ಬೆಂಗಳೂರು: ಸಮಾಜದ ಒಂದು ವರ್ಗದ ಮತಗಳನ್ನು ಗಳಿಸಲು ಕಾಂಗ್ರೆಸ್ ಸೇರಿ ಕೆಲವು ಪಕ್ಷಗಳು ನೂತನ ಸಂಸತ್ ಭವನ ಉದ್ಘಾಟನೆ ವಿಚಾರವನ್ನು ವಿವಾದ ಮಾಡುತ್ತಿದೆ ಎಂದು ಮಾಜಿ ಮುಖ್ಯಂಂತ್ರಿ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈಗ ಅವರು (ಕಾಂಗ್ರೆಸ್) ರಾಷ್ಟ್ರಪತಿ ಬಗ್ಗೆ ಹೆಚ್ಚಿನ ಗೌರವ ಮತ್ತು ಪ್ರೀತಿಯನ್ನು ತೋರಿಸುತ್ತಿದ್ದಾರೆ. ಹಾಗಿದ್ದವರು ಅವರ ವಿರುದ್ಧ ಏಕೆ ಅಭ್ಯರ್ಥಿ ಹಾಕಿದ್ದರು? ಈಗ ಆದಿವಾಸಿಗಳನ್ನು ಅವಮಾನಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಇದೆಲ್ಲವೂ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮತ್ತು ಸಮಾಜದ ಒಂದು ವರ್ಗದ ಮತಗಳನ್ನು ಗಳಿಸಲು ಮಾತ್ರ ಎಂದರು.
ಈ ಹಿಂದೆ ಛತ್ತೀಸಗಡದ ವಿಧಾನಸಭೆ ಕಟ್ಟಡದ ಶಿಲಾನ್ಯಾಸ ಹಾಕುವ ಸಂಧರ್ಭದಲ್ಲಿ ಇದ್ದಿದ್ದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ. ಆಗ ಗವರ್ನರ್ ಕರೆದಿರಲಿಲ್ಲ. ಕರ್ನಾಟಕದಲ್ಲೂ ವಿಕಾಸ ಸೌಧ ಉದ್ಘಾಟನೆಗೆ ರಾಜ್ಯಪಾಲರನ್ನು ಕಾಂಗ್ರೆಸ್ ಕರೆದಿರಲಿಲ್ಲ. ಯಾಕೆ ಈ ರಾಜಕೀಯ ಎಂದು ಪ್ರಶ್ನಿಸಿದರು.
ದೇವೇಗೌಡರ ಉಪಸ್ಥಿತಿ: ನವದೆಹಲಿಯಲ್ಲಿ ಭಾನುವಾರ ನಡೆಯಲಿರುವ ಹೊಸ ಸಂಸತ್ ಭವನದ ಉದ್ಘಾಟನೆಯಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಭಾಗಿಯಾಗಲಿದ್ದಾರೆ. ಕಾಂಗ್ರೆಸ್ ಸೇರಿದಂತೆ 19 ಪ್ರತಿ ಪಕ್ಷಗಳು ಕಾರ್ಯಕ್ರಮ ಬಹಿಷ್ಕರಿಸುವ ನಿರ್ಧಾರ ಮಾಡಿರುವಂತೆಯೇ ದೇವೇಗೌಡರು ಅಚ್ಚರಿಯ ನಿರ್ಧಾರ ಪ್ರಕಟಿಸಿದ್ದಾರೆ.
Related Articles
ಈ ಬಗ್ಗೆ ಗುರುವಾರ ಮಾತನಾಡಿದ ಅವರು, “ಕಾರ್ಯಕ್ರಮಕ್ಕೆ ಹೋಗದೆ ಇರಲು ಹೊಸ ಸಂಸತ್ ಭವನ ಬಿಜೆಪಿ ಅಥವಾ ಆರ್‌ಎಸ್‌ಎಸ್ ಕಚೇರಿಯೇ’ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಅಜೇಯ್ ರಾವ್ ‘ಯುದ್ಧಕಾಂಡ’ಕ್ಕೆ ಸುಪ್ರೀತಾ ಸತ್ಯನಾರಾಯಣ್ ನಾಯಕಿ
ಜೆಡಿಎಸ್ ಆತ್ಮಾವಲೋಕನ ಹಾಗೂ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಸಮಾರಂಭದಲ್ಲಿ ಭಾಗಿಯಾಗುವುದು ಸೂಕ್ತ ಎಂಬ ಸಲಹೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. “ನೂತನ ಸಂಸತ್ ಭವನ ದೇಶದ ಆಸ್ತಿ. ದೇಶದ ಜನರ ತೆರಿಗೆ ಹಣದಿಂದ ಭವ್ಯ ಕಟ್ಟಡ ನಿರ್ಮಾಣವಾಗಿದೆ. ಯಾರೊಬ್ಬರ ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿದ್ದಲ್ಲ. ಪ್ರಧಾನಿ ನರೇಂದ್ರ ಮೋದಿ ಆಹ್ವಾನ ನೀಡಿದ್ದಾರೆ. ದೇಶದ ಕಾರ್ಯಕ್ರಮ ಆದ್ದರಿಂದ ಪಾಲ್ಗೊಳ್ಳುತ್ತಿದ್ದೇನೆ. ಬಿಜೆಪಿ ವಿರೋಧಿಸಲು ನನಗೆ ಸಾಕಷ್ಟು ಕಾರಣಗಳಿವೆ. ಆದರೆ, ಈ ಕಾರ್ಯಕ್ರಮ ಬೇರೆ, ದೇಶದ ಮಾಜಿ ಪ್ರಧಾನಿಯಾಗಿ ಹೋಗುತ್ತಿದ್ದೇನೆ’ ಎಂದರು.