Advertisement

ಕಾಂಗ್ರೆಸ್‌ ರೈತರು-ಬಡವರ ಪರ

04:37 PM Feb 12, 2018 | Team Udayavani |

ಗೊರೇಬಾಳ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಸರಕಾರ ರೈತರು ಮತ್ತು ಬಡವರ ಪರವಾಗಿ ಅತ್ಯುತ್ತಮ ಕಾರ್ಯ ಮಾಡಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ರವಿವಾರ ಸಂಜೆ ಸಿಂಧನೂರ ತಾಲೂಕಿನ ಶಾಂತಿನಗರ ಗ್ರಾಮದಲ್ಲಿ ನಡೆದ ಕಾಂಗ್ರೆಸ್‌ ಜನಾಶೀರ್ವಾದ ಯಾತ್ರೆಯ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಪ್ರಧಾನಮಂತ್ರಿ ಮೋದಿಯವರು ದೇಶದ ಜನರಿಗೆ ಬರೀ ಸುಳ್ಳು ಭರವಸೆಗಳನ್ನು ಕೊಡುತ್ತಿದ್ದಾರೆ. ನಾಲ್ಕು ವರ್ಷದಿಂದ ರೈತರ ಪರವಾಗಿ ಯಾವುದೇ ಯೋಜನೆಗಳನ್ನು ಜಾರಿಗೊಳಿಸದೆ ಅನ್ಯಾಯ ಮಾಡಿದ್ದಾರೆ. ಪ್ರಧಾನಿ ಮೋದಿ ನೋಟು ಅಮಾನ್ಯಿàಕರಣಗೊಳಿಸಿ ಹಾಗೂ ಜಿಎಸ್‌ಟಿ ಜಾರಿಗೊಳಿಸಿ ಕೂಲಿಕಾರರಿಗೆ ಹಾಗೂ ರೈತರಿಗೆ ನೆಮ್ಮದಿ ಇಲ್ಲದಂತೆ ಮಾಡಿದ್ದಾರೆ ಎಂದು ಟೀಕಿಸಿದರು. ರಾಜ್ಯದ ಬಿಜೆಪಿಯಲ್ಲೇ ಭ್ರಷ್ಟರನ್ನು ಇರಿಸಿಕೊಂಡು ಪ್ರಧಾನಿ ಮೋದಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ.

ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಅಧಿಕಾರಾವಧಿಯಲ್ಲಿ ಐದು ವರ್ಷದಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಕಂಡಿದೆ. ಬಿಜೆಪಿ ಸರಕಾರ ಕೋಟಿ-ಕೋಟಿ ಹಣ ಲೂಟಿ ಮಾಡಿದೆ. ಭ್ರಷ್ಟಾಚಾರ ಆರೋಪದಲ್ಲಿ ಮಂತ್ರಿಗಳು ಜೈಲಿಗೆ ಹೋದ ಯಾವುದಾದರೂ ಸರ್ಕಾರವಿದ್ದರೆ ಅದು ಬಿಜೆಪಿ ಮಾತ್ರ. ವಿಧಾನಸೌಧದಲ್ಲಿ ನಾಲ್ಕು ಜನ ಸಚಿವರು ಕುಳಿತು ಮೊಬೈಲ್‌ ನಲ್ಲಿ ಅಶ್ಲೀಲ ದೃಶ್ಯಾವಳಿಗಳನ್ನು ನೋಡಿ ರಾಜೀನಾಮೆ ಕೊಟ್ಟಂತ ಸರಕಾರ ಯಾವುದಾದರು ಇದ್ದರೆ ಅದು ಬಿಜೆಪಿ ಸರಕಾರ ಎಂದು ರಾಹುಲ್‌ ಹರಿಹಾಯ್ದರು.

ನಮ್ಮ ರಾಜ್ಯ ಕಾಂಗ್ರೆಸ್‌ ಸರಕಾರ ನಾಲ್ಕು ವರ್ಷ ಒಂಭತ್ತು ತಿಂಗಳ ಅಧಿಕಾರಾವಧಿ ಪೂರೈಸಿದೆ. ಚುನಾವಣೆಗೆ ಮುನ್ನ ನೀಡಿದ 165 ಭರವಸೆಗಳನ್ನು ಈಡೇರಿಸಿದೆ. ನವ ಕರ್ನಾಟಕ ನಿರ್ಮಾಣಕ್ಕೆ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಹೊಸ ಭಾಷ್ಯ ಬರೆದಿದೆ. ಈ ಅಭಿವೃದ್ಧಿ ಪರ್ವ ಮುಂದುವರಿಸಲು ರಾಜ್ಯದಲ್ಲಿ ಮತ್ತೇ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಜನತೆ ಕೋರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ಇಂಧನ ಸಚಿವ ಡಿ.ಕೆ.ಶಿವಕುಮಾರ, ಕೆಪಿಸಿಸಿ ಉತ್ತರ ಕರ್ನಾಟಕ ಕಾರ್ಯಾಧ್ಯಕ್ಷ ಎಸ್‌.ಆರ್‌.ಪಾಟೀಲ್‌ ಶಾಸಕ ಹಾಗೂ ಎಂಎಸ್‌ಐಎಲ್‌ ಅಧ್ಯಕ್ಷ ಹಂಪನಗೌಡ ಬಾದರ್ಲಿ, ಜಿಪಂ ಸದಸ್ಯ ಲಿಂಗರಾಜ ಪಾಟೀಲ್‌, ಗೋಪಿನೇಡು ಕೃಷ್ಣ, ವೀರೇಶಪ್ಪ ಸೂಗೂರು, ಶರಣಪ್ಪ ಹೂಗಾರ, ದಶರಥ ರಡ್ಡಿ ಸೇರಿ ಚುನಾಯಿತ ಪ್ರತಿನಿಧಿಗಳು, ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

ನಿರಾಶೆ: ಕಾರಟಗಿಯಿಂದ ಸಿಂಧನೂರ ಮಾರ್ಗವಾಗಿ ಹೊರಟ ಜನಾಶೀರ್ವಾದ ಯಾತ್ರೆ ಮಾರ್ಗ ಮಧ್ಯದ ಗ್ರಾಮಗಳಾದ ಗೊರೇಬಾಳ, ಗೊರೇಬಾಳ ಕ್ಯಾಂಪ್‌, ಶ್ರೀಪುರಂ ಜಂಕ್ಷನ್‌, ಹೊಸಳ್ಳಿ ಕ್ಯಾಂಪ್‌ ಮಾರ್ಗದುದ್ದಕ್ಕೂ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ನೋಡಲು ಜನ ನಿಂತಿದ್ದರು. ಆದರೆ ಬಸ್‌ ಗ್ಲಾಸ್‌ಗಳನ್ನು ಹಾಕಿಕೊಂಡಿದ್ದರಿಂದ ರಾಹುಲ್‌ ಗಾಂಧಿ ಯಾರಿಗೂ ಕಾಣಲಿಲ್ಲ. ಇದರಿಂದ ಗ್ರಾಮಸ್ಥರಿಗೆ ನಿರಾಶೆ ಆಯಿತು.

ವಾಹನ ಸಂಚಾರಕ್ಕೆ ತಡೆ: ಕಾರಟಗಿಯಿಂದ ಸಿಂಧನೂರಗೆ ರಾಹುಲ್‌ಗಾಂಧಿ ಬಸ್‌ನಲ್ಲಿ ಆಗಮಿಸಿದ್ದರಿಂದ ಮಾರ್ಗ ಮಧ್ಯ ಶ್ರೀಪುರಂ ಜಂಕ್ಷನ್‌ನಲ್ಲಿ, ಬಳ್ಳಾರಿ ಮತ್ತು ಸಿರಗುಪ್ಪ ಕಡೆಯಿಂದ ಬಂದ ವಾಹನಗಳನ್ನು ಪೊಲೀಸರು ತಡೆದರು. ಪರಿಣಾಮ ತಾಸುಗಟ್ಟಲೇ ವಾಹನಗಳು ನಿಂತಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next