ಮದ್ದೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಾಲ್ತಿಯಲ್ಲಿರುವ ಅಕ್ರಮ ಗಣಿಗಾರಿಕೆ ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವೇ ಹುಟ್ಟು ಹಾಕಿರುವ ಕರ್ಮಕಾಂಡ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ಸಂಸದ ನಳೀನ್‌ಕುಮಾರ್ ಕಟೀಲ್ ಆರೋಪಿಸಿದರು.
ಮದ್ದೂರು ಮಾರ್ಗವಾಗಿ ಚಾಮರಾಜ ನಗರ ಜಿಲ್ಲೆಗೆ ತೆರಳುವ ಮಾರ್ಗಮಧ್ಯೆ ಬಿಜೆಪಿ ಮುಖಂಡ ಮನ್‌ಮುಲ್ ನಿರ್ದೇ ಶಕ ಎಸ್.ಪಿ.ಸ್ವಾಮಿ ಮತ್ತು ಸ್ಥಳೀಯ ಬಿಜೆಪಿ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿರುವಂತೆಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಯಾವುದೇ ಅಕ್ರಮ ಗಣಿಗಾರಿಕೆಗೆ ಆದ್ಯತೆ ನೀಡಿಲ್ಲ. ಈಗಿನ ಅದ್ವಾನಗಳಿಗೆ 5 ವರ್ಷ ಅಧಿಕಾರದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ಮೂಲ ಕಾರಣ ಎಂದು ಟೀಕಿಸಿದರು.
ರಾಜಕೀಯ ಸ್ವಾರ್ಥಕ್ಕೆ ಹುನ್ನಾರ: ದೆಹಲಿ ಕೆಂಪುಕೋಟೆ ಬಳಿ ಮಂಗಳವಾರ ನಡೆದ ಅಹಿಂಸಾ ಕೃತ್ಯಗಳಿಗೆ ರೈತರ ಹೆಸರಿನಲ್ಲಿ ವಿರೋಧ ಪಕ್ಷಗಳು ನಡೆಸಿದ ಕುತಂತ್ರವೇ ಕಾರಣ. ಹಿಂದಿನಿಂದಲೂ ನಡೆಯುತ್ತಿದ್ದ ರೈತ ಹೋರಾಟವನ್ನು ಕೆಲ ರಾಜಕೀಯ ಪಕ್ಷಗಳು ಸ್ವಾರ್ಥಕ್ಕೆ ಬಳಸಿಕೊಳ್ಳುವ ಹುನ್ನಾರ ನಡೆಸಿದ್ದಾರೆ. ರೈತ ಹೋರಾಟದ ಮಧ್ಯೆ ಸಿಲುಕಿ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ರೈತರನ್ನು ಒಕ್ಕಲೆಬ್ಬಿಸುತ್ತಿದ್ದು, ಹಲವು ರೈತರು ದಾಂಧಲೆ ಹಾಗೂ ಸಂವಿಧಾನದ ವಿರುದ್ಧವಾಗಿ ನಡೆದುಕೊಂಡಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.
ಇದನ್ನೂ ಓದಿ:ಸವಾಲು ಎದುರಿಸಲು ಕನ್ನಡ ಪ್ರಜ್ಞೆ ಒಗ್ಗೂಡಿಸಿ
ರೈತರ ಹಿತ ಕಾಪಾಡಲು ಬದ್ಧ: ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉತ್ತಮವಾಗಿ ಕಾರ್ಯನಿರ್ವಹಿಸುವ ಜತೆಗೆ ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಕೈಗೊಂಡಿದ್ದಾರೆ. ಎರಡು ವರ್ಷಗಳ ಅವಧಿಯಲ್ಲಿ ಸಕ್ಕರೆ ಕಾರ್ಖಾನೆಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ಈ ಮೂಲಕ ಜಿಲ್ಲೆಯ ರೈತರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಮನ್‌ಮುಲ್ ನಿರ್ದೇಶಕ ಎಸ್. ಪಿ.ಸ್ವಾಮಿ, ಗ್ರಾಪಂ ಸದಸ್ಯ ಶಿವದಾಸ್ ಸತೀಶ್, ಮುಖಂಡರಾದ ಮನುಕುಮಾರ್, ಪುಟ್ಟರಾಜು, ರಾಮೇಗೌಡ, ಕುಮಾರ್, ಗೋವಿಂದು, ಚಂದ್ರು ಹಾಜರಿದ್ದರು