಯಾದಗಿರಿ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯಕರ್ತರೇ ಪಕ್ಷ ಮುನ್ನಡೆಸುವಂತಾಗಿದ್ದು, ನಾಯಕರ್ಯಾರು ತಲೆ ಕೆಡಿಸಿಕೊಳ್ಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

*ಮಹೇಶ ಕಲಾಲ

Advertisement

Udayavani is now on Telegram. Click here to join our channel and stay updated with the latest news.

Next