ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿಯವರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ಆದರೆ, ಹಿಂದೆ ಯಾರೆಲ್ಲ ದ್ವೇಷ ಕಾರಿದ್ದಾರೋ, ಈಗ ಅವರ್ಯಾರೂ ಉಳಿದಿಲ್ಲ. ದೇಶದಲ್ಲಿ ವಿರೋಧ ಪಕ್ಷದ ಕೆಲಸ ಮಾಡುವುದಕ್ಕೂ ಕಾಂಗ್ರೆಸ್ ಯೋಗ್ಯತೆ ಉಳಿಸಿಕೊಂಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ತಿಳಿಸಿದ್ದಾರೆ.
ಜಯನಗರದಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದಿರಾ ಗಾಂಧಿಯವರೇ ಬಿಜೆಪಿಯನ್ನು ಜೈಲಿಗೆ ಕಳುಹಿಸಲು ಯತ್ನಿಸಿ ವಿಫಲರಾಗಿದ್ದರು ಎಂಬುದನ್ನು ಹರಿಪ್ರಸಾದ್ ಮರೆಯಬಾರದು ಎಂದು ಹೇಳಿದರು.
ಕಾಂಗ್ರೆಸ್ -ಜೆಡಿಎಸ್‌ನ ಒಳಜಗಳ ಚಪ್ಪಲಿಗೆ ಹೋಲಿಕೆ ಮಾಡಿದ ಹೇಳಿಕೆಗೆ ಸಂಬಂಧಪಟ್ಟಂತೆ ಸ್ಪಷ್ಟನೆ ನೀಡಿದ ಅವರು, ನಾನು ಯಾವುದೇ ಪಕ್ಷದ ಹೆಸರು ಬಳಸಿಲ್ಲ. ನನಗೆ ದೇವೇಗೌಡರ ಮೇಲೆ ಅಪಾರ ಗೌರವವಿದೆ. ಎರಡು ಪಕ್ಷದಲ್ಲಿ ಟಿಕೆಟ್‌ಗಾಗಿ ಪೈಪೋಟಿ ನಡೆಯುತ್ತಿದೆ ಎಂಬ ಕಾರಣಕ್ಕೆ ಆ ರೀತಿ ಹೇಳಿದ್ದೆ. ಆ ವಿಚಾರವನ್ನು ನಾನು ಅಲ್ಲಿಗೆ ಬಿಟ್ಟಿದ್ದೇನೆ ಎಂದು ಹೇಳಿದರು.
ಜಯನಗರ ಹಾಗೂ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಪ್ಪ-ಮಗಳ ರಾಜಕಾರಣ ನಿಲ್ಲಿಸಬೇಕಿದೆ. ಇಲ್ಲಿ ಕಮಲ ಅರಳುವಂತೆ ಮಾಡಲು ಕಾರ್ಯಕರ್ತರು ಸಂಕಲ್ಪ ಮಾಡಬೇಕು ಎಂದು ಮನವಿ ಮಾಡಿದರು.
Related Articles
ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿಸುಬ್ರಹ್ಮಣ್ಯ, ಜಿಲ್ಲಾ ಅಧ್ಯಕ್ಷ ಎನ್.ಆರ್.ರಮೇಶ್, ಮಾಜಿ ಮಹಾಪೌರ ಎಸ್.ಕೆ.ನಟರಾಜ್, ಸ್ಥಳೀಯ ಮುಖಂಡರು ಭಾಗವಹಿಸಿದ್ದರು.
4 ಲಕ್ಷ ಸದಸ್ಯತ್ವ
ರಾಜ್ಯದ ನಾಲ್ಕು ಭಾಗಗಳಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸಿದ್ದು, ಒಂದೇ ದಿನ 4 ಲಕ್ಷ ಕಾರ್ಯಕರ್ತರ ನೋಂದಣಿಯಾಗಿದೆ. ರಾಜ್ಯದ 40 ಸಾವಿರ ಬೂತ್ ವ್ಯಾಪ್ತಿಯಲ್ಲಿ ಅಭಿಯಾನ ನಡೆದಿದೆ. 4 ಲಕ್ಷ ಮನೆಗಳಿಗೆ ಕಾರ್ಯಕರ್ತರು ತಲುಪಿದ್ದಾರೆ. 4 ಲಕ್ಷ ಕಾರ್ಯಕರ್ತರು ಹೊಸದಾಗಿ ಸೇರ್ಪಡೆಯಾಗಿದ್ದಾರೆಂದು ಬಿಜೆಪಿ ತಿಳಿಸಿದೆ.