ಹೊಸದಿಲ್ಲಿ : ‘1947ರಲ್ಲಿ ದೇಶ ವಿಭಜನೆಯ ವೇಳೆ ಕಾಂಗ್ರೆಸ್ ನಾಯಕರಲ್ಲಿ ದೂರದೃಷ್ಟಿ ಇಲ್ಲದಿದ್ದ ಕಾರಣ ಕರ್ತಾರ್‌ಪುರ ಪಾಕಿಸ್ಥಾನದಲ್ಲೇ ಉಳಿಯುವಂತಾಯಿತು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಜಸ್ಥಾನದ ಹನುಮಾನ್‌ಗಢದಲ್ಲಿ ಚುನಾವಣಾ ಭಾಷಣ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು ‘ಇಷ್ಟು ವರ್ಷವೂ ಪಾಕಿಸ್ಥಾನದಲ್ಲಿನ ಕರ್ತಾರ್‌ಪುರ ಸಾಹಿಬ್ ಗೆ ಭೇಟಿ ನೀಡುವ ಭಾರತೀಯ ಸಿಕ್ಖರಿಗಾಗಿ ಕಾಂಗ್ರೆಸ್ ಏಕೆ ಏನನ್ನೂ ಮಾಡಿಲ್ಲ’ ಎಂದು ಪ್ರಶ್ನಿಸಿದರು.
‘1947ರಲ್ಲಿ ದೇಶ ವಿಭಜನೆಯಾದಾಗ ಕರ್ತಾರ್‌ಪುರ ಭಾರತದಲ್ಲಿ ಇರಬೇಕೆಂಬುದನ್ನು ಕಾಂಗ್ರೆಸ್ ನಾಯಕರು ಏಕೆ ಮರೆತರು ? ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಯಾಕೆ ಏನನ್ನೂ ಮಾಡಿಲ್ಲ ? ಕರ್ತಾರ್‌ಪುರ ಕಾರಿಡಾರ್ ನಿರ್ಮಾಣಗೊಳ್ಳುತ್ತಿರುವುದರ ಕ್ರೆಡಿಟ್ ಮೋದಿಗೆ ಹೋಗುವುದಿಲ್ಲ; ಆ ಕ್ರೆಡಿಟ್ ನಿಮ್ಮ ಮತಗಳಿಗೆ ಸಲ್ಲುತ್ತದೆ’ ಎಂದು ಮೋದಿ ಹೇಳಿದರು.
‘ಕರ್ತಾರ್‌ಪುರ ಕಾರಿಡಾರ್ ನಿರ್ಮಾಣಕ್ಕೆ ಈಚೆಗಷ್ಟೇ ಒಪ್ಪಿಕೊಳ್ಳಲಾಯಿತು. ಇದರಿಂದಾಗಿ ಸಿಕ್ಖ್ ಯಾತ್ರಿಕರು ಆ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವದ ತಾಣಕ್ಕೆ ಭೇಟಿ ನೀಡುವುದು ಸಾಧ್ಯವಾಗಿದೆ. ಕರ್ತಾರ್‌ಪುರ ನಿಜಕ್ಕೂ ಭಾರತದಲ್ಲೇ ಉಳಿಯಬೇಕಿತ್ತು. ದೂರದೃಷ್ಟಿ ಇಲ್ಲದ ಕಾಂಗ್ರೆಸ್ ನಾಯಕರಿಂದಾದ ಪ್ರಮಾದದಿಂದಾಗಿ ಕರ್ತಾರ್‌ಪುರ ಪಾಕಿಸ್ಥಾನದಲ್ಲಿ ಉಳಿಯಿತು. ಕಾಂಗ್ರೆಸ್ ಎಸಗಿರುವ ತಪ್ಪುಗಳನ್ನು ಸರಿಪಡಿಸುವುದೇ ನನ್ನ ವಿಧಿಯಾಗಿದೆ’ ಎಂದು ಮೋದಿ ಹೇಳಿದರು.
‘ದೇಶವನ್ನು ಒಗ್ಗೂಡಿಸಿದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರು ಒಂದೊಮ್ಮೆ ದೇಶದ ಮೊದಲ ಪ್ರದಾನಿಯಾಗಿರುತ್ತಿದ್ದರೆ ರೈತರು ಮತ್ತು ಬಡವರ ಸ್ಥಿತಿ ಇಷ್ಟೊಂದು ದಯನೀಯವಾಗಿರುತ್ತಿರಲಿಲ್ಲ. ಒಂದು ಕುಟುಂಬದ ನಾಲ್ಕು ತಲೆಮಾರಿಗೆ ಕೃಷಿ ಎಂದರೇನು, ರೈತರ ಸಮಸ್ಯೆಗಳೇನು ಎಂಬುದರ ಅರಿವೇ ಇರಲಿಲ್ಲ’ ಎಂದು ಮೋದಿ ನೆಹರೂ-ಗಾಂಧಿ ಕುಟುಂಬದವನ್ನು ದೂರಿದರು.